ಕರ್ನಾಟಕ

karnataka

ನಾನು ಸುಮ್ಮನೆ ಕೂರುವವನಲ್ಲ, ಸಿದ್ದು, ಡಿಕೆಶಿ ಟೀಕೆಗಳಿಗೆ ಅಧಿವೇಶನದಲ್ಲಿ ಉತ್ತರ: ಯಡಿಯೂರಪ್ಪ

By

Published : Dec 5, 2021, 7:25 PM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್​​​ವೈ ಕಿಡಿಕಾರಿದರು.

ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

ಚಾಮರಾಜನಗರ:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸುಮ್ಮನೆ ಕೂರುವವನು ನಾನಲ್ಲ, ವಿಧಾನ ಪರಿಷತ್​ ಚುನಾವಣೆಯಲ್ಲಿ 15-17 ಸ್ಥಾನ ಗೆಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸದ ನುಡಿ ಜೊತೆಗೆ ಕಾಂಗ್ರೆಸ್​ ನಾಯಕರಿಗೆ ಟಾಂಗ್​ ಕೊಟ್ಟರು.

ಸಂತೇಮರಹಳ್ಳಿಯಲ್ಲಿ ರಘು ಕೌಟಿಲ್ಯ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಬೆಳಗಾವಿ ಅಧಿವೇಶನದಲ್ಲೇ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ರಘು ಕೌಟಿಲ್ಯ ಪರ ಮತಯಾಚಿಸಿದ ಮಾಜಿ ಸಿಎಂ ಯಡಿಯೂರಪ್ಪ

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗಿದ್ದು, ಕರ್ನಾಟಕದಲ್ಲಷ್ಟೇ ಉಸಿರಾಡುತ್ತಿದೆ. ವೆಂಕ, ನಾಣಿ, ಸುಬ್ಬ ಎಂಬಂತೆ ಲೋಕಸಭೆಲ್ಲಿ ಕಾಂಗ್ರೆಸ್ 46 ಸ್ಥಾನಕ್ಕೆ ಇಳಿದಿದೆ. ಆದರೆ, 26 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಆಧಾರ ರಹಿತ ಟೀಕೆಗಳಿಗೆ ಈ ಚುನಾವಣಾ ಫಲಿತಾಂಶವೇ ಉತ್ತರ ಕೊಡಲಿದೆ ಎಂದು ಕೈ ಪಾಳೆಯದ ವಿರುದ್ಧ ಬಿಎಸ್​ವೈ ಗುಡುಗಿದರು.

ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗ್ತಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ನಾನು ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೂ ಮನೆ ಸೇರಿಲ್ಲ, ರಾಜ್ಯಾದ್ಯಂತ ಪ್ರವಾಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಇನ್ನೂ 25 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಕೂರಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ಸೆಲ್ಫಿ- ರಾಜಾಹುಲಿ ಜೈಕಾರ:

ಅಧಿಕಾರದಲ್ಲಿದ್ದಾಗ ಹೇಗೆ ನೂರಾರು ಮಂದಿ ಬಿಎಸ್​ವೈ ಅವರನ್ನು ಸುತ್ತುವರಿಯುತ್ತಿದ್ದರೋ ಅದೇ ರೀತಿ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕವೂ ಮುಂದುವರೆದು ಯಡಿಯೂರಪ್ಪ ತಮ್ಮ ವರ್ಚಸ್ಸನ್ನು ಮತ್ತೇ ಸಾಬೀತು ಪಡಿಸಿದರು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ರಾಜಾಹುಲಿ, ಕರ್ನಾಟಕದ ಹುಲಿ ಎಂದು ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಘೋಷಣೆ ಕೂಗಿದರು.

ಕಾರ್ಯಕ್ರಮದ ನಡುವೆಯೂ ಯಡಿಯೂರಪ್ಪ ಜೊತೆ ಸೆಲ್ಫಿಗಾಗಿ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. "ತಾನು ಚಾಮರಾಜನಗರ ಜಿಲ್ಲೆಯಲ್ಲಿದ್ದೇನೋ ಇಲ್ಲಾ ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದೇನೋ ಎಂಬ ಸಂತಸ ಮೂಡಿದೆ, ಅಷ್ಟು ಅಭಿಮಾನ ತೋರುತ್ತಿದ್ದೀರಿ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲೂ ಉಲ್ಲೇಖಿಸಿದರು.

ರಘು ಕೌಟಿಲ್ಯ ಪರ ಮತಯಾಚಿಸಿದ ಸಚಿವ ಎಸ್​ ಟಿ ಸೋಮಶೇಖರ್​

ಕಾಂಚಾಣ ಇದ್ದವರಿಗೆ ಕಾಂಗ್ರೆಸ್ ಟಿಕೆಟ್, ಜೆಡಿಎಸ್ ಅಭ್ಯರ್ಥಿ ಕೇಳೋರೆ ಇಲ್ಲ:

ಇದೇ ವೇಳೆ ಸಚಿವ ಸೋಮಶೇಖರ್ ಮಾತನಾಡಿ, ಕೆಲಸ ಮಾಡಿದ್ದ ಧರ್ಮಸೇನಾ ಬಿಟ್ಟು ಕಾಂಚಾಣ ಇರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಎಂದು ಟೀಕಿಸಿದರು. ಕಾಂಚಾಣ ಇರುವ ತಿಮ್ಮಯ್ಯಗೆ ರಾಜಕಾರಣದ ಬಗ್ಗೆ ಏನು ತಿಳಿದಿಲ್ಲ.‌ ಸಿದ್ದರಾಮಯ್ಯ ಬಂದರಷ್ಟೇ ಅವರ ಪ್ರಚಾರ ಟೇಕಾಫ್ ಆಗಲಿದೆ, ಇಲ್ಲಾಂದ್ರೆ ಠುಸ್ಸ್ ಆಗುತ್ತದೆ. ಜೆಡಿಎಸ್ ಅಭ್ಯರ್ಥಿ ಕೇಳೋರಿಲ್ಲ, ಕುಮಾರಸ್ವಾಮಿ ಬಂದರೇ ಟೇಕಾಫ್ ಆಮೇಲೆ ಜಿಟಿಡಿ, ಮಹಾದೇವ್ ಕಾಲೆಳೆದು ಬೀಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಧಿಕಾರದಲ್ಲಿರಲಿ ಇಲ್ಲದಿರಲಿ ಯಡಿಯೂರಪ್ಪ ಅವರು ಎಂದಿಗೂ ಕರ್ನಾಟಕದ ರಾಜಾಹುಲಿ. ಯಡಿಯೂರಪ್ಪ ಸೂಚನೆ ಮೇರೆಗೆ ಕೌಟಿಲ್ಯಗೆ ಟಿಕೆಟ್ ಕೊಡಲಾಗಿದೆ‌. ಈಗಾಗಲೇ, ನಮ್ಮ ಅಭ್ಯರ್ಥಿ ಎಲ್ಲಾ ಗ್ರಾಪಂಗಳಿಗೆ ಭೇಟಿ ಕೊಟ್ಟು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಸಂತಸದಲ್ಲಿದ್ದಾರೆ ಎಂದರು.

ಚಾಮರಾಜನಗರ-ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯು ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ, ಯಾವುದೇ ಕಾರಣಕ್ಕೂ ಎರಡನೇ ಮತ ಕೊಡಬೇಡಿ. ಮೊದಲ ಪ್ರಾಶಸ್ತ್ಯದ ಮತ ಕೊಟ್ಟು ರಘು ಕೌಟಿಲ್ಯ ಗೆಲ್ಲಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details