ಕರ್ನಾಟಕ

karnataka

ಆಪ್ತ ಸ್ನೇಹಿತ ಡಿ ಬಿ ಇನಾಮದಾರ್ ಪಾರ್ಥಿವ ಶರೀರಕ್ಕೆ ಸಿದ್ದರಾಮಯ್ಯ ಅಂತಿಮ ನಮನ

By

Published : Apr 26, 2023, 12:41 PM IST

ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಡಿ ಬಿ ಇನಾಮದಾರ್​ ಅವರು ನಿನ್ನೆ ಆಸ್ಪತ್ರೆಯಲ್ಲೇ ನಿಧನ ಹೊಂದಿದರು.

Siddaramaiah pays last respects to body of DB Inamadar
ಡಿ ಬಿ ಇನಾಮದಾರ್ ಪಾರ್ಥಿವ ಶರೀರಕ್ಕೆ ಸಿದ್ದರಾಮಯ್ಯ ಅಂತಿಮ ನಮನ

ಬೆಳಗಾವಿ:ಅನಾರೋಗ್ಯದಿಂದ ನಿಧನರಾದ ಮಾಜಿ ಸಚಿವ ಡಿ ಬಿ ಇನಾಮದಾರ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಜಿಲ್ಲೆಯ ಹಿರಿಯ ರಾಜಕಾರಣಿ ಡಿ.ಬಿ. ಇನಾಮದಾರ್ ಅವರ ಪಾರ್ಥಿವ ಶರೀರ ಬೆಳಗ್ಗೆ 5 ಗಂಟೆಗೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಸ್ವಗ್ರಾಮಕ್ಕೆ ಆಗಮಿಸಿತು. ಪಾರ್ಥಿವ ಶರೀರವನ್ನು ಗ್ರಾಮದ ವಿಜಯಶ್ರೀ ವಿದ್ಯಾದಾಯಿನಿ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಈ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಂತಿಮ‌ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಇತ್ತೀಚೆಗೆ ಇಟಗಿ ಕ್ರಾಸ್​ನಲ್ಲಿ ಡಿ.ಬಿ‌. ಇನಾಮದಾರ್ ಅವರು ಪ್ರಜಾಧ್ವನಿ ಯಾತ್ರೆಯ ದೊಡ್ಡ ಸಭೆ ಮಾಡಿದ್ದರು. ಹೀಗೆ ಅವರಿಗೆ ಕಾಯಿಲೆ ಬರುತ್ತದೆ ಎಂದುಕೊಂಡಿರಲಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿರುವ ನಮ್ಮ ಮೈಸೂರಿನ ವೈದ್ಯರ ಜೊತೆಗೆ ನಾನು ಮಾತಾಡಿದ್ದೆ.

ಗುಣಮುಖರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾನು ಕೂಡ ಗುಣಮುಖ ಆಗಬಹುದು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ನನಗಿಂತ ವಯಸ್ಸಲ್ಲಿ ಒಂದು ವರ್ಷ ಚಿಕ್ಕವರು. ಸಾಯುವ ವಯಸ್ಸು ಏನಲ್ಲ, ಚೆನ್ನಾಗಿಯೇ, ತುಂಬಾ ಗಟ್ಟಿಯಾಗೇ ಇದ್ದರು. ಆರೋಗ್ಯವಂತರಾಗಿಯೇ ಕಾಣಿಸುತ್ತಿದ್ದರು. ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ರಾಜಕೀಯದಲ್ಲಿ ಅವರದ್ದೇ ಆದ ಛಾಪು ಮೂಡಿಸಿದ್ದರು. ರಾಜಕಾರಣದಲ್ಲಿ ಪ್ರಾಮಾಣಿಕರಾಗಿ ಇರುವುದು ತೀರಾ ವಿರಳ. ಆದರೆ, ಡಿ.ಬಿ. ಇನಾಮದಾರ್ ಅವರು ತಮ್ಮ ನಾಲ್ಕು ದಶಕಗಳ ಕಾಲ ಪ್ರಾಮಾಣಿಕವಾಗಿ ಜನರ ಸೇವೆ ಸಲ್ಲಿಸಿದ್ದರು. ಈ ಭಾಗದ ಜನ ಅವರನ್ನು ಧಣಿ ಅಂತಾನೆ ಕರೆಯುತ್ತಿದ್ದರು. ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಅದೇ ರೀತಿ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ ಮತ್ತು ಹಲವಾರು ಗಣ್ಯರು, ಶಾಸಕರು, ನಾಡಿನ ಮಠಾಧೀಶರು ಸೇರಿ ಸಾವಿರಾರು ಅಭಿಮಾನಿಗಳು ಆಗಮಿಸಿ ಡಿ.ಬಿ. ಇನಾಮದಾರ್ ಅವರಿಗೆ ಅಂತಿಮ ನಮನ‌ ಸಲ್ಲಿಸಿದರು. ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿಯಿಂದಲೂ ಅಧಿಕಾರಿಗಳು ಆಗಮಿಸಿ ಗೌರವ ವಂದನೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಇದಾದ ಬಳಿಕ ಅವರ ತೋಟದಲ್ಲಿ ಲಿಂಗಾಯತ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಗೌರವದೊಂದಿಗೆ ಡಿ.ಬಿ. ಇನಾಮದಾರ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ABOUT THE AUTHOR

...view details