ಕರ್ನಾಟಕ

karnataka

ಇನ್ಸ್​ಟಾಗ್ರಾಮ್​ನಲ್ಲಿ ಬಾಲಕರ ನಡುವೆ ವಾಗ್ವಾದ: ಓರ್ವನ ಕೊಲೆಯಲ್ಲಿ ಅಂತ್ಯ

By ETV Bharat Karnataka Team

Published : Sep 27, 2023, 1:16 PM IST

Updated : Sep 27, 2023, 5:07 PM IST

ಇನ್ಸ್​ಟಾಗ್ರಾಮ್​ನಲ್ಲಿ ಬಾಲಕರ ನಡುವೆ ವಾಗ್ವಾದ ನಡೆದಿದ್ದು ಓರ್ವ ಬಾಲಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಇದು ಬೆಳಗಾವಿಯಲ್ಲಿ ನಡೆದಿದ್ದರೆ, ಗಾರೆ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರುವ ಮತ್ತೊಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬಾಲಕರ ನಡುವೆ ವಾಗ್ವಾದ
ಬಾಲಕರ ನಡುವೆ ವಾಗ್ವಾದ

ಮೃತ ಬಾಲಕನ ಸಂಬಂಧಿಕರು

ಬೆಳಗಾವಿ:ಇನ್ಸ್​ಟಾಗ್ರಾಮ್​ನಲ್ಲಿ ಚಾಟಿಂಗ್ ಮಾಡುತ್ತಿದ್ದಾಗ ಒಂದೇ ಊರಿನ ಬಾಲಕರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ಓರ್ವ ಬಾಲಕನ ಜೀವ ತೆಗೆಯುವ ಮಟ್ಟಕ್ಕೂ ಹೋಗಿರುವ ಘಟನೆ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ ಸುಂಕದ(16) ಮೃತ ಬಾಲಕ.

ಮಲ್ಲಪ್ಪ ಹಾಗೂ ಮಲ್ಲವ್ವ ದಂಪತಿಯ ಎರಡನೇ ಮಗನಾದ ಪ್ರಜ್ವಲ್, ಈಗತಾನೇ ಕಾಲೇಜು ಮೆಟ್ಟಿಲು ಹತ್ತಿದ್ದ. ಇತ್ತೀಚೆಗೆ ತಮ್ಮದೇ ಊರಿನ ಗೆಳೆಯರ ಜೊತೆಗೆ ಇನ್ಸ್​ಟಾಗ್ರಾಮ್​ನಲ್ಲಿ ಜಗಳವಾಗಿತ್ತು. ಇದು ಕೇವಲ ವಾಗ್ವಾದಕ್ಕೆ ಸಿಮೀತವಾಗದೇ ಆತನ ಜೀವ ತೆಗೆಯುವ ಹಂತಕ್ಕೂ ಹೋಗಿದೆ.

ಮಂಗಳವಾರ ಸಾಯಂಕಾಲ 6 ಗಂಟೆ ಸುಮಾರಿಗೆ ತಮ್ಮ ಮನೆ ಮುಂದೆ ನಿಂತಿದ್ದ ಪ್ರಜ್ವಲ್ ಮೇಲೆ ಐವರು ಬಾಲಕರ ತಂಡ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್​ನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಉಸಿರು ಚೆಲ್ಲಿದ್ದಾನೆ.

ಘಟನೆ ಬಗ್ಗೆ ಮೃತ ಪ್ರಜ್ವಲ್ ಸಂಬಂಧಿಕ ಬಸಪ್ಪ ದೊಡಮನಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವದ ಮಹಾಪ್ರಸಾದವಿತ್ತು‌. ಈ ವೇಳೆ ಕೆಲವರು ಏಕಾಏಕಿ ಬಂದು ಹೊಡೆದಿದ್ದಾರೆ. ಈ ಹುಡುಗರ ನಡುವೆ ಏನು ಗಲಾಟೆ ಇತ್ತೋ ಗೊತ್ತಿಲ್ಲ. ಸಣ್ಣಪುಟ್ಟ ಜಗಳ ಇದ್ದರೂ ಇರಬಹುದು. ಏನೇ ಇದ್ದರೂ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಕೊಲೆ ಮಾಡೋ ಹಂತಕ್ಕೆ ಹೋಗಬಾರದಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಈ ರೀತಿ ಮಚ್ಚು ತಗೊಂಡು ಹೊಡೆದಾಡಿದವರು ಮುಂದೆ ಏನಾಗಬಹುದು ಎಂದರು.

ಮೃತ ಬಾಲಕನ ಮಾವ ಬಸಪ್ಪ ಹಣಮಂತಪ್ಪ ದುಬ್ಬನಮರಡಿ ಮಾತನಾಡಿ, ಅಳಿಯನನ್ನು ಕಳೆದುಕೊಂಡು ಹೊಟ್ಟೆ ಉರಿಯುತ್ತಿದೆ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಕಣ್ಣೀರು ಹಾಕಿದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದ ಕಿತ್ತೂರು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಯುವಕನ ಕೊಲೆ:ಹಾಡಹಗಲೇ ಮಾರಕಾಸ್ತ್ರಗಳಿಂದ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಮತ್ತೊಂದು ಘಟನೆ ಹುಬ್ಬಳ್ಳಿಯ ಸಿಲ್ವರ್ ಟೌನ್​ನಲ್ಲಿ ನಡೆದಿದೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ನಿವಾಸಿ ಮೌಲಾಲಿ (24) ಎಂದು ಗುರುತಿಸಲಾಗಿದೆ.

ಈತ ಹುಬ್ಬಳ್ಳಿಗೆ ಗಾರೆ ಕೆಲಸ ಮಾಡಲು ಬಂದಿದ್ದ. ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿಯೇ ಕಳೆದ ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

Last Updated : Sep 27, 2023, 5:07 PM IST

ABOUT THE AUTHOR

...view details