ಕರ್ನಾಟಕ

karnataka

UPSC ಪರೀಕ್ಷೆಯಲ್ಲಿ ಬೆಳಗಾವಿ ಪ್ರತಿಭೆಗಳ ಸಾಧನೆ: ರೈತರ ಮಕ್ಕಳಿಗೆ ಒಲಿದ ಯಶಸ್ಸು

By

Published : May 23, 2023, 5:01 PM IST

Updated : May 25, 2023, 5:41 PM IST

ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರಾದ ಶೃತಿ ಯರಗಟ್ಟಿ 362ನೇ ರ‍್ಯಾಂಕ್‌, ಆದಿನಾಥ ಪದ್ಮಣ್ಣ ತಮದಡ್ಡಿ 566 ಹಾಗೂ ಅಕ್ಷಯಕುಮಾರ್ ರಾಜಗೌಡ ಪಾಟೀಲ್ 746ನೇ ರ‍್ಯಾಂಕ್‌ ಪಡೆದಿದ್ದಾರೆ.

ಬೆಳಗಾವಿ ಯುವತಿ ಶೃತಿ
ಬೆಳಗಾವಿ ಯುವತಿ ಶೃತಿ

ಬೆಳಗಾವಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಬೆಳಗಾವಿ ಜಿಲ್ಲೆಯ ಮೂವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶೃತಿ ಯರಗಟ್ಟಿ ಅವರು 362ನೇ ರ‍್ಯಾಂಕ್‌ ಮತ್ತು ಆದಿನಾಥ ಪದ್ಮಣ್ಣ ತಮದಡ್ಡಿ 566 ಹಾಗೂ ಅಕ್ಷಯಕುಮಾರ್ ರಾಜಗೌಡ ಪಾಟೀಲ್ 746ನೇ ರ‍್ಯಾಂಕ್‌ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿಯಾಗಿರುವ ಶೃತಿ ಯರಗಟ್ಟಿ ಅವರು ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರು. ಶಿರಢಾಣ ಗ್ರಾಮದ ಡಾ ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಶೃತಿ, ಕೆಸಿಡಿ ಧಾರವಾಡದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿಎಸ್‌ಸಿ ವ್ಯಾಸಂಗ ಮಾಡಿ 7 ಚಿನ್ನದ ಪದಕ ಗಳಿಸಿದ್ದ ಶೃತಿ ಯರಗಟ್ಟಿ, ಈಗ ಆರನೇ ಬಾರಿ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಗುರಿ ಮುಟ್ಟಿದ್ದಾರೆ.

ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ, ಮಹಾನಂದಾ ದಂಪತಿಯ ಹಿರಿಯ ಪುತ್ರಿ ಆಗಿರುವ ಶೃತಿ ಅವರು ಸದ್ಯ ಬೆಂಗಳೂರಿನ ವಿಜಯನಗರದ ಪಿಜಿಯಲ್ಲಿ ವಾಸವಿದ್ದಾರೆ. ಮಗಳ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ರೈತರ ಮಕ್ಕಳ ಸಾಧನೆ: ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಅಕ್ಷಯಕುಮಾರ್ ರಾಜಗೌಡ ಪಾಟೀಲ್ ರೈತ ಕುಟುಂಬದಲ್ಲಿ ಜನಿಸಿ, ಪಿಯುಸಿವರೆಗಿನ ಶಿಕ್ಷಣವನ್ನು ಮೈಸೂರಿನ ರಾಮಕೃಷ್ಣಾಶ್ರಮ ಶಾಲೆಯಲ್ಲಿ ಮುಗಿಸಿದ್ದಾರೆ. ಬಳಿಕ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ದೆಹಲಿಗೆ ತೆರಳಿದ ಅಕ್ಷಯ ಅವರು ನಿರಂತರವಾಗಿ ಯುಪಿಎಸ್​ಸಿ ಪರೀಕ್ಷೆಗಾಗಿ ಅಧ್ಯಯನ ಮಾಡಿ, 6ನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ.

