ಕರ್ನಾಟಕ

karnataka

ಬೆಳಗಾವಿ: ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ.. ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಅಂಗಲಾಚಿದ ಜನರು

By

Published : Jul 3, 2023, 6:05 PM IST

Updated : Jul 3, 2023, 6:26 PM IST

ಜಮೀನು ವಿವಾದ ಸಂಬಂಧ ಗೂಂಡಾಗಳನ್ನು ಬಿಟ್ಟು ಅಮಾನುಷವಾಗಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ರೈತರು ಮತ್ತು ಬೆಕ್ಕಿನಕೇರಿ ಗ್ರಾಮಸ್ಥರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

protest-against-assault-on-people-for-land-dispute
ಬೆಳಗಾವಿ: ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ... ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಅಂಗಲಾಚಿದ ಜನರು

ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ.. ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಅಂಗಲಾಚಿದ ಜನರು

ಬೆಳಗಾವಿ:ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ರೈತರು ಮತ್ತು ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್​ ಧರಣಿ ನಡೆಸಿದರು.

ಗೂಂಡಾಗಳಿಂದ ತಮ್ಮ ತಲೆ, ಭುಜ, ಬೆನ್ನು ಮತ್ತು ಹೊಟ್ಟೆ ಮೇಲೆ ಆಗಿರುವ ಗಾಯಗಳನ್ನು ತೋರಿಸಿ, ಕಣ್ಣೀರು ಸುರಿಸಿದರು. ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನಮಗಾದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಕಾಲಿಗೆ ಬಿದ್ದು ಅಂಗಲಾಚಿದರು.

ಬೆಕ್ಕಿನಕೇರಿ ಗ್ರಾಮದಲ್ಲಿನ ಸರ್ವೇ ಸಂಖ್ಯೆ 85/1, 2ರಲ್ಲಿನ ಜಮೀನನ್ನು ಕೃಷ್ಣಾ ಸಾವಂತ ಕುಟುಂಬದವರು 80 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಜಮೀನಿನ ಹಕ್ಕು ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ, ಎರಡು ವರ್ಷಗಳ ಹಿಂದೆ ದಾಖಲೆಗಳಲ್ಲಿದ್ದ ಕೃಷ್ಣಾ ಸಾವಂತ ಮತ್ತು ಅವರ ಪುತ್ರರಾದ ನಾಗೋ, ಮಾರುತಿ ಅವರ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿದರು.

ಗೂಂಡಾಗಳ ಕಳಿಸಿ ಹಲ್ಲೆ ಆರೋಪ:ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ತಾಂತ್ರಿಕ ದೋಷದಿಂದ ಹೆಸರುಗಳನ್ನು ಅಳಿಸಿ ಹಾಕಿರಬಹುದು, ಮತ್ತೆ ಹೆಸರು ಸೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿರಲಿಲ್ಲ. ಈ ಮಧ್ಯೆ ಇತ್ತೀಚೆಗೆ ಸಾವಂತ ಕುಟುಂಬವು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಲು ಹೋದಾಗ ಸುನೀಲ ಜಾಧವ್​ ಗೂಂಡಾಗಳನ್ನು ಕಳಿಸಿ ನಮ್ಮ‌ ಮನೆಯ ಹತ್ತು ಜನರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಮಕ್ಕಳನ್ನೂ ಲೆಕ್ಕಿಸದೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಇದು ನಾಲ್ಕನೇ ಬಾರಿ ನಮ್ಮ ಮೇಲೆ ನಡೆದ ಹಲ್ಲೆಯಾಗಿದ್ದು, ನಮಗೆ ರಕ್ಷಣೆ ಕೊಡಬೇಕು ಎಂದು ಸಾವಂತ ಕುಟುಂಬಸ್ಥರು ಮನವಿ ಮಾಡಿಕೊಂಡರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ್ ಮಾತನಾಡಿ, ''ಇದೊಂದು ರಾಜಕೀಯ ಪ್ರೇರಿತ ಹಲ್ಲೆಯಾಗಿದೆ. ಒಂದು ವಾರದಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇಷ್ಟೆಲ್ಲಾ ಆದರೂ ಯಾರೂ ಕೂಡ ಸೌಜನ್ಯಕ್ಕಾದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಪೊಲೀಸರು ಕೂಡ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸುತ್ತಿಲ್ಲ'' ಎಂದು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡ ಪ್ರಕಾಶ ನಾಯಕ, ಬೆಕ್ಕಿನಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಬ್ಬುಬಾಯಿ ಕಾಂಬಳೆ, ಕೃಷ್ಣಾ ಸಾವಂತ, ನಾಗೋ ಸಾವಂತ, ಮಾರುತಿ ಸಾವಂತ, ಗಂಗಾರಾಮ ಸಾವಂತ ಸೇರಿ ಮತ್ತಿತರರು ಇದ್ದರು.

Last Updated : Jul 3, 2023, 6:26 PM IST

ABOUT THE AUTHOR

...view details