ಕರ್ನಾಟಕ

karnataka

ಹೈಸ್ಕೂಲ್, ಪಿಯು ತರಗತಿ ಆರಂಭಿಸಲು ಒಪ್ಪಿಗೆ.. ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸೂಚನೆ

By

Published : Jan 25, 2021, 9:35 PM IST

ಜಲ ಜೀವನ್ ಮಿಷನ್ ಯೋಜನೆಯಡಿ ಚಾಮರಾಜನಗರ ಜಿಲ್ಲಾದ್ಯಂತ 165 ಕೋಟಿ.ರೂ ವೆಚ್ಚದಲ್ಲಿ ಜಿಲ್ಲೆಯ 424 ಗ್ರಾಮಗಳ 1.46 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲು ಈ ಯೋಜನೆ ರೂಪಿಸಿದೆ.

KDP meeting
ಸಭೆ

ಚಾಮರಾಜನಗರ: ಬರೋಬ್ಬರಿ 11 ತಿಂಗಳ ಬಳಿಕ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ‌ ವಿರುದ್ಧ ಅಧ್ಯಕ್ಷೆ ಅಶ್ವಿನಿ‌ ವಿಶ್ವನಾಥ್ ಗರಂ‌ ಆದರೆ, ಗೈರಾಗಿದ್ದ ಅಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡರು.

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಮ್) ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗಗಳ ಜನರಿಗೆ ಮನೆಮನೆಗೆ ಕೊಳಾಯಿ ಸಂಪರ್ಕ ಕಲ್ಪಿಸುವ ಯೋಜನೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ತಮಗೆ ಮಾಹಿತಿ ಇಲ್ಲ. ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಸಭೆಗಳನ್ನು ಮಾಡಿ, ಜನರ ಅಭಿಪ್ರಾಯವನ್ನು ಕೇಳದೆ ಜಿ‌ಪಂ ಸಿಇಒ ಸಮರ್ಪಕವಾಗಿ ಯೋಜನೆ ರೂಪಿಸುವಲ್ಲಿ ವಿಫಲರಾಗಿದ್ದಾರೆಂದು ಎಂ. ಅಶ್ವಿನಿ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಜಲ ಜೀವನ್ ಮಿಷನ್ ಯೋಜನೆಯಡಿ ಚಾಮರಾಜನಗರ ಜಿಲ್ಲಾದ್ಯಂತ 165 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ 424 ಗ್ರಾಮಗಳ 1.46 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲು ಈ ಯೋಜನೆ ರೂಪಿಸಿದೆ. ಸ್ಥಳೀಯವಾಗಿ ಗ್ರಾಮ ಪಂಚಾಯತಿ ಮೂಲಕ ಕ್ರಿಯಾ ಯೋಜನೆ ರೂಪಿಸಬೇಕು. ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸುವ ಮನೆ ಮಾಲೀಕರ ಒಪ್ಪಿಗೆ ಪಡೆದು ಸಮರ್ಪಕವಾಗಿ ಈ ಯೋಜನೆಯನ್ನು‌ ಅನುಷ್ಠಾನಗೊಳಿಸಬೇಕು. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತರಬೇಕು. ಆದರೆ ಜಿ.ಪಂ ಸಿಇಒ ಅವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಕಿಡಿಕಾರಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಶಾಸಕ ಎನ್‌. ಮಹೇಶ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಇ ಅವರಿಗೆ ಜಿ.ಪಂ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬಳಿ ಚರ್ಚಿಸಿ ರೂಪುರೇಷೆ ಕೈಗೊಳ್ಳುವಂತೆ ಸೂಚಿಸಿದರು.

ಸಚಿವ ಎಸ್‌. ಸುರೇಶ್ ಕುಮಾರ್ ಅವರು ಈ ಮಧ್ಯ ಪ್ರವೇಶಿಸಿ ಜಿ.ಪಂ ಸಿಇಒ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಇ ಅವರು ಜಿ‌.ಪಂ ಅಧ್ಯಕ್ಷರ ಜೊತೆ ಸಭೆ ನಡೆಸಿ ಸಮರ್ಪಕವಾಗಿ ಅನುಷ್ಠಾನವಾಗುವಂತೆ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ತಾಕೀತು ಮಾಡಿದರು.

ಇನ್ನು, 11 ತಿಂಗಳ‌ ಬಳಿಕ ನಡೆಯುತ್ತಿರುವ ಸಭೆಗೂ ಗೈರಾದ ಹಲವು‌ ಅಧಿಕಾರಿಗಳನ್ನು ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಪದೇಪದೇ ಗೈರಾಗುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಡಿಸಿ ಡಾ‌.ಎಂ.ಆರ್. ರವಿಗೆ ತಾಕೀತು ಮಾಡಿದರು. ಇದೇ ವೇಳೆ, ಅಭಿವೃದ್ಧಿ ನಿಗಮಗಳ‌ ಅಧಿಕಾರಿಗಳ ಸಭೆ ಕರೆದು ಆಗು-ಹೋಗುಗಳ ಬಗ್ಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಜಿಪಂ‌ ಸಿಇಒ‌ ಅವರಿಗೆ ಸುರೇಶ್ ಕುಮಾರ್ ಸೂಚಿಸಿದರು.

ತರಗತಿ ಆರಂಭಕ್ಕೆ ಜನಪ್ರತಿನಿಧಿಗಳ ಒಪ್ಪಿಗೆ:

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸಚಿವರು ರಾಜ್ಯಾದ್ಯಂತ 8, 9 ಮತ್ತು ಪ್ರಥಮ ಪಿಯುಸಿ ಆರಂಭಿಸುವಂತೆ ಪೋಷಕರು ಒತ್ತಾಯಿಸುತ್ತಿದ್ದು, ಜೊತೆಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಆಂದೋಲನ ನಡೆಸುವುದಾಗಿ ಹೇಳುತ್ತಿದ್ದಾರೆ. ಜಿಲ್ಲೆಯ ಹಿರಿಯ ಶಾಸಕರಾದ ತಾವು ಅಭಿಪ್ರಾಯ ತಿಳಿಸುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಆರ್. ನರೇಂದ್ರ, ಎಸ್. ನಿರಂಜನಕುಮಾರ್ ಹಾಗೂ ಜಿ.ಪಂ. ಅಧ್ಯಕ್ಷೆ ಅಶ್ವಿನಿ ಆವರನ್ನು ಕೇಳಿದರು.

ಎಲ್ಲಾ ಜನಪ್ರತಿನಿಧಿಗಳು ಹೈಸ್ಕೂಲ್ ಹಾಗೂ ಪ್ರಥಮ ಪಿಯುಸಿ ಆರಂಭಿಸುವುದು ಒಳ್ಳೆಯದು, ಮುಂದಿನ ಎಸ್​ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಗಳಿಗೆ ಇವೇ ಬುನಾದಿ ಆಗಿರುವುದರಿಂದ ಆರಂಭಿಸುವುದು ಒಳ್ಳೆಯದು ಎಂದು ಒಪ್ಪಿಗೆ ನೀಡಿದರು. ಆರೋಗ್ಯ ಇಲಾಖೆ, ಪೋಷಕರು ಸಹಕರಿಸುವಂತೆ ಮನವಿ ಮಾಡಿದರು. ವಸತಿ ನಿಲಯಗಳನ್ನು ಬೇಗ ಆರಂಭಿಸಬೇಕು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಸುಗಮ ಬಸ್ ಸಂಚಾರ, ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ABOUT THE AUTHOR

...view details