ಕರ್ನಾಟಕ

karnataka

ನಮ್ಮ ಸರ್ಕಾರ ಯಾವತ್ತೂ ಆಟೋ ಚಾಲಕರ ಪರ: ಸಚಿವ ಶ್ರೀರಾಮುಲು

By

Published : Mar 20, 2023, 8:11 PM IST

ರ‍್ಯಾಪಿಡೋ ಬೈಕ್‌ಗಳ ವಿರುದ್ಧ ಆಟೋ ಚಾಲಕರು ಬೀದಿಗಿಳಿದು ಹೋರಾಟ ಮಾಡಬೇಡಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

Minister Sriramulu
ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

ಬಳ್ಳಾರಿ:ನಮ್ಮ ಬಿಜೆಪಿ ಸರ್ಕಾರ ಆಟೋ ಚಾಲಕರ ಪರವಾಗಿದೆ. ರ‍್ಯಾಪಿಡೋ ಬೈಕ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ನಗರದ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಟೋ ಚಾಲಕರು ಸೇವೆ ಕೊಡುವಂತವರು. ಆಟೋ ಚಾಲಕರ ಪರವಾಗಿ ಸಿಎಂ ಹಾಗೂ ನಾನಿದ್ದೇನೆ. ಆಟೋ ಚಾಲಕರು ಬೀದಿಗಿಳಿದು ಹೋರಾಟ ಮಾಡಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೆನೆ ಎಂದರು.

ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ವಿರೋಧಿಸಿ ಆಟೋ ಚಾಲಕರ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ರ‍್ಯಾಪಿಡೋ ಬೈಕ್ ಹೆಚ್ಚಾದ ಕಾರಣ ಆಟೋ ಚಾಲಕರು ನನಗೆ ದೂರು ನೀಡಿದ್ದರು. ಆ ಸಮಯದಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಕರೆದು ಮಾತನಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಆಟೋ ಚಾಲಕರಿಗೆ ತೊಂದರೆ ಆಗಬಾರದು. ಯಾಕೆಂದರೆ ಸಾರ್ವಜನಿಕರಿಗೆ ತಕ್ಷಣಕ್ಕೆ ಸೇವೆ ನೀಡುತ್ತಿರುವವರು ಆಟೋ ಚಾಲಕರು. ಯಾವುದೇ ಪರಿಸ್ಥಿತಿಯಲ್ಲಿ ರ‍್ಯಾಪಿಡೋ ಬೈಕ್ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದರು.

ಪ್ರೋತ್ಸಾಹಿಸಿದರೆ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ರ‍್ಯಾಪಿಡೋ ಬೈಕ್​ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡುತ್ತೇನೆ. ನಮ್ಮ ಮುಖ್ಯಮಂತ್ರಿಗಳು ಇತ್ತೀಚೆಗೆ ಆಟೋ ಡ್ರೈವರ್​ ಮಕ್ಕಳಿಗೂ ಕೂಡ ವಿದ್ಯಾಶ್ರೀ ಯೋಜನೆಯನ್ನು ಕೊಟ್ಟಿದ್ದಾರೆ. ರೈತರ ಮಕ್ಕಳು ಯಾವ ರೀತಿ ಶಿಕ್ಷಣ ಸಿಗುತ್ತಿದೆಯೋ ಅದೇ ರೀತಿ ಆಟೋ ಚಾಲಕರ ಹಾಗೂ ಕ್ಯಾಬ್​ ಚಾಲಕರ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂದು ವಿದ್ಯಾಶ್ರೀ ಯೋಜನೆ ಜಾರಿ ತಂದಿದ್ದೇವೆ. ದಯವಿಟ್ಟು ಮುಷ್ಕರಕ್ಕೆ ಇಳಿಯಬೇಡಿ. ನಾನು ಏನೇನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ, ಆ ನಿಟ್ಟಿನಲ್ಲಿ ನಾನು ತೀರ್ಮಾನವನ್ನೂ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ನಮ್ಮ ಸರ್ಕಾರ ಆಟೋ ಚಾಲಕರ ಪರವಾಗಿ ನಿಂತಿದೆ. ನಾನು ಮಂತ್ರಿಯಾದ ಮೇಲೆ ರ‍್ಯಾಪಿಡೋ ಬೈಕ್​ಗೆ ಬೆಂಬಲ ಕೊಟ್ಟಿಲ್ಲ. ಮುಂದೆಯೂ ಕೂಡ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ಈಗ ಆಗುತ್ತಿರುವ ಪೈಪೋಟಿಯನ್ನು ಆರೋಗ್ಯಕರವಾಗಿ ಇತ್ಯರ್ಥ ಮಾಡುವಂತಹ ಕೆಲಸವನ್ನು ಮಾಡುತ್ತೇನೆ. ಕಮಿಷನರ್​ ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿದ್ದೇನೆ. ಕಾರ್ಯದರ್ಶಿಗೆ ಕೂಡ ಈ ಬಗ್ಗೆ ಆದೇಶ ಮಾಡುತ್ತೇನೆ. ಆರ್​ಟಿಓ ಅಧಿಕಾರಿಗಳಿಗೆ ತಕ್ಷಣ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಲೈಸನ್ಸ್ ಪಡೆಯದೇ ರ‍್ಯಾಪಿಡೋ ಬೈಕ್ ವೈಟ್ ಬೋರ್ಡ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಈಗಾಗಲೇ ಆರ್‌ಟಿಒ ಅಧಿಕಾರಿಗಳಿಗೆ ಕೂಡ ಸೂಚನೆ ನೀಡಿರುವೆ. ಚೆಕ್ ಪೋಸ್ಟ್​ಗಳು ಹಾಕಿ ಅವರ ಮೇಲೆ ಕೇಸ್ ದಾಖಲಿಸುತ್ತೇವೆ. ತಕ್ಷಣದಿಂದಲೇ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ರದ್ದು ಪಡಿಸಲು ಸೂಚನೆ ನೀಡುವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಇದನ್ನೂ ಓದಿ:ಹೈಕೋರ್ಟ್ ಸೂಚಿಸಿದರೆ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಸಾರಿಗೆ ಇಲಾಖೆ ಸನ್ನದ್ಧ; ಏನಿದು ಬೈಕ್ ಟ್ಯಾಕ್ಸಿ ಕಾನೂನು ಸಮರ?

ABOUT THE AUTHOR

...view details