ಕರ್ನಾಟಕ

karnataka

ಅಸಾಧ್ಯವಾದುದನ್ನು ಸಾಧಿಸುವ ವ್ಯಕ್ತಿ ಆನಂದ್ ಸಿಂಗ್: ಸಿಎಂ ಬೊಮ್ಮಾಯಿ

By

Published : Apr 16, 2023, 10:00 PM IST

ಆನಂದ್ ಸಿಂಗ್ ಹೆಸರಿನಲ್ಲೇ ಆನಂದ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ವಿಜಯನಗರ : ಅಸಾಧ್ಯವಾದುದನ್ನು ಸಾಧಿಸುವ ವ್ಯಕ್ತಿಯೇ ಸಚಿವ ಆನಂದ್ ಸಿಂಗ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಜಿಲ್ಲೆಯ ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಸಮಾನಮನಸ್ಕರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಆನಂದ್ ಸಿಂಗ್ ಹೆಸರಿನಲ್ಲಿ ಆನಂದ ಇದೆ. ಸದಾಕಾಲ ಸವಾಲುಗಳನ್ನು ಇಟ್ಟುಕೊಳ್ಳುವ, ಅದನ್ನು ಈಡೇರಿಸುವುದು ಮತ್ತು ಅಸಾಧ್ಯವನ್ನು ಸಾಧ್ಯ ಮಾಡೋದು ಆನಂದ್ ಸಿಂಗ್ ಅವರ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆ ರಚನೆಗೆ ಹಲವು ವರ್ಷಗಳ ಬೇಡಿಕೆ ಇತ್ತು. ಜಿಲ್ಲೆ ರಚನೆಗಾಗಿ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. ಮಿಸಳ್‌ಬಾಜಿ ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಬಂತು. ಆನಂದ್ ಸಿಂಗ್ ಬಿಜೆಪಿ ಸರ್ಕಾರ ಬಂದರೆ ವಿಜಯನಗರ ಜಿಲ್ಲೆ ಆಗುತ್ತೆ ಅಂತ ತೀರ್ಮಾನ ಮಾಡಿದರು ಎಂದು ಸಿಎಂ ಹಳೆದಿನಗಳನ್ನು ನೆನೆದರು.

ನಾನು ಗೃಹ ಸಚಿವನಿದ್ದಾಗ ಆನಂದ್ ಸಿಂಗ್ ನನ್ನನ್ನು ಭೇಟಿ ಮಾಡಿದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆಗುವೆ ಎಂದರು. ಬಿಜೆಪಿ ಸರ್ಕಾರ ಬರುತ್ತೆ, ನಾನು ವಿಜಯನಗರ ಜಿಲ್ಲೆ ಮಾಡುವುದಾಗಿ ಹೇಳಿದರು. ಆನಂದ್ ಸಿಂಗ್ ಹೇಳುವುದನ್ನು ಗಮನಿಸಿದಾಗ ನನಗೆ ಆಶ್ಚರ್ಯ ಆಯ್ತು. ಹೀಗೆ ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುತ್ತಾರೆ. ದೂರದೃಷ್ಟಿ ಇಟ್ಟುಕೊಂಡಿರುವ ರಾಜಕಾರಣಿ. ನನ್ನನ್ನು ಭೇಟಿಯಾಗಿ ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು. ಪವರ್ ಪಾಲಿಟಿಕ್ಸ್ ಬೇಡ, ಪೀಪಲ್ ಪಾಲಿಟಿಕ್ಸ್ ಮಾಡುವೆ ಎಂದು ಹೇಳಿದರೆಂದು ಸಿಎಂ ತಿಳಿಸಿದರು.

