ಕರ್ನಾಟಕ

karnataka

ಚಾಮರಾಜನಗರದಲ್ಲಿ ಪ್ರತ್ಯೇಕ ಘಟನೆ: ಕಾಡಾನೆ ದಾಳಿಗೆ ಯುವಕ ಸಾವು... ಹುಲಿ ದಾಳಿಗೆ ಮೂರು ಹಸು ಬಲಿ

By ETV Bharat Karnataka Team

Published : Sep 22, 2023, 8:50 PM IST

Updated : Sep 22, 2023, 10:47 PM IST

ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಹುಲಿ ಹಾಗು ಕಾಡಾನೆ ದಾಳಿಯ ಘಟನೆ ವರದಿಯಾಗಿದೆ.

ಹುಲಿ ದಾಳಿ
ಚಾಮರಾಜನಗರದಲ್ಲಿ ಪ್ರತ್ಯೇಕ ಘಟನೆ: ಕಾಡಾನೆ ದಾಳಿಗೆ ಯುವಕ ಸಾವು... ಹುಲಿ ದಾಳಿಗೆ ಮೂರು ಹಸು ಬಲಿ

ಚಾಮರಾಜನಗರ : ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ನಡೆದ ಹುಲಿ ಹಾಗೂಕಾಡಾನೆ ದಾಳಿಯಲ್ಲಿ ಯುವಕ ಬಲಿಯಾಗಿದ್ದು, ಮೂರು ಹಸುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಹನೂರು ತಾಲೂಕಿನ‌ ಬೊಂಬೆಗಲ್ಲು ಪೋಡು ಎಂಬಲ್ಲಿ ಕಾಡಾನೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದಾನೆ.

ಹನೂರು ತಾಲೂಕಿನ ಕಡಕಲಕಿಂಡಿ ಪೋಡಿನ ನಾಗೇಶ್ (20) ಮೃತಪಟ್ಟಿರುವ ಸೋಲಿಗ ಯುವಕ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ವ್ಯಾಪ್ತಿಯ ಬೈಲೂರು ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ಬಿಳಿಗಿರಿರಂಗನ ಬೆಟ್ಟದಿಂದ ಬರುತ್ತಿದ್ದಾಗ ಬೊಂಬೆಗಲ್ಲು ಪೋಡು ಸಮೀಪದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಯುವಕನನ್ನು ತುಳಿದು ಹಾಕಿದೆ. ಸ್ಥಳಕ್ಕೆ ಬೈಲೂರು ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಹುಲಿ ದಾಳಿಗೆ ಮೂರು ಹಸು ಸಾವು:ಮತ್ತೊಂದೆಡೆ,ಗುಂಡ್ಲುಪೇಟೆ ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಮೂರು ಹಸುಗಳನ್ನು ಬಲಿ ಪಡೆದ ಘಟನೆ ನಡೆದಿದೆ. ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬವರಿಗೆ ಸೇರಿದ ಹಸುಗಳು ಇದಾಗಿವೆ.

ಬೀಳು ಭೂಮಿಯಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹುಲಿಯೊಂದು ದಾಳಿ ಮಾಡಿ ಮೂರು‌ ಹಸುಗಳನ್ನು ಕೊಂದು ಹಾಕಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ದಾಳಿ ಪ್ರಕರಣ ನಡೆದಿದೆ. ಎಸಿಎಫ್ ರವೀಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪರಿಹಾರದ ಭರವಸೆ ನೀಡಿದ್ದಾರೆ.‌ ಹುಲಿ ಸೆರೆಗಾಗಿ ಬೋನನ್ನು ಕೂಡ ಇರಿಸಲಾಗಿದೆ.

ದನಗಾಹಿ ಮೇಲೆ ಹುಲಿ ದಾಳಿ : ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ದನಗಾಹಿ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶುಕ್ರವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಮೇಶ (40) ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗರಹೊಳೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನಲ್ಲಿ ಗ್ರಾಮದ ಹೊರವಲಯದಲ್ಲಿ ದನ ಮೇಯಿಸಲು ಹೋಗಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಇದೇ ವೇಳೆ ಹಸುಗಳನ್ನು ರಕ್ಷಿಸಲು ಹೋದ ರೈತನ ಮೇಲೆರಗಿದೆ. ರಮೇಶ್ ಜೋರಾಗಿ ಕಿರುಚಾಡಿದಾಗ, ಅಕ್ಕಪಕ್ಕದಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳು ಹೋಗಿ ಹುಲಿ ಓಡಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಮಲಗಿದ್ದ ರೈತನ ಮೇಲೆ ಚಿರತೆ ದಾಳಿ : ಇತ್ತೀಚೆಗೆ ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಚಾಮರಾಜನಗರದಲ್ಲೇ ನಡೆದಿತ್ತು. ಘಟನೆಯಲ್ಲಿ ನಂಜಪ್ಪ ಎಂಬ ರೈತ ಚಿರತೆ ದಾಳಿಗೊಳಗಾಗಿ ಗಾಯಗೊಂಡಿದ್ದರು. ಜೋಳದ ಫಸಲನ್ನು ಕಾಯಲು ಜಮೀನಿನಲ್ಲಿ ಮೊಬೈಲ್ ಹಿಡಿದು ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ಕೂಡಲೇ, ಎಚ್ಚೆತ್ತ ನಂಜಪ್ಪ ಕೋಲು ಹಿಡಿದು ಕಿರುಚಿದಾಗ ಚಿರತೆ ಪರಾರಿಯಾಗಿತ್ತು.

ಇದನ್ನೂ ಓದಿ :ಮೈಸೂರು: ದನಗಾಹಿ ಮೇಲೆ ಹುಲಿ ದಾಳಿ

Last Updated : Sep 22, 2023, 10:47 PM IST

ABOUT THE AUTHOR

...view details