ಕರ್ನಾಟಕ

karnataka

ಬೆಳಗಾವಿ: ನಾಳೆ 'ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್' ಉದ್ಘಾಟನೆ

By ETV Bharat Karnataka Team

Published : Jan 16, 2024, 2:19 PM IST

Updated : Jan 16, 2024, 3:34 PM IST

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನು ಆಕರ್ಷಕವಾಗಿ ಕಟ್ಟಿ ಕೊಟ್ಟಿರುವ ರಾಕ್ ಗಾರ್ಡನ್ ಅನ್ನು ನಾಳೆ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸುವರು.

ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಉದ್ಘಾಟನೆ
ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಉದ್ಘಾಟನೆ

ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಉದ್ಘಾಟನೆ

ಬೆಳಗಾವಿ:ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳನ್ನು ಬಿಂಬಿಸುವ ಶಿಲ್ಪವನ (ರಾಕ್ ಗಾರ್ಡನ್) ಮತ್ತು ಸೈನಿಕ ಶಾಲೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದ ಶೌರ್ಯ ಭೂಮಿಯಲ್ಲಿ ನಿರ್ಮಿಸಿರುವ ಈ ರಾಕ್​ ಗಾರ್ಡನ್​ ಅನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ

10 ಎಕರೆ ವಿಶಾಲ ಪ್ರದೇಶದಲ್ಲಿ 12 ಕೋಟಿ ರೂ ಅನುದಾನದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚೆನ್ನಮ್ಮಾಜಿ ಜೀವನದ‌ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ. ರಾಯಣ್ಣನ ಹೋರಾಟದ ಕುರಿತಾಗಿರುವ ಮೂರ್ತಿಗಳು, ಗರಡಿ ಮನೆ, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಧಾರವಾಡ ಜೈಲುವಾಸ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು, ಡೋರಿ-ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ತನ್ನ ಏಳು ಜನ ಸಹಚರರೊಂದಿಗೆ ನಂದಗಡದಲ್ಲಿ ಗಲ್ಲಿಗೆ ಏರುವ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುತ್ತವೆ.

ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ:100 ಎಕರೆ ಪ್ರದೇಶದಲ್ಲಿ‌ 150 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ ಬೃಹತ್ ಕ್ರೀಡಾ ಮೈದಾನ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್, ಹಾಕಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಸಂಬಂಧಿಸಿದ ಆಟದ ಮೈದಾನವನ್ನು ಸಿದ್ಧಪಡಿಸಲಾಗಿದೆ. ಜನವರಿ 17 ಮತ್ತು 18ರಂದು ಸಂಗೊಳ್ಳಿ ಉತ್ಸವ ಆಯೋಜಿಸಲಾಗಿದ್ದು, ಉತ್ಸವಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಸೈನಿಕ ಶಾಲೆ ಮತ್ತು ರಾಕ್ ಗಾರ್ಡನ್ ಉದ್ಘಾಟಿಸಲಿದ್ದಾರೆ.

ವಕೀಲರಾದ ಉಮೇಶ್​ ಲಾಳ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಮನಮೋಹಕವಾಗಿ ರಾಯಣ್ಣನ ಶಿಲ್ಪವನ ತಯಾರಾಗಿದೆ. ಒಂದೊಂದು ಶಿಲ್ಪವು ಒಂದೊಂದು ಕಥೆ ಹೇಳುತ್ತದೆ. ರಾಯಣ್ಣನ ಹುಟ್ಟಿನಿಂದ ಗಲ್ಲಿಗೆ ಏರುವ ತನಕ ಎಲ್ಲ ಸಂದರ್ಭವನ್ನು ತುಂಬಾ ಚೆನ್ನಾಗಿ ಕಟ್ಟಿಕೊಡಲಾಗಿದೆ. ಉತ್ಸವದ ಸಂದರ್ಭದಲ್ಲಿ ಇದು ಲೋಕಾರ್ಪಣೆ ಆಗುತ್ತಿರುವುದು ನಮಗೆ ಸಂತಸ ಮತ್ತು ಹೆಮ್ಮೆಯ ಸಂಗತಿ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ" ಎಂದರು.

ಇದನ್ನೂ ಓದಿ:ಶ್ರೀರಾಮ ಮೂರ್ತಿ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯ: 'ಅಳಿಲು ಸೇವೆಯ ಧನ್ಯತೆ'

Last Updated : Jan 16, 2024, 3:34 PM IST

ABOUT THE AUTHOR

...view details