ಕರ್ನಾಟಕ

karnataka

ಪ್ರತ್ಯೇಕ ಅಪಘಾತ ಪ್ರಕರಣ : ಬೀದರ್​ನಲ್ಲಿ ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಶಿಕ್ಷಕ, ಹಾವೇರಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವು

By

Published : Jul 2, 2023, 10:49 PM IST

ಬೀದರ್​ ಮತ್ತು ಹಾವೇರಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಓರ್ವ ಶಿಕ್ಷಕ ಮತ್ತು ಓರ್ವ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

road-accident-in-bidar-and-haveri
ಪ್ರತ್ಯೇಕ ಅಪಘಾತ ಪ್ರಕರಣ : ಬೀದರ್​ನಲ್ಲಿ ಶಿಕ್ಷಕ, ಹಾವೇರಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವು

ಬೀದರ್ : ಬೈಕ್​ಗೆ ಸಾರಿಗೆ ಬಸ್​ ಡಿಕ್ಕಿಯಾಗಿ ಎರಡು ದಿನಗಳ ಹಿಂದಷ್ಟೇ ಮದುವೆಯಾದ ಶಿಕ್ಷಕ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕೊಳಾರ್ ಕೈಗಾರಿಕೆ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಮೃತರನ್ನು ಕಮಲನಗರ ತಾಲೂಕಿನ ಬಳತ್ (ಬಿ) ನಿವಾಸಿ ಅರುಣ್ ಕಾಶಿನಾಥ ಪಡಸಾಲೆ (33) ಎಂದು ಗುರುತಿಸಲಾಗಿದೆ.

ಕಳೆದ ಜೂ 29ರಂದು ಮದುವೆಯಾಗಿದ್ದ ಅರುಣ್​, ತಮ್ಮ ಪತ್ನಿಯ ಗ್ರಾಮವಾದ ಹುಮನಾಬಾದ್ ತಾಲೂಕಿನ ಮುಗನೂರ್​ನಿಂದ ನೌಬಾದ್​ಗೆ ಬೈಕ್​ನಲ್ಲಿ ಬರುವಾಗ ಸಾರಿಗೆ ಬಸ್ ಡಿಕ್ಕಿ ಆಗಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಅರುಣ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅರುಣ್​ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ನೌಬಾದ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯಕೀಯ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು :ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಯನ್ನು ಅಖಿಲ ಕುಂಬಾರ (27) ಎಂದು ಗುರುತಿಸಲಾಗಿದೆ.

ಮೂಲತಃ ಬೆಂಗಳೂರು ನಿವಾಸಿಯಾಗಿರುವ ಅಖಿಲ್​ ಬೆಳಗಾವಿಯಲ್ಲಿ ಎಂ. ಡಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಬೆಳಗಾವಿಯಿಂದ ದಾವಣಗೆರೆ ಕಡೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಬಂಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ :ಅಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ: ಕಲಬುರಗಿ ಜಿಲ್ಲೆಯ ಆರು ಜನರ ದುರ್ಮರಣ

ABOUT THE AUTHOR

...view details