ಕರ್ನಾಟಕ

karnataka

ರಾಜ್ಯಮಟ್ಟದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕೆ ಅದ್ಧೂರಿ ತೆರೆ

By

Published : Oct 26, 2022, 7:13 AM IST

ಎರಡು ದಿನಗಳ ಕಾಲ ಅದ್ಧೂಯಾಗಿ ಸಂಗೀತ ರಸ ಸಂಜೆ ಮತ್ತು ಆಟೋಟ ಸ್ಪರ್ಧೆಗಳಿಂದ ಕಿತ್ತೂರು ಉತ್ಸವ ಕಿತ್ತೂರು ಕೋಟೆಯಲ್ಲಿ ಕಳೆಕಟ್ಟಿತ್ತು.

State Level Kittoor Utsav Concluding Ceremony
ರಾಜ್ಯಮಟ್ಟದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕೆ ಅದ್ಧೂರಿ ತೆರೆ

ಬೆಳಗಾವಿ: ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ರಾಣಿ ಚನ್ನಮ್ಮನ ಕಿತ್ತೂರು ಉತ್ಸವ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಎರಡು ದಿನಗಳ ಕಾಲ ನಡೆಸಲಾಯಿತು.

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಕಿತ್ತೂರು ಕೋಟೆ ಆವರಣದಲ್ಲಿ ಮೊದಲ ಬಾರಿಗೆ ನಡೆದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಸೋಮವಾರ ಬೆಳಗ್ಗೆ ಅದ್ಧೂರಿ ಮೆರವಣಿಗೆ ಮೂಲಕ ನಾಂದಿ ಹಾಡಿದ್ದ ಉತ್ಸವದಲ್ಲಿ ಎರಡು ದಿನ ಜನ ಇನ್ನಿಲ್ಲದಂತೆ ಸಂಭ್ರಮಿಸಿದರು.

ಈ ಹಬ್ಬಕ್ಕೆ ನಾಡಿನ ಮೂಲೆಮೂಲೆಯಿಂದ ಕನ್ನಡ ಹೃದಯಗಳು ಸಮಾವೇಶಗೊಂಡವು. ಮೂರು ಸಮಾನಾಂತರ ವೇದಿಕೆಗಳಲ್ಲಿ ತಲಾ 40 ಸಾಂಸ್ಕೃತಿ, ಸಾಹಿತ್ಯದ ಕಾರ್ಯಕ್ರಮಗಳು, ವಿವಿಧ ವಿಚಾರ ಗೋಷ್ಠಿಗಳು ಐತಿಹಾಸಿಕ ಹಾಗೂ ಸೈದ್ಧಾಂತಿಕ ವಿಚಾರಗಳಿಗೆ ವೇದಿಕೆಯಾದವು. ಜನಪದ, ಲಂಬಾಣಿ, ಶಾಸ್ತ್ರೀಯ ಸಂಗೀತ, ಕಂಟೆಂಪರರಿ ನೃತ್ಯಗಳು, ಸಿನಿಮಾ ಗೀತೆಗಳ ಗಾಯನವನ್ನು ಜನ ತಡರಾತ್ರಿಯವರೆಗೂ ಆಸ್ವಾದಿಸಿದರು.

ಕಿತ್ತೂರು ಉತ್ಸವದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಗಮನ ಸೆಳೆಯಿತು. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ 234 ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 55 ಕೆಜಿ ಮಹಿಳೆಯರ ವಿಭಾಗದಲ್ಲಿ ಹಳಿಹಾಳದ ಗಾಯತ್ರಿ ಸುತಾರ್ ಗೆಲ್ಲುವ ಮೂಲಕ ರಾಣಿ ಚನ್ನಮ್ಮ ಕಿಶೋರಿ ಪ್ರಶಸ್ತಿಗೆ ಪಾತ್ರರಾದರು.

ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ತೆರೆ,ಕೈಕೊಟ್ಟ ಹಲವು ಜನಪ್ರತಿನಿಧಿಗಳು:ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಹಲವು ಜನಪ್ರತಿನಿಧಿಗಳು ಕೈ ಕೊಟ್ಟಿದ್ದು ಎದ್ದು ಕಾಣುತ್ತಿತ್ತು. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಸೇರಿ ಹಲವು ಸಚಿವರು ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿದರೂ ಸಮಾರಂಭಕ್ಕೆ ಹಾಜರಾಗಿದ್ದು, ಕೆಲವೇ ಕೆಲವು ಜನಪ್ರತಿನಿಧಿಗಳು ಮಾತ್ರ. ಇಂದಿನ ಸಮಾರೋಪ ಸಮಾರಂಭದ ಘನ ಉಪಸ್ಥಿತಿ ವಹಿಸಬೇಕಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಗೈರಾಗಿದ್ದರು.

ರಾಜ್ಯಮಟ್ಟದ ಉತ್ಸವ ಮಾಡಿದರೂ ಬೆಳಗಾವಿ ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ಶಾಸಕರು ಭಾಗಿಯಾಗಲಿಲ್ಲ. ಬಿಜೆಪಿ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮಹಾದೇವಪ್ಪ ಯಾದವಾಡ, ಶ್ರೀಮಂತ್ ಪಾಟೀಲ್, ಮಹೇಶ್ ಕುಮಟಳ್ಳಿ, ಪಿ.ರಾಜೀವ್, ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಗೈರಾಗಿದ್ದರು. ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಕಿತ್ತೂರು ಉತ್ಸವಕ್ಕೆ ಬಾರದೇ ಬೇಜವಾಬ್ದಾರಿ ತೋರಿದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉತ್ಸವದ ಸಮಾರೋಪ ಸಮಾರಂಭದ ಬಳಿಕ ಖ್ಯಾತ ಗಾಯಕ ರಘು ದಿಕ್ಷಿತ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಿಕ್ಕಿರಿದು ಸೇರಿದ್ದ ಜನರು ರಘು ಗಾನಕ್ಕೆ ತಲೆಬಾಗಿ ಕುಣಿದು ಕುಪ್ಪಳಿಸಿದರು. ಮೂರು ಗಂಟೆಗಳ ಕಾಲ ರಘು ದಿಕ್ಷಿತ್ ಸಂಗೀತ ಕಾರ್ಯಕ್ರಮ ನೀಡಿ ರಂಜಿಸಿದರು.

ಇದನ್ನೂ ಓದಿ :ಝಾನ್ಸಿರಾಣಿ ಬ್ರಿಟಿಷರ ವಿರುದ್ಧ ಹೋರಾಡುವ ಮೊದಲೇ ಕಿತ್ತೂರು ಚೆನ್ನಮ್ಮ ಹೋರಾಡಿದ್ದರು: ಸಿಎಂ

ABOUT THE AUTHOR

...view details