ಕರ್ನಾಟಕ

karnataka

ಮಲೆಮಹದೇಶ್ವರ ಬೆಟ್ಟದ 108 ಅಡಿ ಎತ್ತರದ ಪ್ರತಿಮೆ ಬಳಿ ತಡೆಗೋಡೆ ಕುಸಿತ

By

Published : May 12, 2023, 1:13 PM IST

ರಾತ್ರಿ ಸುರಿದ ಬಾರಿ ಮಳೆಗೆ ಮಲೆಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗದ ತಡೆಗೋಡೆ ಕುಸಿದಿದೆ.

ತಡೆಗೋಡೆ ಕುಸಿತ
ತಡೆಗೋಡೆ ಕುಸಿತ

ಚಾಮರಾಜನಗರ: ಕಳೆದ ಎರಡು ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಳೆ ಹಾನಿಯಾಗಿದೆ. ರಾಜ್ಯದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ನಿರ್ಮಾಣ ಮಾಡಿರುವ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದಿದೆ. ಪ್ರತಿಮೆ ಸ್ಥಳದಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶ ನಿಷೇಧ ಮಾಡಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೆರಡು ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಸಿಡಿಲು ಬಡಿದು ಮನೆಗೆ ಹಾನಿ:ತಡರಾತ್ರಿ ಸುರಿದ ಅಕಾಲಿಕ ಮಳೆಯಲ್ಲಿ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟು ಮನೆಯೊಳಗಿದ್ದ ದಂಪತಿ ಹಾಗೂ 2 ಮಕ್ಕಳಿಗೂ ಸಹ ಗಾಯವಾಗಿರುವ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಸಿದ್ದರಾಜು ಕೆ ಅವರ ಮನೆಗೆ ಹಾನಿಯಾಗಿದೆ.‌ ಸಿಡಿಲು ಬಡಿದು ಮನೆಯ ಗೋಡೆಗೆ ಬಡಿದ ಪರಿಣಾಮ ಮನೆಗೆ ಹಾನಿಯಾಗಿದ್ದು ಸಿದ್ದರಾಜು, ಪತ್ನಿ ಮಹೇಶ್ವರಿ ಹಾಗೂ ಮಕ್ಕಳಾದ ತರುಣ್, ಸಿದ್ದಾರ್ಥ್​ಗೆ ಸಣ್ಣಪುಟ್ಟ ಗಾಯಗಳಾಗಿದೆ.

ಪಿ.ಜಿ ಪಾಳ್ಯ ಗ್ರಾ.ಪಂ ವ್ಯಾಪ್ತಿಯ ಮೈಸೂರಪ್ಪನದೊಡ್ಡಿ ಗ್ರಾಮದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಾಲ್ಕು ವಿದ್ಯುತ್ ಕಂಬಗಳು ಮತ್ತು ಮರಗಳು ಬುಡ ಸಮೇತ ಕಿತ್ತು ರಸ್ತೆಗುರಳಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು, ಹನೂರು ತಾಲ್ಲೂಕಿನ ಮಲ್ಯಯನಪುರ ಗ್ರಾಮದಲ್ಲಿ‌ ಸಿಡಿಲು ಬಡಿದು ಹಸುವೊಂದು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಗ್ರಾಮದ ಮಾದೇಶ್ ಎಂಬುವವರಿಗೆ ಸೇರಿದ ಹಸುವನ್ನು ಜಮೀನಿನ ಸಮೀಪ ಕಣದಲ್ಲಿ ಕಟ್ಟಲಾಗಿತ್ತು. ತಡರಾತ್ರಿ ವೇಳೆ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಕಟ್ಟಿದ್ದ ಹಸುವಿಗೆ ಸಿಡಿಲು ಬಡಿದು, ಸ್ಥಳದಲ್ಲಿಯೇ ಮೃತಪಟ್ಟಿದೆ. ಸುಮಾರು ₹35 ಸಾವಿರ ಬೆಲೆ ಬಾಳಲಿದೆ ಎಂದು ಅಂದಾಜಿಸಲಾಗಿದೆ.

ಆಟೋರಿಕ್ಷಾ ಮೇಲೆ ಮರ ಬಿದ್ದು ಇಬ್ಬರು ಸಾವು: ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಮರ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಕಾಪುವಿನಿಂದ ಪಾದೂರಿಗೆ ತೆರಳುತ್ತಿದ್ದ ರಿಕ್ಷಾದ ಮೇಲೆ ಮರ ಉರುಳಿ ಬಿದ್ದಿದೆ. ಪುಷ್ಪಾ ಕುಲಾಲ್ (45) ಮತ್ತು ಕೃಷ್ಣ (48) ಮೃತರು. ಆಟೋ ಚಾಲಕ ಶರೀಫ್ ಘಟನೆಯಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಉಡುಪಿಯಲ್ಲಿ ರಿಕ್ಷಾ ಮೇಲೆ ಮರ ಬಿದ್ದು ಇಬ್ಬರು ಪ್ರಯಾಣಿಕರು ಸಾವು; ಚಾಲಕ ಪಾರು

ABOUT THE AUTHOR

...view details