ಚಾಮರಾಜನಗರ :ತಾಲೂಕಿನ ಹೆಗ್ಗೋಠಾರ ಗ್ರಾಮದ ಐದು ಮಂದಿ ಪ್ರತಿವರ್ಷ ಶಿವರಾತ್ರಿ ದಿನದಂದು ಬರೋಬ್ಬರಿ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.
ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದ ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ 5 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 5 ಕುಟುಂಬಗಳಿಂದ ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ, ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆ ಮೂಲಕ ಗ್ರಾಮ ಸೇರುತ್ತಾರೆ.
ಲಿಂಗಾಭಿಷೇಕಕ್ಕೆ 35 ಕಿ.ಮೀ ದೂರದಿಂದ ನೀರು ತರುವ ಗ್ರಾಮಸ್ಥರು ಇದನ್ನೂ ಓದಿ: ಕೋಟಿಲಿಂಗೇಶ್ವರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ
ನಾಲ್ಕು ಬಿಂದಿಗೆಗಳ ನೀರು ಸಿದ್ಧರಾಮೇಶ್ವರನ ಅಭಿಷೇಕಕ್ಕೆ, 1 ಬಿಂದಿಗೆ ನೀರು ಇನ್ನಿತರ ದೇವರ ಅಭಿಷೇಕಕ್ಕೆ ಹಾಗೂ ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.
ಈ ಕುರಿತು ಕಾಲ್ನಡಿಗೆಯಲ್ಲಿ ಗಂಗೆ ತರಲು ತೆರಳಿದ್ದ ಶಿವಮಲ್ಲಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ಶತಮಾನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ನಮ್ಮ ಕುಟುಂಬಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ. ರಾತ್ರಿ ಭಜನೆ, ವಿಶೇಷ ಪೂಜೆ, ಜಾಗರಣೆ ನಡೆಯಲಿದೆ ಎಂದರು.
ಕಪಿಲ ನದಿಯಿಂದ ನೀರು ತರಲು ಹೋಗುವವರು ದಾರಿ ಮಧ್ಯೆ ಎಲ್ಲಿ ಕೆರೆ ಸಿಗುತ್ತದೋ ಅಲ್ಲಿ ಮಾತ್ರ ಬಿಂದಿಗೆ ಇಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ಎದ್ದು ನದಿ ತಟಕ್ಕೆ ತೆರಳಿ ಮತ್ತೆ ಅಲ್ಲಿ ಹೊಸ ಬಟ್ಟೆ ತೊಟ್ಟುಕೊಂಡು ನೀರು ಹೊತ್ತು ತರುತ್ತಾರೆ. ನೀರು ತರಲು ಹೋದವರು ಡಾಂಬಾರು ರಸ್ತೆಯಲ್ಲಿ ಬರಿಗಾಲಲ್ಲಿ 35 ಕಿ.ಮೀ ನಡೆದರೂ ಸುಸ್ತು, ಕಾಲು ನೋವಾಗಲಿ ಆಗುವುದಿಲ್ಲವಂತೆ.