ಕರ್ನಾಟಕ

karnataka

ಚಾಮರಾಜನಗರ: ಕಾಡಂಚಿನ ಜನರಿಗೆ ಅರಣ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ಸೇವೆ

By ETV Bharat Karnataka Team

Published : Jan 7, 2024, 4:19 PM IST

ಅರಣ್ಯ ಇಲಾಖೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಜನರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ.

Etv Bharatambulance-service-by-the-forest-department-for-people-who-live-near-the-forest-in-chamarajanagara
ಚಾಮರಾಜನಗರ: ಕಾಡಂಚಿನ ಜನರಿಗೆ ಅರಣ್ಯ ಇಲಾಖೆಯಿಂದ ಆ್ಯಂಬುಲೆನ್ಸ್ ಸೇವೆ

ಚಾಮರಾಜನಗರ:ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ಆಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಜನರು ಇನ್ಮುಂದೆ ಅರಣ್ಯ ಇಲಾಖೆಯ ಆಂಬ್ಯುಲೆನ್ಸ್ ನೆರವು ಪಡೆಯಬಹುದಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ಒಳಪಡುವ ಬಂಡೀಪುರ, ಎಲಚೆಟ್ಟಿ, ಜಕ್ಕಹಳ್ಳಿ, ಮಂಗಲ ಸೇರಿದಂತೆ ಇನ್ನಿತರ ಹಲವು ಗ್ರಾಮಗಳ ಹಾಗೂ ಗಿರಿಜನ ಹಾಡಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಕಾಯಿಲೆಗಳಿಗೆ ತುತ್ತಾದ ಜನರು ಪಟ್ಟಣದ ಆಸ್ಪತ್ರೆಗಳಿಗೆ ತೆರಳಲು ಹರಸಾಹಸ ಪಡಬೇಕಾಗಿತ್ತು. ಜೊತೆಗೆ, ರಾತ್ರಿ ವೇಳೆ ವಾಹನ ಸಂಪರ್ಕವಿಲ್ಲದೆ ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇತ್ತು.

ಹುಲಿ ಸಂರಕ್ಷಣಾ ಪ್ರತಿಷ್ಠಾನ ಎರಡು ಮಾರುತಿ ಓಮ್ನಿ ಕಾರುಗಳನ್ನು ಬಾಡಿಗೆಗೆ ಪಡೆದು ಕಾಡಂಚಿನ ಜನರಿಗೆ ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಿದೆ. ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಆಂಬ್ಯುಲೆನ್ಸ್ ದಿನದ 24 ಗಂಟೆಗಳ ಕಾಲ ಸೇವೆಗೆ ಸಿದ್ಧವಿದ್ದು, ಆರೋಗ್ಯ ಸಮಸ್ಯೆ ಕಂಡು ಬಂದ ಕಾಡಂಚಿನ ಗ್ರಾಮಸ್ಥರು ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಕೂಡಲೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿ, ಅಗತ್ಯವಿರುವ ಪ್ರಾಥಮಿಕ ಅಥವಾ ತಾಲೂಕು ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತದೆ. ಹೆಚ್ಚಿನ ತುರ್ತು ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೂ ಕೂಡ ತೆರಳಲಿದೆ.

ಶೀಘ್ರದಲ್ಲೇ ಚಾಲನೆ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ವಿಶೇಷ ಕಾಳಜಿ ಹಾಗೂ ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಎರಡು ಆ್ಯಂಬುಲೆನ್ಸ್ ಸೇವೆಗೆ ಸಿದ್ಧವಾಗಿದ್ದು, ಶಾಸಕ ಹೆಚ್ ಎಂ ಗಣೇಶಪ್ರಸಾದ್ ಮೂಲಕ ಚಾಲನೆ ಕೊಡಿಸಲು ಇಲಾಖೆ ಸನ್ನದ್ಧವಾಗಿದೆ. ಆಂಬ್ಯುಲೆನ್ಸ್​ಗಳಿಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ. ಒಂದು ಆಂಬ್ಯುಲೆನ್ಸ್​ ಬಂಡೀಪುರ, ಮತ್ತೊಂದು ಮದ್ದೂರು ವಲಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಬಂಡೀಪುರ ಸಿಎಫ್ಒ ಡಾ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಸ್ಮಶಾನಕ್ಕೆ ಸಿಸಿಟಿವಿಯಿಂದ ಚಿರಶಾಂತಿ

ABOUT THE AUTHOR

...view details