ಕರ್ನಾಟಕ

karnataka

ಗ್ರಾಮೀಣ ಭಾಗದಲ್ಲೂ ಕೊರೊನಾ ಅಬ್ಬರ... ಎಚ್ಚರಿಕೆಯಿಂದ ಇರಲು ಚಾಮರಾಜನಗರ ಡಿಸಿ ಮನವಿ

By

Published : Apr 27, 2021, 9:09 AM IST

ಕಳೆದ 25 ದಿನದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 2255 ಪ್ರಕರಣ ದಾಖಲಾಗಿದ್ದು, ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮನವಿ ಮಾಡಿದ್ದಾರೆ.

Chamarajanagar
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮನವಿ‌ ಮಾಡಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 25 ದಿನದ ಅವಧಿಯಲ್ಲಿ 2255 ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇಷ್ಟು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಪ್ರಕರಣಗಳು ವರದಿಯಾಗಿರಲಿಲ್ಲ. ಕಳೆದ 5 ದಿನಗಳಿಂದ ಪ್ರತಿನಿತ್ಯ 200ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ದಾಖಲಾಗಿರುವ 2255 ಪ್ರಕರಣಗಳಲ್ಲಿ 1697 ಪ್ರಕರಣ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ. ಶಿವರಾತ್ರಿ ನಂತರ ಗ್ರಾಮೀಣ ಭಾಗದಲ್ಲಿ ಜರಗಿದ ಹಬ್ಬ ಹರಿದಿನಗಳು, ಜಾತ್ರೆಗಳಿಂದ ಕೊರೊನಾ ಹೆಚ್ಚಾಗಲು ಕಾರಣವಿರಬಹುದು. ಆದ್ದರಿಂದ ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದಿದ್ದು, ಕೊರೊನಾದಿಂದ ದೂರ ಇರುವಂತೆ ಹೇಳಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಅಲ್ಲದೇ, 21ರಿಂದ 40 ವರ್ಷ ವಯಸ್ಸಿನವರಲ್ಲಿ 1036 ಪ್ರಕರಣ ಕಂಡುಬಂದಿದ್ದು, 60 ವರ್ಷ ಮೇಲ್ಪಟ್ಟವರಲ್ಲಿ ಕಡಿಮೆ ಕಂಡುಬಂದಿದೆ. ಜನವರಿ ತಿಂಗಳಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದ್ದು, ಈಗಾಗಲೇ 2 ಡೋಸ್ ಮುಗಿದಿದೆ. ಇದೇ ಕಾರಣದಿಂದ ಈ ವಯಸ್ಸಿನವರಲ್ಲಿ ಕೊರೊನಾ ಸೋಂಕಿನ ಪ್ರಕರಣ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಒಂದು ತಿಂಗಳಿಂದ ಲಸಿಕೆ ಕೊಡಲಾಗುತ್ತಿದೆ. ಈ ತಿಂಗಳಲ್ಲಿ 13 ಜನರು ಮೃತಪಟ್ಟಿದ್ದು, ಇದರಲ್ಲಿ 9 ಜನರು ಲಸಿಕೆ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಅವರು ಹೇಳಿದರು.

ಇದನ್ನು ಓದಿ: ಎಸ್​ಎನ್​ಆರ್ ಆಸ್ಪತ್ರೆಯಲ್ಲಿ ಇನ್ನೊಂದು ಆಕ್ಸಿಜನ್ ಪ್ಲಾಂಟ್: ಸಂಸದ ಮುನಿಸ್ವಾಮಿ

ಜಿಲ್ಲೆಯ ಕೋವಿಡ್ ಕೇರ್ ಕೇಂದ್ರಗಳಲ್ಲಿ ಆಮ್ಲಜನಕ ಕೊರತೆ ಇಲ್ಲ. ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ಆಕ್ಸಿಜನ್ ಪೂರೈಕೆ ಮಾಡುವ ನಿಟ್ಟಿನಲ್ಲಿ 40ರಿಂದ 50 ಆಕ್ಸಿಜನ್ ಜನರೇಟರ್​ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ 40-50 ಬೆಡ್​ಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಸಂತೇಮರಹಳ್ಳಿ ಆಸ್ಪತ್ರೆಯ 60 ಬೆಡ್​ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲದ 30 ಬೆಡ್​ಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಬೆಡ್​ಗಳ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 3 ದಿನಗಳಲ್ಲಿ 970 ಹಾಸಿಗೆಗಳನ್ನು ಏರಿಕೆ ಮಾಡಲು ಕ್ರಮ ವಹಿಸಲಾಗಿದೆ. ಇದರಲ್ಲಿ 400-450 ಬೆಡ್​ಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ತಯಾರಿ ಮಾಡಲಾಗಿದೆ. ಅಲ್ಲದೇ 300 ಆಕ್ಸಿಜನ್ ಕಾನ್ಸಟ್ರೇಷನ್ ಖರೀದಿಗೆ ಕ್ರಮ ವಹಿಸಲಾಗಿದ್ದು, ಬೆಡ್ ಪಕ್ಕ ಇರುವ ಈ ಮಿಷನ್ 5-7 ಲೀಟರ್​ ಆಕ್ಸಿಜನ್ ಸಾಮರ್ಥ್ಯ ಹೊಂದಿರುತ್ತದೆ. ಇದು ವಾತಾವರಣದಿಂದ ಆಮ್ಲಜನಕವನ್ನು ಎಳೆದುಕೊಳ್ಳುತ್ತದೆ ಎಂದು ಹೇಳಿದರು.

ABOUT THE AUTHOR

...view details