ಕರ್ನಾಟಕ

karnataka

ಆಗಿನ ಶ್ರೀಕೃಷ್ಣದೇವರಾಯನ ಕಾಲದ ಸುವರ್ಣ ದಿನ ಈಗ ನೋಡುತ್ತಿದ್ದೇವೆ: ಶ್ರೀರಾಮುಲು ಬಣ್ಣನೆ

By

Published : Mar 7, 2023, 9:57 PM IST

ಬಳ್ಳಾರಿಯಲ್ಲಿ ನಡೆದ ಫಲಾನುಭವಿಗಳ ಸಮ್ಮೇಳನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಚಿವ ಶ್ರೀರಾಮುಲು ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸುವ ಮೂಲಕ ಕಾಂಗ್ರೆಸ್​ ಸರ್ಕಾರವನ್ನು ತರಾಟೆ ತೆಗೆದುಕೊಂಡರು.

Inauguration of Beneficiaries Conference
Inauguration of Beneficiaries Conference

ಬಳ್ಳಾರಿ:ಶ್ರೀಕೃಷ್ಣದೇವರಾಯನ ಕಾಲದಲ್ಲಿ ಸುವರ್ಣ ದಿನಗಳಿದ್ದವು. ಈಗ ಮೋದಿ ಅವಧಿಯಲ್ಲಿ ಆ ಸುವರ್ಣ ದಿನಗಳನ್ನು ನೋಡುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಬಣ್ಣಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸರ್ಕಾರವೇ ಜನರ ಮನೆ ಬಾಗಿಲಿಗೆ ಬರುತ್ತಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಗ್ಯಾರೆಂಟಿ ಕಾರ್ಡ್ ಕೊಡುತ್ತಿವೆ. ಕೆಲವರು ಗ್ಯಾರಂಟಿ ವಾರಂಟಿ ಕೊಡಲು ಹೊಡೆದಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಡ್ ಕೊಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ದೆಹಲಿಯಲ್ಲಿ ಸಾವಿರ ರೂ. ಬಿಡುಗಡೆಯಾದರೆ 100 ರೂ. ಮಾತ್ರ ಬರುತ್ತಿತ್ತು. 900 ರೂ. ಸೋರಿಕೆಯಾಗುತ್ತಿತ್ತು. ಆದರೆ, ಮೋದಿ ಅವಧಿಯಲ್ಲಿ ಸಾವಿರಕ್ಕೆ ಸಾವಿರ ರೂ. ತಲುಪುತ್ತಿದೆ. ರಾಹುಲ್ ಗಾಂಧಿ ಕೂಡ ಮೋದಿ ಅವರ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಪ್ಪುತ್ತಿಲ್ಲ ಎಂದು ಹೇಳಿದರು.

ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶದಲ್ಲಿ ಹಲವಾರು ಚುನಾವಣೆ ನಡೆದಿವೆ. ಕಾಂಗ್ರೆಸ್​​ನವರು ಅದು ಗ್ಯಾರಂಟಿ, ಇದು ಗ್ಯಾರಂಟಿ ಅಂತ ಹೇಳುತ್ತಿದ್ದಾರೆ. ಅವರು ಮನೆಗೆ ಹೋಗುವುದು ಗ್ಯಾರಂಟಿ ಅಂತಾ ನಾವು ಹೇಳುತ್ತೇವೆ ಎಂದು ವ್ಯಂಗ್ಯವಾಡಿದರು.

