ಕರ್ನಾಟಕ

karnataka

ಬೆಳಗಾವಿ ತಹಶೀಲ್ದಾರ್ ಅಶೋಕ ಮಣ್ಣಿಕೇರಿ ಅಂತ್ಯಕ್ರಿಯೆ: ನನ್ನ ಕೈಯನ್ನೇ ಕಳೆದುಕೊಂಡ ನೋವಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

By

Published : Jun 29, 2023, 9:45 PM IST

ಬೆಳಗಾವಿಯ ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಅವರ ಅಂತ್ಯಕ್ರಿಯೆಯನ್ನು ಇಂದು ಕುಟುಂಬಸ್ಥರು ನೆರವೇರಿಸಿದರು.

ತಹಶಿಲ್ದಾರ್ ಅಶೋಕ ಮಣ್ಣಿಕೇರಿ
ತಹಶಿಲ್ದಾರ್ ಅಶೋಕ ಮಣ್ಣಿಕೇರಿ

ತಹಶಿಲ್ದಾರ್ ಅಶೋಕ ಮಣ್ಣಿಕೇರಿ ಅಂತಿಮ‌ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ : ಬೆಳಗಾವಿ ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಕೆಎಲ್ಇ ‌ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ‌ವೈಭವ ನಗರದ ಮನೆಗೆ ಮೃತದೇಹವನ್ನು ತರಲಾಯಿತು. ಕುಟುಂಬಸ್ಥರು, ಸ್ನೇಹಿತರ ಆಕ್ರಂದನ‌ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್ ಸೇರಿ ಹಲವು ಅಧಿಕಾರಿಗಳು ಅಂತಿಮ ದರ್ಶನ ಪಡೆದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ನಿನ್ನೆ ರಾತ್ರಿ 3 ಗಂಟೆ ಸುಮಾರಿಗೆ ನನ್ನ ಮೊಬೈಲ್‌ನಲ್ಲಿ ಎರಡ್ಮೂರು ಮಿಸ್‌ಕಾಲ್ ಇತ್ತು. ಅಶೋಕ್ ಮಣ್ಣಿಕೇರಿ ಮೊಬೈಲ್‌ನಿಂದ ಮತ್ತು ಅವರ ಧರ್ಮಪತ್ನಿ ಮೊಬೈಲ್​ನಿಂದ ಮಿಸ್ ಕಾಲ್ ಇತ್ತು. ಬೆಳಗ್ಗೆ 5.30ಕ್ಕೆ ಮಿಸ್ ಕಾಲ್ ನೋಡಿ ನಾನು ಕರೆ ಮಾಡಿದೆ. ಆಗ ಅವರ ತಮ್ಮನ ಹೆಂಡತಿ ಫೋನ್ ರಿಸೀವ್ ಮಾಡಿ ಹೇಳಿದಾಗ ವಿಷಯ ಗೊತ್ತಾಯ್ತು."

"2018ರಿಂದ 2023ರವರೆಗೆ ನಾಲ್ಕೂವರೆ ವರ್ಷ ನನ್ನ ಆಪ್ತ ಕಾರ್ಯದರ್ಶಿ ಆಗಿದ್ದರು. ರಾತ್ರಿ ಹಗಲೆನ್ನದೆ ಕೆಲಸ ಮಾಡಿ ಕ್ಷೇತ್ರದ ಜನರ ಕಷ್ಟ,ಸುಖಕ್ಕೆ ಸ್ಪಂದಿಸುತ್ತಿದ್ದರು. ಅತ್ಯಂತ ಸರಳ ವ್ಯಕ್ತಿ. ಅವರನ್ನು ನಾನು ಆತ್ಮೀಯ ಸಹೋದರ ಅಂತಾನೇ ಹೇಳುತ್ತೇನೆ. ಇಂತಹ ಆಪ್ತ ಸಹಾಯಕನ ಕಳೆದುಕೊಂಡಿದ್ದಕ್ಕೆ ಬಹಳ ಬೇಜಾರಾಗುತ್ತಿದೆ."

