ಕರ್ನಾಟಕ

karnataka

ಕೋವಿಡ್​ನಿಂದ ಮೃತ ಪಟ್ಟವರಿಗೆ 1 ಲಕ್ಷ ರೂ. ಪರಿಹಾರ: ಚಾಮರಾಜನಗರದಲ್ಲಿ 235 ಅರ್ಜಿ ಸಲ್ಲಿಕೆ

By

Published : Sep 16, 2021, 11:55 AM IST

ಕೋವಿಡ್

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದ್ದು, ಪರಿಹಾರ ಕೋರಿ ಚಾಮರಾಜನಗರ ಜಿಲ್ಲೆಯಲ್ಲಿ 235 ಅರ್ಜಿಗಳು ಸಲ್ಲಿಕೆಯಾಗಿವೆ.

ಚಾಮರಾಜನಗರ: ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದರೂ ಕೂಡ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಪರಿಹಾರ ಕೋರಿ ಜಿಲ್ಲೆಯಲ್ಲಿ 235 ಅರ್ಜಿಗಳು ಸಲ್ಲಿಕೆಯಾಗಿವೆ.

ಚಾಮರಾಜನಗರ ತಾಲೂಕಿನಲ್ಲಿ ಅತಿ ಹೆಚ್ಚು 93 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ 52, ಹನೂರಿನಲ್ಲಿ 45, ಕೊಳ್ಳೇಗಾಲ ತಾಲೂಕಿನಲ್ಲಿ 31 ಹಾಗೂ ಯಳಂದೂರಿನಲ್ಲಿ 14 ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನೂ ಬಿಡುಗಡೆಯಾಗದ ಪರಿಹಾರ

ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಲೇ 1 ಲಕ್ಷ ರೂ. ಪರಿಹಾರ ಘೋಷಣೆಯಾಗಿತ್ತು. ಈ ಆರ್ಥಿಕ ನೆರವು ನೀಡುವ ಸಂಬಂಧ ಕಳೆದ ಜುಲೈ 8 ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಎರಡು ತಿಂಗಳಾದರೂ ಕೂಡ ಯಾರೊಬ್ಬರಿಗೂ ಈ ತನಕ ಪರಿಹಾರ ಸಂದಾಯವಾಗಿಲ್ಲ.

ಜಿಲ್ಲೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 517 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂಬುದಿಲ್ಲ. ಆಯಾ ತಾಲೂಕು ಕಚೇರಿಗಳಲ್ಲಿ ಅರ್ಹ ಬಿಪಿಎಲ್‌ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪರಿಹಾರ ನೀಡಿಕೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾನದಂಡಗಳು ಮತ್ತು ಷರತ್ತುಗಳಿಂದ ಅದರಲ್ಲೂ ಕೋವಿಡ್‌ ಮರಣ ಪ್ರಮಾಣ ಪತ್ರ ಪಡೆಯುವುದು ಜಟಿಲವಾಗಿರುವುದರಿಂದ ಪರಿಹಾರ ಯಾರ ಕೈ ಸೇರಿಲ್ಲ ಎನ್ನಲಾಗುತ್ತಿದೆ.

ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪರಿಹಾರ

ಬಿಪಿಎಲ್‌ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಕುಟುಂಬದ ಒಬ್ಬ ಸದಸ್ಯರನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ದೃಢಪಡಿಸಿದಂತಹ ಸಾವಿನ ಪ್ರಕರಣಗಳಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿ ನೀಡುವ ಮೃತರ ಅಧಿಕೃತ ಮಾಹಿತಿ ಆಧಾರದ ಮೇಲೆ ಕಾನೂನು ಬದ್ಧವಾಗಿ ವಾರಸುದಾರರು ಅಥವಾ ಕುಟುಂಬ ಸದಸ್ಯರನ್ನು ಗುರುತಿಸಿ ಅವರಿಂದ ಗುರುತಿನ ಪತ್ರ ಹಾಗೂ ಬ್ಯಾಂಕಿನ ವಿವರ ಪಡೆದು ಪರಿಹಾರ ಸಂದಾಯ ಮಾಡಲಾಗುತ್ತದೆ.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ 1 ಲಕ್ಷ ರೂ. ಪರಿಹಾರವನ್ನು ಆರ್‌ಟಿಜಿಎಸ್‌/ಎನ್‌ಇಎಫ್‌ಟಿ ಮೂಲಕ ನೇರವಾಗಿ ಕೋವಿಡ್‌ನಿಂದ ಮೃತಪಟ್ಟ ವಾರಸುದಾರರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತದೆ.

ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿ ಮತ್ತು ರಾಜ್ಯಮಟ್ಟದಲ್ಲಿ ನಿರ್ದೇಶಕರು ಸಾಮಾಜಿಕ ಭದ್ರತೆ ಮತ್ತು ನಿರ್ದೇಶನಾಲಯ ಬೆಂಗಳೂರು, ಇವರು ಈ ಯೋಜನೆಯ ಪ್ರಗತಿ ಪರಿಶೀಲನೆಯನ್ನು ನಡೆಸುತ್ತಾ ಬಂದಿದ್ದರೂ ಪರಿಹಾರ ಬಿಡುಗಡೆ ವಿಳಂಬವಾಗಿದೆ.

ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್‌ನಿಂದ ಸತ್ತವರ ಪೈಕಿ ಯಾರಿಂದ ಅರ್ಜಿ ಸ್ವೀಕರಿಸಬೇಕು?, ಸರ್ಕಾರದಿಂದ ಆದೇಶವಾದ ದಿನದಿಂದ ಅರ್ಜಿಗಳನ್ನು ಪಡೆಯಬೇಕೇ?, ಯಾವ ದಿನಾಂಕದವರೆಗೆ ಪಡೆಯಬೇಕು?, ಎಂಬಿತ್ಯಾದಿ ಗೊಂದಲ ಅಧಿಕಾರಿ ವಲಯದಲ್ಲಿ ಪ್ರಾರಂಭದಲ್ಲಿ ಇತ್ತು. ಅರ್ಜಿ ಸಲ್ಲಿಸುವ ವಾರಸುದಾರರಂತೂ ಕಚೇರಿಯಿಂದ ಕಚೇರಿಗೆ ಅಲೆದು ಬೆಂಡಾಗಿದ್ದರು. ಈ ಸಂಬಂಧ ಸರ್ಕಾರದಿಂದ ಆದೇಶ ಮತ್ತು ಸುತ್ತೋಲೆಗಳು ಕಾಲ ಕಾಲಕ್ಕೆ ಹೊರಬಿದ್ದ ಹಿನ್ನೆಲೆ ಇದ್ದ ಗೊಂದಲಗಳೆಲ್ಲಾ ಈಗ ನಿವಾರಣೆಯಾಗಿವೆ.

ABOUT THE AUTHOR

...view details