ಕರ್ನಾಟಕ

karnataka

ಕಾಡು ಪ್ರಾಣಿಗಳ ಭಯದಿಂದ ಕಾರಲ್ಲೇ ಅವಿತಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

By

Published : Sep 23, 2020, 3:26 PM IST

ಕೆ.ಗುಡಿಗೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರು ಹಳ್ಳದಲ್ಲಿ ಸಿಕ್ಕಿಕೊಂಡಿದ್ದು, ಇದನ್ನು ಗಮನಿಸಿ ಡಿಸಿಐಬಿ ಪಿಐ ಮಹಾದೇವಶೆಟ್ಟಿ ಮತ್ತು ತಂಡ ಮೂವರನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Biligiri Rangana Hill
Biligiri Rangana Hill

ಚಾಮರಾಜನಗರ: ಕಾಡಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಹೋಟೆಲ್ ತಲುಪಿಸಿದ ಘಟನೆ ಕಳೆದ 16 ರಂದು ಚಾಮರಾಜನಗರ ತಾಲೂಕಿನ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬರುತ್ತಿದ್ದ ಕರಿಕಲ್ಲು ಉದ್ಯಮಿ ರೂಪೇಶ್ ಕುಮಾರ್ ರೆಡ್ಡಿ, ಅವರ ಮಗ ತೇಜಶ್ವರ್ ಹಾಗೂ ಚಾಲಕ ಕೇಶವ್ ಎಂಬುವರನ್ನು ಡಿಸಿಐಬಿ ಪಿಐ ಮಹಾದೇವಶೆಟ್ಟಿ ಮತ್ತು ತಂಡ ರಕ್ಷಿಸಿ ಮೂವರನ್ನು ಚಾಮರಾಜನಗರದ ಹೋಟೆಲ್ ಒಂದಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

Biligiri Rangana Hill

ಏನಿದು ಘಟನೆ?: 17 ವರ್ಷದ ಮಗನೊಂದಿಗೆ ಪ್ರವಾಸಕ್ಕೆ ಬಂದಿದ್ದ ರೂಪೇಶ್ ಬಿ.ಆರ್. ಅವರು ಕೆ.ಗುಡಿಗೆ ತೆರಳುತ್ತಿರುವಾಗ ಜಿಂಕೆಯೊಂದನ್ನು ನೋಡಲು ಕಾರನ್ನು ರಿವರ್ಸ್ ತೆಗೆದಿದ್ದೇ ತಡ ಕಾರು ಹಳ್ಳದಲ್ಲಿ ಸಿಕ್ಕಿಕೊಂಡಿದೆ. ಸಂಜೆ 7.45 ರಿಂದ ಕಾರು ಹಳ್ಳಕ್ಕೆ ಇಳಿದಿದ್ದು, ಎಷ್ಟೇ ಪ್ರಯತ್ನಿಸಿದರೂ ಕಾರು ಮುಂದಕ್ಕೆ ಬಾರದಿದ್ದರಿಂದ ಕಾರ್ ಇಂಜಿನ್ ಆಫ್ ಮಾಡಿ ಬರೋಬ್ಬರಿ ಆರೂವರೆ ಗಂಟೆ ಕಾರಿನಲ್ಲೇ ಕಳೆದಿದ್ದಾರೆ.

ಮಧ್ಯರಾತ್ರಿ 2.15 ಸುಮಾರಿಗೆ ಗಾಂಜಾ ಕೇಸ್ ಸಂಬಂಧ ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಡಿಸಿಐಬಿ ಪಿ.ಐ.ಮಹಾದೇವಶೆಟ್ಟಿ ಅವರು, ಕಾರು ನಿಂತಿದ್ದನ್ನು ಗಮನಿಸಿ ಕಾಡುಪ್ರಾಣಿಗಳ ಭಯದಿಂದ ಸೀಟಿನಡಿ ಅವಿತು ಕುಳಿತಿದ್ದ ಮೂವರನ್ನು ಎಬ್ಬಿಸಿ ಚಾಮರಾಜನಗರದ ಹೋಟೆಲ್ ಗೆ ತಲುಪಿಸಿದ್ದಾರೆ. ನಂತರ ಮಾರನೆ ದಿನ ಬೆಳಗ್ಗೆ ಕಾರನ್ನು ಮೇಲೆತ್ತಲಾಗಿದೆ.

ಈ ಕುರಿತು ಈಟಿವಿ ಭಾರತದೊಂದಿಗೆ ರೂಪೇಶ್ ಮಾತನಾಡಿ, ನನ್ನ ಜೀವ ಮುಗಿಯಿತು ಎಂದುಕೊಂಡಿದ್ದೆ, ಅದರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರು ಬಂದು ನಮ್ಮನ್ನು ಕಾಪಾಡಿದರು. ಇನ್ನೂ ಕೂಡ ನಾವು ಆ ಶಾಕ್ ನಿಂದ ಹೊರಬಂದಿಲ್ಲ ಎಂದರು.

ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಜೆ 6 ರ ಬಳಿಕ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ 6 ಗಂಟೆ ಒಳಗೆ ಚೆಕ್ ಪೋಸ್ಟ್ ಕೂಡ ದಾಟಿರಬೇಕು‌‌‌. ಈ ವೇಳೆ ರಸ್ತೆಯಲ್ಲಿ ಯಾರಿದ್ದಾರೆ?, ಏನು ಮಾಡುತ್ತಿದ್ದಾರೆ? ಎಂದು ತನಿಖೆ ಮಾಡಬೇಕಿದ್ದ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ಘಟನೆ ನಿದರ್ಶನವಾಗಿದೆ.

ABOUT THE AUTHOR

...view details