"ನಾನು ಮಂತ್ರಿ ಆದ ಮೇಲೆ ಮಂತ್ರಿ ಗಾಡಿ ಹತ್ತುತ್ತೇನೆ ಅಂತ ಬಹಳ ಆಸೆ ಪಟ್ಟಿದ್ದ. ಮತ್ತೆ ಕರೆಸಿಕೊಳ್ಳೋಣ ಅಂತಾ ಮೊನ್ನೆ ನಾನು ಲೆಟರ್ ಸಹ ಕೊಟ್ಟಿದ್ದೆ. ಸರ್ಕಾರಕ್ಕೆ ವಿನಂತಿ ಮಾಡಿ ನನ್ನ ಇಲಾಖೆಗೆ ಕರೆಯಿಸಿಕೊಳ್ಳೋಣ ಅಂತಾ ಪತ್ರ ಕೊಟ್ಟಿದ್ದೆ. ನನಗೆ ನನ್ನ ಕೈಯನ್ನೇ ಕಳೆದುಕೊಂಡ ಬೇಜಾರಿದೆ" ಎಂದರು.

ಅಶೋಕ್ ಮಣ್ಣಿಕೇರಿ ಸಾವಿನ ಬಗ್ಗೆ ಅನುಮಾನ ಇದೆ ಎಂದು ಸಹೋದರಿಯರು ಇಂದು ಪೊಲೀಸರಿಗೆ ದೂರು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಏನೇ ಇದ್ದರೂ ಕಾನೂನು ಇದೆ. ಕಾನೂನಾತ್ಮಕವಾದ ಕೆಲಸ ನಡೆಯುತ್ತೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅಂತ್ಯಕ್ರಿಯೆ ವೇಳೆ ನೂಕಾಟ, ತಳ್ಳಾಟ:ವೈಭವ ನಗರದ‌ ಮನೆಯಿಂದ ಸದಾಶಿವ ನಗರದ ಸ್ಮಶಾನಕ್ಕೆ ಅಂತ್ಯಕ್ರಿಯೆಗಾಗಿ ಅಶೋಕ ಮಣ್ಣಿಕೇರಿ ಮೃತದೇಹವನ್ನು ತರಲಾಯಿತು. ಪೊಲೀಸ್ ಬಂದೋಬಸ್ತ್‌ನಲ್ಲಿ ಸ್ಮಶಾನಕ್ಕೆ ಅಶೋಕ್ ಪತ್ನಿ ಭೂಮಿ ಆಗಮಿಸುತ್ತಿದ್ದಂತೆ ಜನರ ನೂಕಾಟ, ತಳ್ಳಾಟ ನಡೆಯಿತು. ಗದ್ದಲ ಶುರುವಾಗುತ್ತಿದ್ದಂತೆ ಪತ್ನಿಯನ್ನು ಪೊಲೀಸ್ ಜೀಪ್​ನಲ್ಲಿ ಕೂರಿಸಲಾಯಿತು. ಮುಂಜಾಗ್ರತೆ ಕ್ರಮವಾಗಿ ಸ್ಮಶಾನದ ಮುಂದೆ ಒಂದು ಕೆಎಸ್ಆರ್​ಪಿ ತುಕಡಿ ನಿಯೋಜಿಸಲಾಗಿತ್ತು. ಗದ್ದಲದ ನಡುವೆಯೇ ಅಶೋಕ ಮಣ್ಣಿಕೇರಿ ಅಂತ್ಯಕ್ರಿಯೆ ನೆರವೇರಿತು.

ಇದನ್ನೂ ಓದಿ:Tahsildar death: ಬೆಳಗಾವಿ ತಹಶೀಲ್ದಾರ್ ಅಶೋಕ್​ ಮಣ್ಣಿಕೇರಿ ಸಾವು: ಪೊಲೀಸರಿಗೆ ದೂರು ನೀಡಿದ ಸಹೋದರಿಯರು

ABOUT THE AUTHOR

...view details