ಸಿದ್ದಾರ್ಥ ಸಿಂಗ್ ಸಾಮಾನ್ಯರಲ್ಲಿ ಸಾಮಾನ್ಯ. ಅವರ ವಿಷನ್‌ನಿಂದ ಈ ಕ್ಷೇತ್ರಕ್ಕೆ ಭವಿಷ್ಯ ಇದೆ. ಸಿದ್ದಾರ್ಥ ಸಿಂಗ್ ಗ್ರಾಮ ವಾಸ್ತವ್ಯ ಮಾಡಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಹೊಸಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುರಿತು ಮಾತನಾಡಿದರು. ಇದೇ ವೇಳೆ ಪಕ್ಷ ತೊರೆದು ಹೋದ ನಾಯಕರ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿರುವ ಪ್ರಶ್ನೆಗೆ ಉತ್ತರಿಸಿ, ಫ್ಲೈಟ್ ಎಲ್ಲಿ ಹೋಯ್ತು ಅನ್ನೋದು ಮುಖ್ಯ ಅಲ್ಲ, ಡೆಸ್ಟಿನೇಷನ್ ಮುಖ್ಯ. ಬಿಜೆಪಿಯಲ್ಲಿ ಪ್ರಧಾನಿ ಮೋದಿಯವರು ಕಾಲ, ಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಸಿಎಂ ಬದಲಾವಣೆ ಮಾಡೋ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ. ಬಿಜೆಪಿ ಗಟ್ಟಿಯಾಗಿ ಬೆಳೆದಿದೆ ಎಂದು ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.

ಟಿಕೆಟ್ ನೀಡುವಲ್ಲಿ ಹಲವಾರು ಸರ್ವೇ ಮತ್ತು ಬೇರೆ ಬೇರೆ ಕಾರಣಗಳಿಗೆ ಬದಲಾವಣೆ ಆಗಿದೆ. ಪಕ್ಷಕ್ಕೆ ಬದಲಾವಣೆ ನಿಭಾಯಿಸುವ ಶಕ್ತಿ ಇದೆ. ಕೆಲವು ಹಿರಿಯರು ತಾವೇ ಘೋಷಣೆ ಮಾಡಿ ನಿವೃತ್ತಿ ಹೊಂದಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಕೂಡ ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಿದ್ದಾರೆ. ಆನಂದ್ ಸಿಂಗ್‌ಗೆ ವಯಸ್ಸು ಇತ್ತು. ಅವರ ಜೊತೆ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಹಲವರು ತಾವು ಹಿಂದೆ ಸರಿದು ಯುವಕರಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ:​ ಜಗದೀಶ್ ಶೆಟ್ಟರ್ ಸಹ ಯುವಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಅವರಿಗೆ ಹೈಕಮಾಂಡ್ ದೆಹಲಿ ಮಟ್ಷದಲ್ಲಿ ದೊಡ್ಡ ಜವಾಬ್ದಾರಿ ಕೊಡುವ ಭರವಸೆ ನೀಡಿದ್ದರು. ಪಕ್ಷ ಅವರಿಗೆ ದೊಡ್ಡ ಸ್ಥಾನಮಾನಗಳನ್ನು ಕೊಟ್ಟಿದೆ. ಅವರು ಶಾಸಕರಾಗಲು ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಇಂತಹ ನಾಯಕರು ಯಾರೇ ಪಕ್ಷ ಬಿಟ್ಟು ಹೋದರೂ ಅವರಿಂದ ಯಾವುದೇ ನಷ್ಟವಿಲ್ಲ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದು ನಷ್ಟವಿಲ್ಲ. ಪಕ್ಷಕ್ಕೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಲಿಂಗಾಯತರ ಕೋಟೆ ಬಿಜೆಪಿಯಲ್ಲಿ ಭದ್ರವಾಗಿದೆ. ಬಿಜೆಪಿ ಗುರುತಿಸಿದ ನಂತರ ಇವರೆಲ್ಲ ನಾಯಕರಾದರು. ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕರು. ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಿರುವುದಕ್ಕೆ ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂದರು.

ಇದನ್ನೂ ಓದಿ :ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಟಿಕೆಟ್​ ವಂಚಿತ ಕೆ.ಎಸ್.ದಿವಾಕರ್

ABOUT THE AUTHOR

...view details