ಕರ್ನಾಟಕ

karnataka

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ: ಜೆ.ಪಿ ನಡ್ಡಾ

By

Published : Apr 22, 2023, 10:10 AM IST

ಜೆಡಿಎಸ್ ಹಾಗೂ ಕಾಂಗ್ರೆಸ್ ಅಭಿವೃದ್ಧಿ ವಿರೋಧಿಯಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ ಎಂದು ಬೀದರ್​ನಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮನವಿ ಮಾಡಿದರು.

JP Nadda campaign at Bidar
ಪ್ರಬುದ್ಧರ ಸಭೆಯಲ್ಲಿ ಜೆ.ಪಿ ನಡ್ಡಾ

ಬೀದರ್:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸಿ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು. ಬೀದರ್​​ನ ಖಾಸಗಿ ಹೋಟೆಲ್​​‍ನಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್‍ ಅಭಿವೃದ್ಧಿ ವಿರೋಧಿ ಎಂದು ದೂರಿದರು.

ಕಾಂಗ್ರೆಸ್ ತಮ್ಮ ಅಧಿಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತಡೆ ಹಿಡಿದಿತ್ತು. ಜನತಾ ದಳ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯನ್ನು ತಡೆ ಹಿಡಿದಿದ್ದರು. ಈ ಕಾಮಗಾರಿಯನ್ನು ಬಿಜೆಪಿ ಸರ್ಕಾರ ಬಂದ ನಂತರ ಮಾಡಲಾಯಿತು. ಕಾಂಗ್ರೆಸ್‍ ದೇಶದಲ್ಲಿ ಭಾಷಾ, ಪ್ರಾಂತ್ಯ ಹಾಗೂ ಸಮಾಜವನ್ನು ಒಡೆಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿ:ಬಿಜೆಪಿ ಸಬ್​ಕಾ ಸಾಥ್, ಸಬ್​ಕಾ ವಿಕಾಸ್, ಸಬ್​ಕಾ ವಿಶ್ವಾಸ್ ನೀತಿಯ ಮೇಲೆ ನಡೆದು ದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ‍ವನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಲಸಿಕೆಯನ್ನು ತಯಾರಿಸಿ ದೇಶದ ಗೌರವವನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಜಗತ್ತಿನ ಅಧಿಕಾಂಶ ದೇಶಗಳ ಆರ್ಥಿಕ ಸ್ಥಿತಿ ಕುಸಿದಿತ್ತು. ಆದರೆ ಭಾರತದ ಆರ್ಥಿಕ ಸ್ಥಿತಿಯನ್ನು ಮೋದಿಯವರ ನೇತೃತ್ವದಲ್ಲಿ ಸದೃಢವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ 5ನೇ ಸ್ಥಾನಕ್ಕೆ ಏರಿದೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ಬೀದರ್​ನ ಪದ್ಮಶ್ರೀ ಪ್ರಶಸ್ತಿ ವಿಜೇತ ಖಾದ್ರಿಯವರ ಮಾತನ್ನು ನಡ್ಡಾ ಉಲ್ಲೇಖಿಸಿದರು. "ಎರಡು ದಶಕದಿಂದ ಪದ್ಮಶ್ರೀ ಪ್ರಶಸ್ತಿಗಾಗಿ ಪ್ರಯತ್ನ ಮಾಡುತ್ತಿದ್ದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅಲ್ಪಸಂಖ್ಯಾತರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಪ್ರಧಾನ ಮಂತ್ರಿಯವರ ಸಬ್​ಕಾ ಸಾಥ್ ನೀತಿಯಂತೆ ನನಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ ಎಂದು ಖಾದ್ರಿ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದರು ಎಂದು ನಡ್ಡಾ ನೆನಪಿಸಿದರು.

ಡಬಲ್ ಇಂಜಿನ್ ಸರ್ಕಾರವನ್ನು ಆರಿಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಳ ಮೀಸಲಾತಿ ಜಾರಿಗೆ ತಂದದ್ದು ಪ್ರಶಂಸನೀಯ. ಆದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೊಮ್ಮಾಯಿ ಅವರು ಜಾರಿ ಮಾಡಿದ ಒಳಮೀಸಲಾತಿ ಪದ್ಧತಿಯನ್ನು ರದ್ದು ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಅವರು ಯಾವ ಜಾತಿಯ ಆರಕ್ಷಣವನ್ನು ಕಡಿಮೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಜನರಲ್ಲಿ ಸ್ಪಷ್ಟಪಡಿಸಲಿ. ಕಾಂಗ್ರೆಸ್ ಸದೈವ ಸಮಾಜವನ್ನು ಒಡೆದು ರಾಜಕೀಯ ಮಾಡುವ ಪದ್ಧತಿ ಅನುಸರಿಸುತ್ತಾ ಬಂದಿದೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರವನ್ನು ಆರಿಸಿ ಎಂದು ಅವರು ಮನವಿ ಮಾಡಿದರು.

ಈ ಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಬೀದರ್​ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರ ಸಿಂಗ್ ಠಾಕೂರ, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು

ರೋಡ್ ಶೋ: ಸಭೆಗೂ ಮುನ್ನ ಜೆ.ಪಿ.ನಡ್ಡಾ ಬೀದರ್​ ನಗರದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.

ABOUT THE AUTHOR

...view details