ಕರ್ನಾಟಕ

karnataka

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಚಾಲೆಂಜ್ : ಪ್ರಲ್ಹಾದ್ ಜೋಶಿ

By

Published : Feb 28, 2022, 1:31 PM IST

ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಚಾಲೆಂಜ್ ಆಗಿದೆ. ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ನಡೆಸಿದ್ದೇವೆ. ಅವರ ಸಹಯೋಗ ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ. ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ‌. ಇಂದೂ ಸಹ ವಿಮಾನಗಳು ಭಾರತಕ್ಕೆ ಬರುತ್ತಿವೆ. ಭಾರತ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ..

ಸಚಿವ ಪ್ರಹ್ಲಾದ್ ಜೋಶಿ
ಸಚಿವ ಪ್ರಹ್ಲಾದ್ ಜೋಶಿ

ಬೆಳಗಾವಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಚಾಲೆಂಜ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಈಗಿನ ವಾಸ್ತವಿಕ ಚಿತ್ರಣ, ಅಲ್ಲಿಂದ ಬರುವ ವಿಡಿಯೋಗಳು ಎಲ್ಲ ಸತ್ಯವೋ, ಸುಳ್ಳೋ ಎಂದು ವೆರಿಫಿಕೇಷನ್ ಆಗುತ್ತಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿನ್ನೆ ಎರಡು ವಿಮಾನಗಳು ಭಾರತಕ್ಕೆ ಬಂದಿವೆ. ನಮ್ಮ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ನಡೆಸಿದ್ದೇವೆ. ಅವರ ಸಹಯೋಗ, ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ ಎಂದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಸಚಿವ ಪ್ರಲ್ಹಾದ್ ಜೋಶಿ

ದೆಹಲಿ, ಮುಂಬೈ ಯಾವುದಾದರೂ ಪ್ರಮುಖ ನಗರ ಆಯ್ಕೆ ಮಾಡಿದ್ರೆ ವಿದ್ಯಾರ್ಥಿಗಳನ್ನು ಕರೆತರಲು ಭಾರತ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರ ಸನ್ನಿವೇಶ. ಉಕ್ರೇನ್ ಜೊತೆಯೂ ನಮ್ಮ ಮಾತುಕತೆ ನಡೆಯುತ್ತಿದೆ.

ನಾನು ಕೂಡ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ರಾಜ್ಯ ಸಚಿವರ ಜೊತೆ ಸಂಪರ್ಕದಲ್ಲಿದ್ದೇನೆ. ಕ್ಲಿಷ್ಟಕರ ಸನ್ನಿವೇಶ ಇರುವುದರಿಂದ ರಷ್ಯಾದ ಜೊತೆಯೂ ಮಾತನಾಡಬೇಕಾಗುತ್ತದೆ, ಉಕ್ರೇನ್ ಜೊತೆಯೂ ಮಾತನಾಡಬೇಕಾಗುತ್ತೆ ಎಂದರು‌.

ನಮ್ಮ ನಾಗರಿಕರನ್ನ ಸುರಕ್ಷಿತವಾಗಿ ಕರೆತರೋದು ನಮ್ಮ ಆದ್ಯತೆ. ಇದು ಬಹುದೊಡ್ಡ ಚಾಲೆಂಜ್ ಕೂಡ ಹೌದು. ಈ ಹಿಂದೆ ಇರಾಕ್, ಆಫ್ಘಾನಿಸ್ತಾನದಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿತ್ತು.

ಉಕ್ರೇನ್‌ನಲ್ಲಿ ನಿರೀಕ್ಷೆಗಿಂತ ಬೇಗ ಯುದ್ಧ ಶುರುವಾಗಿರುವುದರಿಂದ ಸಮಸ್ಯೆ ಆಗಿದೆ. ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ‌. ಇಂದೂ ಸಹ ವಿಮಾನಗಳು ಭಾರತಕ್ಕೆ ಬರುತ್ತಿವೆ. ಭಾರತ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿ ಪ್ರಯತ್ನ ಮಾಡುತ್ತಿದೆ ಎಂದರು.

ABOUT THE AUTHOR

...view details