ದೇಶದ ಜನರಿಗೆ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ ಸರ್ಕಾರ. ಅಂದು ಆಹಾರ ವದಗಿಸಿದ್ದು ಇದೇ ಮೋದಿ ಸರ್ಕಾರ. ಕಾಂಗ್ರೆಸ್​​ನವರು ಈಗ ಗ್ಯಾರೆಂಟಿ ಕೊಡುವುದಾಗಿ ಹೇಳುತ್ತಾರೆ. ಇವರ ಕಾಲದಲ್ಲಿ ಕರೆಂಟ್ ಇರಲಿಲ್ಲ. ದೇಶದಲ್ಲಿ ಮೋದಿ ನೇತೃತ್ವದಲ್ಲಿ ವಿದ್ಯುತ್ ಅವಶ್ಯತೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲ ಬಡವರ ಮನೆಗೆ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಿದ್ದೇವೆ. ಪ್ರತಿ ಮನೆಗೆ ಕುಡಿಯುವ ನೀರನ್ನು ಪೈಪ್‍ಲೈನ್ ಮೂಲಕ ಕೊಡುತ್ತಿದ್ದೇವೆ. ನೀರು ಕೊಡುವುದು ರಾಜ್ಯ ಸರ್ಕಾರದ ಕೆಲಸ. ಆದರೆ, ಮಹಿಳೆಯರ ಕಷ್ಟ ಅರಿತ ಮೋದಿ, ಮನೆ ಮನೆಗೆ ನಲ್ಲಿ ಮೂಲಕ ನೀರು ವ್ಯವಸ್ಥೆ ಮಾಡಿದ್ದಾರೆ ಎಂದು ಸರ್ಕಾರದ ಸಾಧನೆಗಳನ್ನು ತಿಳಿಸಿದರು.

ಪ್ರಶ್ನೆಗಳಿಗೆ ಉತ್ತರ ಬರೆದು ಅಂಕ ನೀಡಿ ಅಂತಾ ನಾವು ಜನರ ಬಳಿ ಬಂದಿದ್ದೇವೆ. ಆದರೆ, ನಾವು ಫಾಲ್ತೂ ಗ್ಯಾರಂಟಿ ಕಾರ್ಡ್ ಕೊಡುವುದಿಲ್ಲ. ಯಾರನ್ನಾದರೂ ಕೊಂದು ಅಧಿಕಾರಕ್ಕೆ ಬರುವುದಿದ್ದರೆ ಅದು ಕಾಂಗ್ರೆಸ್ ಮಾತ್ರ. ಪುಲ್ವಾಮದಲ್ಲಿ ನಡೆದ ಬ್ಲಾಸ್ಟ್​ಗೆ ರಾಹುಲ್ ಗಾಂಧಿ ಕಾರು ಬ್ಲಾಸ್ಟ್ ಎಂದು ಹೇಳಿದ್ದರು. ಉಗ್ರವಾದಿಗಳಿಗೆ ಬೆಂಬಲಿಸುವ ನೀತಿ ಕಾಂಗ್ರೆಸ್​ನಲ್ಲಿದೆ. ಕುಕ್ಕರ್ ಬ್ಲಾಸ್ಟ್ ಆದಾಗ ಬಿಜೆಪಿಯವರು ಇದನ್ನು ಡೈವರ್ಟ್ ಮಾಡಲು ಮಾಡಿದ್ದಾರೆ ಅಂತ ಹೇಳಿದ್ದರು. ನಿನ್ನೆ ಐಸಿಎಸ್​ನವರು ನಾವೇ ಮಾಡಿದ್ದೇವೆ ಅಂತ ಹೇಳಿದ್ದಾರೆ. ಇದಕ್ಕೆ ನೀವು ಕ್ಷಮೆ ಕೇಳ್ತೀರಾ ಡಿ.ಕೆ.ಶಿವಕುಮಾರ್​? ಎಂದು ಪ್ರಶ್ನಿಸಿದ ಜೋಶಿ, ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್​ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಸ್ವಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪಗೆ ಅದ್ಧೂರಿ ಸ್ವಾಗತ: ದೋಷ ಮುಕ್ತನಾಗುವೆ ಎಂದು ಕಣ್ಣೀರು ಹಾಕಿದ ಶಾಸಕ

ABOUT THE AUTHOR

...view details