ಹಾಗೆಯೇ ಕಾಗವಾಡ ತಾಲೂಕಿನ ಉಗಾರ ಬದ್ರುಕ್ ಗ್ರಾಮದ ರೈತ ಕುಟುಂಬದ ಆದಿನಾಥ ಪದ್ಮಣ್ಣ ತಮದಡ್ಡಿ 566ನೇ ರ‍್ಯಾಂಕ್‌ ಗಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ವರೆಗೆ ಉಗಾರ ಬದ್ರುಕ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರುವ ಆದಿನಾಥ ಅವರು ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬೆಂಗಳೂರಿನ ಬಿಎಂಎಸ್ ಕಾಲೇಜ್‍ನಲ್ಲಿ 2017ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ಯುಪಿಎಸ್​ಸಿ ಪರೀಕ್ಷೆಗಾಗಿ ಅಧ್ಯಯನ ನಡೆಸಿದ್ದ ಅವರು ದೆಹಲಿಯಲ್ಲಿ ಒಂದು ವರ್ಷ ಕೋಚಿಂಗ್ ಪಡೆದಿದ್ದು, 5ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 2022ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಆದಿನಾಥ ಅವರು ಪ್ರಸ್ತುತ ಪ್ರೊಬೇಷನರಿ ತಹಶೀಲ್ದಾರ್ ಹುದ್ದೆಯಲ್ಲಿ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದಿನಾಥ ತಂದೆ ಪದ್ಮಣ್ಣ ಕೃಷಿಕರಾಗಿದ್ದು, ತಾಯಿ ನಿರ್ಮಲಾ ಗೃಹಿಣಿಯಾಗಿದ್ದಾರೆ. ಮಗ ಯುಪಿಎಸ್​ಸಿ ಪಾಸಾದ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಸಂಭ್ರಮ ಇಮ್ಮಡಿಗೊಂಡಿತ್ತು.

ಯಲಗೂರೇಶಅರ್ಜುನ ನಾಯಕ 890ನೇ ರ‍್ಯಾಂಕ್‌: ವಿಜಯಪುರದ ಯಲಗೂರೇಶ ಅರ್ಜುನ ನಾಯಕ (ರೋಲ್​ ನಂಬರ್​ 7301629) 890ನೇ ರ‍್ಯಾಂಕ್‌ ಪಡೆದಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಸರೂರ ತಾಂಡಾ ನಿವಾಸಿ. ತಂದೆ - LIC Agency ಮಾಡುತ್ತಿದ್ದರು. ಈಗ ಇಲ್ಲ. ತಾಯಿ - ಗೃಹಿಣಿ. ಇಬ್ಬರು ಸಹೋದರರು, 3 ಜನ ಅಕ್ಕಂದಿರು. ಇದರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಅಣ್ಣ ಮೈಸೂರಿನಲ್ಲಿ ಪೊಲೀಸ್ ಪೇದೆ. ತಮ್ಮ ಕಾಂಪಿಟೀಟಿವ್ ಎಕ್ಸಾಂ ಸ್ಟಡಿ ಮಾಡುತ್ತಿದ್ದಾರೆ.

ಶಿವಮೊಗ್ಗದ ಐ ಎನ್ ಮೇಘನಾಗೆ 617ನೇ ರ‍್ಯಾಂಕ್‌: ಕೇಂದ್ರ ಲೋಕಸೇವಾ ಆಯೋಗ ಇಂದು ಮಂಗಳವಾರ ಫಲಿತಾಂಶ ಪ್ರಕಟಿಸಿದೆ. ಶಿವಮೊಗ್ಗ ಹಾಲ್ಕೊಳ ಬಡಾವಣೆಯ ನಿವಾಸಿ, ನಿವೃತ್ತ ಡಿಸಿಎಫ್ ಐ. ಎಂ ನಾಗರಾಜ್ ಹಾಗೂ ಜಿ ಜಿ ನಮಿತಾ ದಂಪತಿಯ ಪುತ್ರಿಯಾದ ಐ ಎನ್ ಮೇಘನಾ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಮೇಘನಾ ಅಖಿಲ ಭಾರತ ಮಟ್ಟದಲ್ಲಿ 617ನೇ ರ‍್ಯಾಂಕ್‌ ಪಡೆದಿದ್ದಾರೆ. ಮೇಘನಾ ಬೆಂಗಳೂರಿನ ವಿಜಯನಗರದ ಇನ್‌ಸೈಟ್ಸ್‌ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಜಿಲ್ಲೆ ಬಂಡೀಪುರ ಹಾಗೂ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದು, ಶಿವಮೊಗ್ಗದ ಸಾಂದೀಪನಿ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ಶಿವಮೊಗ್ಗದ ಪೇಸ್‌ ಕಾಲೇಜಿನಲ್ಲಿ ಮುಗಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ:ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್​ ಈ ವರ್ಷದ ಟಾಪರ್​

Last Updated :May 25, 2023, 5:41 PM IST

ABOUT THE AUTHOR

...view details