ಕರ್ನಾಟಕ

karnataka

ಸತೀಶ್​ ಜಾರಕಿಹೊಳಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಬಿಜೆಪಿ ಮುಖಂಡ ರವಿ ಹಂಜಿ ಆರೋಪ

By

Published : Aug 16, 2023, 9:49 PM IST

Updated : Aug 16, 2023, 10:56 PM IST

ಯಮಕನಮರಡಿಯಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಟ್ಟಡ ಕೆಡವಲು ಸಂಚು ಮಾಡಿದ್ದಾರೆ ಎಂದು ರವಿ ಹಂಜಿ ಆರೋಪ ಮಾಡಿದ್ದಾರೆ.

ಬಿಜೆಪಿ ಮುಖಂಡ ರವಿ ಹಂಜಿ
ಬಿಜೆಪಿ ಮುಖಂಡ ರವಿ ಹಂಜಿ

ಯಮಕನಮರಡಿ ಬಿಜೆಪಿ ಮುಖಂಡ ರವಿ ಹಂಜಿ ಆರೋಪ

ಬೆಳಗಾವಿ : ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಚಾರಿಟೇಬಲ್ ಸಂಘದ ಕಟ್ಟಡ ಕೆಡವಲು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸಂಚು ರೂಪಿಸಿದ್ದಾರೆ ಎಂದು ಯಮಕನಮರಡಿ ಬಿಜೆಪಿ ಮುಖಂಡ ರವಿ ಹಂಜಿ ದೂರಿದ್ದಾರೆ.

ಯಮಕರಮಡಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜೀವ್ ಗಾಂಧಿ ಚಾರಿಟೇಬಲ್ ವತಿಯಿಂದ 4 ಗುಂಟೆ ಜಮೀನಿನಲ್ಲಿ ಕಳೆದ 2003ರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸಚಿವರು ಮತ್ತು ಅವರ ಕೆಳಗಿರುವ ಜನರು ನಾವು ರಸ್ತೆಯನ್ನು ಅತಿಕ್ರಮಣ ಮಾಡಿದ್ದೇವೆ ಎಂದು ಅಧಿಕಾರವನ್ನು ಬಳಸಿಕೊಂಡು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ನಮ್ಮ ಹತ್ತಿರ ಸಮಗ್ರ ದಾಖಲಾತಿ ಇದ್ದರೂ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೊಳಗಾಗಿ ದಾಖಲಾತಿ ಪರಿಶೀಲನೆ ಮಾಡುತ್ತಿಲ್ಲ ಎಂದು ಹೇಳಿದರು.

1993ರಲ್ಲಿ ನಮ್ಮ ತಂದೆ ಕೋಆಪರೇಟಿವ್ ಬ್ಯಾಂಕ್ ಕಟ್ಟಲು ಹುಣಶಿಕೊಳ್ಳ ಮಠದ ಶ್ರೀಗಳ ಬಳಿ ಜಮೀನು ಕೇಳಿದರು. ಶ್ರೀ ಗುರುಸಿದ್ಧ ಸ್ವಾಮಿಗಳು ಸಾರ್ವಜನಿಕ ಬಳಕೆಗಾಗಿ 8 ಗುಂಟೆ ಜಮೀನು ಕೊಟ್ಟಿದ್ದರು. ಬಳಿಕ ಪಂಚಾಯಿತಿಯಿ‌ಂದ ಎನ್ಎ ಮಾಡಿ ಅನುಮತಿ ಪಡೆದು ಕೋಆಪರೇಟಿವ್ ಬ್ಯಾಂಕ್ ಕಟ್ಟಿದ್ದರು. 2003ರಲ್ಲಿ 4 ಗುಂಟೆ ಜಾಗ ವಿದ್ಯಾವರ್ಧಕ ಸಂಘಕ್ಕೆ ನೀಡಲಾಗಿತ್ತು. ಬಳಿಕ ರಾಜೀವ್‌ಗಾಂಧಿ ಚಾರಿಟೇಬಲ್ ಆಸ್ಪತ್ರೆ ಕಟ್ಟಲಾಗಿತ್ತು.

