ಕರ್ನಾಟಕ

karnataka

ರಾಷ್ಟ್ರಪತಿ ಭೇಟಿ ಹಿನ್ನೆಲೆ ಹಳೆ ರಸ್ತೆಗೆ ಹೊಸ ಬಣ್ಣ..PWD ವಿರುದ್ಧ ಸಾರ್ವಜನಿಕರ ಆಕ್ರೋಶ

By

Published : Oct 2, 2021, 1:36 PM IST

ಜಿಲ್ಲೆಗೆ ರಾಷ್ಟ್ರಪತಿ ಆಗಮನ ಹಿನ್ನೆಲೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಅಧಿಕಾರಿಗಳು ಮುಂದಾಗಿದ್ದು, ಹಳೆ ರಸ್ತೆಗೆ ಹೊಸ ಬಣ್ಣ ಬಳಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ತಲೆಕೆಡಿಸಿಕೊಳ್ಳದ ಲೋಕೋಪಯೋಗಿ ಇಲಾಖೆ ಇದೀಗ ದಿಢೀರ್ ಕಾಮಗಾರಿ ಕೈಗೆತ್ತಿಕೊಂಡಿದೆ.

Public outrage over Public Works Department action on road construction
ಲೋಕೋಪಯೋಗಿ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ‌ ನೀಡುತ್ತಿರುವ ಹಿನ್ನೆಲೆ ರಸ್ತೆಗಳಿಗೆ ಡಾಂಬರೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ, ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ತಿರುಗಿ ನೋಡದ ಅಧಿಕಾರಿಗಳು ದಿಢೀರ್ ಕಾರ್ಯಚರಣೆಗೆ ಇಳಿದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಲೋಕೋಪಯೋಗಿ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಳೆದೆರಡು ದಿನಗಳಿಂದ ಜಿಲ್ಲಾ ಕೇಂದ್ರದಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತಿದೆ. ಹೀಗಿದ್ದರೂ ಗುಂಡಿಯಲ್ಲಿ ನೀರು ನಿಂತಿದ್ದರೂ ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಗಿರುವ ರಸ್ತೆಗಳ ಮೇಲೆ ಮತ್ತೆ ಡಾಂಬರೀಕರಣ ಮಾಡಿ ಬಣ್ಣ ಬಳಿಯುತ್ತಿರುವುದಕ್ಕೆ ಕೆಲ ಸ್ಥಳೀಯರು ಕಿಡಿಕಾರಿದ್ದು, ಗಣ್ಯ ವ್ಯಕ್ತಿಗಳು ಬಂದರೆ ಮಾತ್ರ ರಸ್ತೆಗೆ ಸಿಂಗಾರ ಮಾಡುವ ಅಧಿಕಾರಿಗಳು ಗುಂಡಿ ಬಿದ್ದು ವರ್ಷಗಳಾದರೂ ಇತ್ತ ತಿರುಗಿ‌ ನೋಡಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಅ.7 ರಂದು‌ 450 ಹಾಸಿಗೆ ಸಾಮರ್ಥ್ಯದ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆಗಾಗಿ ರಾಷ್ಟ್ರಪತಿಗಳು ಆಗಮಿಸುತ್ತಿದ್ದು, ಈ ಹಿನ್ನೆಲೆ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಹೀಗಾಗಿ ರಸ್ತೆ ಮೇಲಿದ್ದ ಗುಂಡಿ ಮುಚ್ಚು ಕಾರ್ಯದಲ್ಲಿ ಅಧಿಕಾರಿಗಳಿದ್ದು, ಚಾಮರಾಜನಗರದ ಎರಡು ರಸ್ತೆಗಳು ಗುಂಡಿ ಮುಕ್ತಗೊಂಡಿದ್ದರೂ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ.

ಅಲ್ಲದೇ ಕೇವಲ ತೋರ್ಪಡಿಕೆಗೆ ರಸ್ತೆ ಕಾಮಗಾರಿ ನಡೆಸದೆ ಮುಂದಿನ ಹಲವು ವರ್ಷಗಳ ಕಾಲ ಬಾಳಿಕೆ ಬರುವಂತ ಕಾಮಗಾರಿಗೆ ಇಲಾಖೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details