ಕರ್ನಾಟಕ

karnataka

'ರಾಜ್ಯದಲ್ಲಿ ನಡೆದ ಯಾವುದೇ ಹತ್ಯೆ ಪ್ರಕರಣದ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ'

By

Published : Dec 28, 2022, 9:45 PM IST

Updated : Dec 28, 2022, 10:14 PM IST

ಪೊಲೀಸರ ನೈತಿಕತೆ ಹರಣ ಮಾಡುವ ಕೆಲಸ ಆಗಬಾರದು. ಸರ್ಕಾರ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಪಾರದರ್ಶಕ ತನಿಖೆಗೆ ಒತ್ತು ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

the-govt-does-not-interfere-in-the-investigation-of-any-murder-case-in-the-state-says-araga-jnanendra
ರಾಜ್ಯದಲ್ಲಿ ನಡೆದ ಯಾವುದೇ ಹತ್ಯೆ ಪ್ರಕರಣದ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ; ಪಾರದರ್ಶಕ ತನಿಖೆಗೆ ಒತ್ತು: ಆರಗ

ಬೆಳಗಾವಿ :ಅರಣ್ಯಾಧಿಕಾರಿ ಸಂಜೀವ್​ ಪೂಜಾರಿ ನೀಡಿರುವ ಪ್ರಕರಣ ಹಾಗೂ ಅವರ ಜೀವಕ್ಕೆ ಅಪಾಯ ಎದುರಾಗಿರುವ ಪ್ರಕರಣದ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರಿನಲ್ಲಿ ರಾತ್ರಿ ನಿದ್ರಿಸುತ್ತಿದ್ದ ಜನರ ಮೇಲೆ ಕೈ ಬಾಂಬುಗಳನ್ನು ಸಿಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ನಿಯಮ 330ರ ಅಡಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತಿತರ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಮಂಗಳೂರು ಪ್ರಕರಣವನ್ನು ನಾವು ಲಘುವಾಗಿ ಪರಿಗಣಿಸಿಲ್ಲ. ಸೂಕ್ತ ತನಿಖೆ ನಡೆಸುತ್ತೇವೆ. ಪೊಲೀಸರನ್ನು ತಡೆಯುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಧರ್ಮದ ಆಧಾರದ ಮೇಲೆ ಪ್ರಕರಣ ದಾಖಲಾಗುತ್ತಿಲ್ಲ ಎಂದರು.

ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ: ವಲಯ ಅರಣ್ಯಾಧಿಕಾರಿ ಸಂಜೀವ್ ಪೂಜಾರಿ ಅವರ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ. ಇವರು ಹಿಂದು ಮಹಿಳೆಯರ ಭಜನೆ ಬಗ್ಗೆ ಕೆಟ್ಟದಾಗಿ ಬರೆದುಕೊಂಡಿದ್ದಾರೆ. ಇದಕ್ಕೆ ಸಚಿನ್ ಎಂಬುವರು ದೂರು ಸಲ್ಲಿಸಿದ್ದಾರೆ. ಇನ್ನು ತಮ್ಮ ನಿವಾಸದ ಮೇಲೆ ಬಾಂಬ್ ದಾಳಿ 20 ರಂದು ಆಗಿದೆ ಎಂದು 26ಕ್ಕೆ ದೂರು ಸಲ್ಲಿಕೆ ಆಗಿದೆ. ಪೊಲೀಸರಿಂದ ಯಾವುದೇ ವಿಳಂಬ ಆಗಿಲ್ಲ. ಸೂಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಲೀಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ನಾಲ್ವರ ಬಂಧನ ಆಗಿದೆ. ಎಲ್ಲಾ ಧರ್ಮದಲ್ಲಿ ಕೆಟ್ಟವರೂ ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ. ಮತಕ್ಕಾಗಿ ಯಾವುದೇ ಸಮುದಾಯವನ್ನು ಎತ್ತಿಕಟ್ಟಬಾರದು. ಅನಗತ್ಯವಾಗಿ ವಿವಿಧ ಪ್ರಕರಣಗಳ ವೈಭವೀಕರಣ ಬೇಡ ಎಂದರು.