ಇದೀಗ ಜಾರಕಿಹೋಳಿ ಕೆಳಗಿರುವವರು 1886ರ ಮ್ಯಾಪ್ ಪ್ರಕಾರ ಕಾಲಾದಿ ರಸ್ತೆ ಇದೆ ಎಂದು ಅರ್ಜಿ ಕೊಡುತ್ತಾರೆ. ಅವರು ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮಾಡಿದ್ದಾರೆ. ನಾನೇನೂ ಈ ಜಾಗದಲ್ಲಿ ಮನೆ ಕಟ್ಟಿಲ್ಲ. ಬಡವರಿಗಾಗಿ ಆಸ್ಪತ್ರೆ ಕಟ್ಟಿಸಿದ್ದೇನೆ. ಅಧಿಕಾರಿಗಳು ಬೇರೆ ಸ್ಥಳದ ನೊಟೀಸ್ ನೀಡಿ ಇನ್ನೊಂದು ಸ್ಥಳವನ್ನು ಅಳತೆ ಮಾಡುವುದಕ್ಕೆ ಮುಂದಾಗಿದ್ದು, ಇಲ್ಲಿ ನ್ಯಾಯಾಂಗ ನಿಂದನೆ ಆಗಿದೆ. ಅಧಿಕಾರಿಗಳು ಮಿಸ್‌ಗೈಡ್ ಮಾಡುತ್ತಿದ್ದಾರೆ. ಎಲ್ಲಾ ರೀತಿ ಕಾನೂನು ಪ್ರಕಾರ ಅನುಮತಿ ಪಡೆದು ಕಟ್ಟಡ ಕಟ್ಟಿದ್ದೇವೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಅಧಿಕಾರಿಗಳು 50 ಅಡಿ ರಸ್ತೆ ಬರುತ್ತೆ, ಮುಂದೆ ಸಾಗಿದರೆ 10 ಅಡಿ ರಸ್ತೆ ಆಗುತ್ತೆ ಎಂದು ಹೇಳುತ್ತಾರೆ. ಎಲ್ಲಾದರು ಈ ರೀತಿ ರಸ್ತೆ ಇರುವುದಕ್ಕೆ ಸಾಧ್ಯವೇ ಎಂದು ರವಿ ಹಂಜಿ ಪ್ರಶ್ನೆ ಮಾಡಿದರು.

ಸತೀಶ್ ಜಾರಕಿಹೊಳಿ ಹೇಳಿಕೆ: ಈ ಆರೋಪಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಲು ಅವನಿಗೆ ಅಧಿಕಾರ ಕೊಟ್ಟಿದ್ದಾರಾ? ಅದನ್ನು ನೀವು ಅವನನ್ನು ಕೇಳಬೇಕು ಎಂದು ರವಿ ಹಂಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಕಟ್ಟಿದ ಜಾಗ ಸರ್ಕಾರಿ ಜಾಗ, ಹಿಂದೆ 30 ವರ್ಷದ ಹಿಂದೆ ಯಾರೂ ಕೇಳಿಲ್ಲ, ನೋಡಿಲ್ಲ. ಈಗ ನೋಡಿ ಕೋರ್ಟ್‌ ಮೊರೆ ಹೋಗಿದ್ದರಿಂದ ಕೋರ್ಟ್ ನಿರ್ದೇಶನ ನೀಡಿದೆ. ಆ ಪ್ರಕಾರ ಅಧಿಕಾರಿಗಳು ಕಾರ್ಯವನ್ನು ಮಾಡುತ್ತಿದ್ದಾರೆ.

ಖಾಲಿ ಇದೆ ಅಂತಾ ಫೈವ್‌ಸ್ಟಾರ್ ಹೋಟೆಲ್ ಕಟ್ಟಿದ್ರೆ ಕೇಳ್ತಾರಾ? ಅಲ್ಲಿ ರಸ್ತೆ ಒತ್ತುವರಿ ಆಗಿದೆ ಎಂದು ರವಿ ಹಂಜಿ ಬಗ್ಗೆ ಅರ್ಜಿ ಕೊಟ್ಟಿದ್ದಾರೆ. ಈ ಕಾನೂನು ಪ್ರಕ್ರಿಯೆ ಎರಡು ವರ್ಷದಿಂದ ನಡೀತಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜಕೀಯ ದ್ವೇಷದ ಪ್ರಶ್ನೆ ಬರಲ್ಲ. ಬಿಜೆಪಿಗೆ ಸಪೋರ್ಟ್ ಮಾಡಿದವರು 60 ಸಾವಿರ ಇದ್ದಾರೆ. ಅವರ ವಿರುದ್ಧ ಹೇಗೆ ನಾವು ದ್ವೇಷದ ರಾಜಕಾರಣ ಮಾಡಲು ಬರುತ್ತದೆ? ಎಂದರು.

ಅಧಿಕಾರಿಗಳು ಮತ್ತು ರವಿ ಹಂಚಿ ನಡುವೆ ವಾಗ್ವಾದ : ಹತ್ತರಗಿ ಗ್ರಾಮದ ದಡ್ಡಿ ಕ್ರಾಸ್‌ನಿಂದ ರಿ.ಸ.ನಂ. 444, 445ಕ್ಕೆ ಹೊಂದಿಕೊಂಡ ರಸ್ತೆಯನ್ನು ಇವತ್ತು ಅಧಿಕಾರಿಗಳು ಅಳತೆಗೆ ಬರುತ್ತಿದ್ದಂತೆ ಬಿಜೆಪಿ ಮುಖಂಡ ರವಿ ಹಂಜಿ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ವಿರೋಧದ ನಡುವೆಯೂ ಗಡಿ ನಿರ್ಧರಿಸಿ ಮಾರ್ಕಿಂಗ್ ಹಾಕಿ ಅಧಿಕಾರಿಗಳು ಹಿಂದಿರುಗಿದರು.

ಇದನ್ನೂ ಓದಿ :D.K.Shivakumar: ಎಲ್ಲರ ಮಾತು ಮುಗಿಯಲಿ, ನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ- ಡಿ.ಕೆ.ಶಿವಕುಮಾರ್

Last Updated : Aug 16, 2023, 10:56 PM IST

ABOUT THE AUTHOR

...view details