ಕರ್ನಾಟಕ

karnataka

ಉದ್ಯೋಗದ ಆಮಿಷ: ಆನ್​ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

By

Published : Jan 10, 2023, 11:01 PM IST

online-fraud-case-in-chikkamagaluru
ಆನ್​ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ()

ಮನೆಯಲ್ಲೇ ಕುಳಿತು ಉದ್ಯೋಗ ಮತ್ತು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆನ್​ಲೈನ್​ ಮೂಲಕ ಲಕ್ಷಾಂತರ ರೂ ವಂಚನೆ ಮಾಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು:ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಮತ್ತೊಬ್ಬರಿಗೆ ಮನೆಯಿಂದಲೇ ಉದ್ಯೋಗ ಮಾಡುವ ಅವಕಾಶ ಕೊಡಿಸುವುದಾಗಿ ನಂಬಿಸಿ ಆನ್​ಲೈನ್​ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಎರಡು ಪ್ರತ್ಯೇಕ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಣ ಕಳೆದುಕೊಂಡಿರುವರು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗದ ಆಮಿಷ: ವಿದೇಶದಲ್ಲಿ ಉದ್ಯೋಗದ ಅನ್‌ಲೈನ್‌ ಅಮಿಷಕ್ಕೆ ಮರುಳಾಗಿ 90 ಸಾವಿರ ಹಣ ಪಾವತಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಚನ್ನಹಡ್ಲು ಗ್ರಾಮದ ಎಸ್‌.ಕಾರ್ತಿಕ್ ಅವರು ಮೋಸ ಹೋಗಿದ್ದು, ಜಿಲ್ಲಾ ಸೈಬರ್, ಅರ್ಥಿಕ ಮತ್ತು ಮಾದಕ ಠಾಣೆಗೆ ದೂರು ನೀಡಿದ್ದಾರೆ. ವಿದೇಶದಲ್ಲಿ ಉದ್ಯೋಗದ ಜಾಹೀರಾತು ಇನ್​ಸ್ಟಾಗ್ರಾಂನಲ್ಲಿ ನೋಡಿ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಹಣ ಕಳೆದು ಕೊಂಡಿದ್ದಾರೆ. 2022ರ ಜುಲೈ 6 ರಂದು ವ್ಯಕ್ತಿಯೊಬ್ಬರು ಫೋನ್ ಮಾಡಿ ಕೆನಡಾದಲ್ಲಿ ಫುಡ್​ ಪ್ಯಾಕಿಂಗ್ ಉದ್ಯೋಗ ಇದೆ ಎಂದು ಹೇಳಿ ಆಧಾರ್ ಕಾರ್ಡ್‌, ಇತರ ಮಾಹಿತಿ ಪಡೆದುಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೋಂದಣಿ ಶುಲ್ಕ 1800, ಎಂಬೆಸಿ ಶುಲ್ಕ 12 ಸಾವಿರ, ಎಲ್‌ಎಂಐಎ ಶುಲ್ಕ 60 ಸಾವಿರ, ಬಯೊಮೆಟ್ರಿಕ್ ಶುಲ್ಕ 15 ಸಾವಿರ ಒಟ್ಟು 88,800 ಹಣವನ್ನು 2022 ನವೆಂಬರ್ 27ರವರೆಗೆ ಹಂತ ಹಂತವಾಗಿ ಆನ್‌ಲೈನ್‌ನಲ್ಲಿ (ಗೂಗಲ್ ಪೇ) ಮೂಲಕ ಜಮೆ ಮಾಡಿಸಿ ಕೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ. ಈಗ ಹಲವಾರು ಬಾರಿ ಫೋನ್ ಮಾಡಿದರೂ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ. ಉದ್ಯೋಗವನ್ನೂ ಕೊಡಿಸದೇ, ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಗೆ ‍1.67 ಲಕ್ಷ ಮೋಸ :ಮತ್ತೊಂದೆಡೆ,ಮಹಿಳೆಯೊಬ್ಬರಿಗೆ ಮನೆಯಿಂದಲೇ ಉದ್ಯೋಗ ಮಾಡುವ ಅವಕಾಶ ಕೊಡಿಸುವುದಾಗಿ, ಕಮಿಷನ್ ಆಮಿಷ ವೊಡ್ಡಿ ಆನ್‌ಲೈನ್ ವಂಚಕರು 1.67 ಲಕ್ಷ ಲಪಟಾಯಿಸಿದ್ದಾರೆ. ತರೀಕೆರೆಯ ಐ.ಎಂ.ಸ್ನೇಹಾ ಅವರು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನ್ ಲೈನ್ ನಂಬರ್‌ನಿಂದ ತನ್ನ ವಾಟ್ಸ್​​ಆಪ್‌ಗೆ ರವಾನೆಯಾಗಿದ್ದ 'ವರ್ಕ್ ಫ್ರೆಂ ಹೋಮ್ ಜಾಬ್' ಲಿಂಕ್‌ನ ವಿವರ ನಂಬಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವರ್ಕ್ ಅರ್ಡರ್ ಡಿಸ್ಪ್ಯಾಚ್​ಗೆ ಮೊದಲು ಕಮಿಷನ್ ( 500 ಕ್ಕೆ 50 ಹಾಗೂ 3000 ಕ್ಕೆ 300) ಕೊಟ್ಟರು. ನಂತರ ಟಾಸ್ಕ್‌ ಕಂಪ್ಲಿಟ್ ನಿಟ್ಟಿನಲ್ಲಿ 1.09 ಲಕ್ಷ ಬ್ಯಾಂಕ್ ಮೂಲಕ 58 ಸಾವಿರ ವರ್ಗಾವಣೆ ಮಾಡಿಸಿ ಕೊಂಡಿದ್ದಾರೆ. ನಂತರ ಕಮಿಷನ್ ಕೊಡದೇ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಎರಡು ಪ್ರಕರಣಗಳಲ್ಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲಾಗಿದ್ದು, ಯುಪಿಐನಿಂದ ಮಾಹಿತಿ ಪಡೆದು ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತರಾಗಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ಆನ್​ಲೈನ್​ನಲ್ಲಿ ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದರೂ ಕೂಡ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದು ಕೊಳ್ಳುತ್ತಿರುವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ.

ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಹೆಸರಲ್ಲಿ ವಂಚನೆ: ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲೂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಎಂದು ಬ್ಯಾಂಕಿನ ಹೆಸರಿನಲ್ಲಿ ಲಿಂಕ್ ಕಳಿಸಿದ್ದ ಸೈಬರ್ ಖದೀಮರು 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ ಹಾಕಿ ಖಾತೆಯಲ್ಲಿದ್ದ 1.93 ಲಕ್ಷ ಎಗರಿಸಿರುವ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಫೇಸ್​ಬುಕ್​ ಪ್ರೇಯಸಿಯಿಂದ 40 ಲಕ್ಷ ವಂಚನೆ: ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

ABOUT THE AUTHOR

...view details