ಪಾರದರ್ಶಕ ತನಿಖೆಗೆ ಒತ್ತು:ಹುಬ್ಬಳ್ಳಿ ಸ್ಫೋಟ ಪ್ರಕರಣ ಸಹ ಅದೇ ರೀತಿ ತಪ್ಪನ್ನು ಎತ್ತಿ ತೋರಿಸುತ್ತದೆ. ಹಿಂದು ಹೆಸರಿನಲ್ಲಿ ಆ ವ್ಯಕ್ತಿ ಓಡಾಡಿಕೊಂಡಿದ್ದ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನು ಸತ್ಯ ಬಾಯಿ ಬಿಡಬೇಕು. ವಿಚಾರಣೆ ನಡೆಯುತ್ತಿದೆ. ಜಲೀಲ್ ಹತ್ಯೆ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ಪೊಲೀಸರ ನೈತಿಕತೆಯನ್ನು ಹರಣ ಮಾಡುವ ಕಾರ್ಯ ಆಗಬಾರದು. ಇವರ ಶಕ್ತಿ ವೃದ್ಧಿಸುವ ಎಲ್ಲಾ ಕೆಲಸ ನಮ್ಮಿಂದ ಆಗುತ್ತಿದೆ. ಯಾವುದೇ ರೀತಿ ಸರ್ಕಾರ ತಪ್ಪಿನ ತನಿಖೆ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಪಾರದರ್ಶಕ, ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂಬ ವಿವರ ನೀಡಿದರು.

ಹರಿಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಘಟನೆಗಳು ಆತಂಕ ತರುತ್ತಿದೆ. ಕೊಲೆ, ಸಾವುನೋವು ಹೆಚ್ಚಾಗಿದೆ. ಶೈಕ್ಷಣಿಕ ಕ್ರಾಂತಿ ಮಾಡಿದ್ದ ಜಿಲ್ಲೆ, ಕೆಳ ಕ್ರಮಾಂಕಕ್ಕೆ ಕುಸಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕೊಲೆ ನಡೆಯುತ್ತಿದೆ. ಸುರತ್ಕಲ್​ನಲ್ಲಿ ನಿರಂತರವಾಗಿ ಕೊಲೆ ಆಗುತ್ತಿದೆ. ಸರ್ಕಾರ ಕೊಲೆಗಾರರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಸರ್ಕಾರ ಇದೆಯಾ ಇಲ್ಲವಾ ಎನ್ನುವ ಅನುಮಾನ ಮೂಡುತ್ತದೆ.

ಕಾಣಿಯೂರಿನಲ್ಲಿ ಉಪ ವಲಯ ಅರಣ್ಯಾಧಿಕಾರಿಯೇ ಒಂದು ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ತನಿಖೆ ಆಗಿಲ್ಲ. ಬದಲಾಗಿ ಅವರಿಗೇ ಬೆದರಿಕೆ ಒಡ್ಡುವ ಕಾರ್ಯ ಆಗಿದೆ. ಇವರಿಗೆ ಪೊಲೀಸ್ ರಕ್ಷಣೆ ಒದಗಿಸುವ ಕಾರ್ಯ ಆಗಿಲ್ಲ. ಮನೆ ಮುಂದೆ ಬಾಂಬ್ ಹಾಕಿದ್ದಾರೆ. ಕೊಲೆ ಬೆದರಿಕೆ ಇದೆ ಎಂದು ದೂರು ನೀಡಿದರೆ ತದ್ವಿರುದ್ಧವಾಗಿ ಸಬ್​ಇನ್ಸ್ ಪೆಕ್ಟರ್ ಒಬ್ಬ ಹೋಗಿ ದೂರು ಹಿಂಪಡೆಯುವಂತೆ ಬಲವಂತ ಮಾಡಿದ್ದಾರೆ. ತೆಗೆದುಕೊಳ್ಳದಿದ್ದರೆ ಬಂಧಿಸುವ ಬೆದರಿಕೆ ಒಡ್ಡಿದ್ದಾರೆ. ಇದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಗುಪ್ತಚರ ಇಲಾಖೆಯ ವೈಫಲ್ಯ ಕಾಡುತ್ತಿದೆ: ಕುಕ್ಕರ್ ಬ್ಲಾಸ್ಟ್ ಆಗಿರುವ ವಿಚಾರದಲ್ಲಿ ರಾಜ್ಯದ ಗುಪ್ತಚರ ಇಲಾಖೆ ವೈಫಲ್ಯ ಕಾಡುತ್ತದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಹತ್ಯೆ ಆರೋಪಿಗಳ ಮಂಪರು ಪರೀಕ್ಷೆ ಮಾಡಬೇಕು. ಇಲ್ಲಿ ಜಾತಿ, ಧರ್ಮ ಮುಖ್ಯವಲ್ಲ. ಮಂಗಳೂರಲ್ಲಿ ಕೊಲೆ ಆಗುತ್ತಿರುವುದು ಜಾತಿಗಲ್ಲ. ಪೆಟ್ರೋಲ್, ಮರಳು, ಗಾಂಜಾ ದಂಧೆಗೆ ಆಗುತ್ತಿದೆ. ಹೆಣದ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಸರ್ಕಾರ ಹೇಳಿದರೆ ಹೇಳಿಕೊಳ್ಳಲಿ. ನಾವೂ ನೋಡಿ ಬಿಡುತ್ತೇವೆ. ಇದು ಹೆಚ್ಚು ದಿನ ನಡೆಯಲ್ಲ. ಕೆಲವರನ್ನು ಪ್ರಶ್ನಿಸುವಂತೆಯೇ ಇಲ್ಲ. ಪರೇಶ್ ಮೆಸ್ತಾ ಹತ್ಯೆ ಪ್ರಕರಣದಲ್ಲಿ ಕೊಲೆ ಎಂದು ಹೇಳಲಾಗಿತ್ತು. ಆದರೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದಾಗ ಸತ್ಯ ಬಯಲಿಗೆ ಬಂದಿದೆ. ಸತ್ಯ ಬಯಲಾಗಿದೆ ಎಂದರು.

ಮಧ್ಯ ಪ್ರವೇಶಿಸಿದ ಸಭಾನಾಯಕರು, ಪರೇಶ್ ಮೆಸ್ತಾ ಅವರ ತಂದೆ ಸಿಎಂ ಬಸವರಾಜ್​ ಬೊಮ್ಮಾಯಿ ಬಳಿ ಬಂದು ಮಾತನಾಡಿದ್ದಾರೆ. ಸಾವು ಸಂಭವಿಸಿದ ಆರೇಳು ದಿನದ ನಂತರ ಎಫ್​ಐಆರ್ ದಾಖಲಾಗಿದೆ. ಇದರಿಂದ ಸಾಕ್ಷಿನಾಶ ಆಗಿದೆ. ಇದರಿಂದ ತಮ್ಮ ಮಗನ ಸಾವಿನ ಮರು ತನಿಖೆ ಆಗಬೇಕೆಂದು ಮನವಿ ಮಾಡಿದ್ದಾರೆ. ಸಿಎಂ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ : ಇದೇ ವಿಚಾರದ ಮೇಲೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ನಜೀರ್ ಅಹ್ಮದ್, ಪ್ರಕಾಶ್ ರಾಥೋಡ್, ಆಯನೂರು ಮಂಜುನಾಥ್ ಮಾತನಾಡಿದರು.
ಸಚಿವರ ಉತ್ತರದ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನಾವು ಗೃಹ ಸಚಿವರಿಂದ ಉತ್ತಮ ಉತ್ತರ ನಿರೀಕ್ಷಿಸಿದ್ದೆವು. ಆದರೆ ಅವರು ಬಿಜೆಪಿ ನಾಯಕರ ರೀತಿ ಮಾತನಾಡಿದ್ದಾರೆ. ಅವರು ಗೃಹ ಸಚಿವರಾಗಲು ನಾಲಾಯಕ್ ಎಂದರು. ಆಗ ಆಡಳಿತ ಪಕ್ಷ ಸದಸ್ಯರು ಗದ್ದಲ ಮಾಡಿದರು. ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಪದೇ ಪದೇ ವಿವಿಧ ವಿಚಾರಗಳ ಮೇಲೆ ವಾಗ್ವಾದ ನಡೆಯಿತು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸಭಾಪತಿ ಬಸವರಾಜ್ ಹೊರಟ್ಟಿಯವರು ಸದನವನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದರು.

ಇದನ್ನೂ ಓದಿ :ಕೈಗಾರಿಕಾ ಕ್ಷೇತ್ರದ ಅಭಿೃವೃದ್ಧಿಗೆ ದೇಶಪಾಂಡೆರಿಂದ ಅಮೂಲ್ಯ ಕೊಡುಗೆ: ಸಿಎಂ ಬೊಮ್ಮಾಯಿ ಗುಣಗಾನ

Last Updated : Dec 28, 2022, 10:14 PM IST

ABOUT THE AUTHOR

...view details