ಕರ್ನಾಟಕ

karnataka

ಜನವರಿಯಿಂದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್‌ ವಿತರಣೆ: ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Dec 4, 2023, 7:45 PM IST

ಶಾಲಾ ಹೆಣ್ಣು ಮಕ್ಕಳಿಗೆ ಅತ್ಯಗತ್ಯವಾಗಿರುವ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ- ಸಚಿವ ದಿನೇಶ್ ಗುಂಡೂರಾವ್.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ/ಬೆಂಗಳೂರು : ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದ್ದು, ಜನವರಿಯಿಂದ ಶಾಲೆ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್​ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಶುಚಿ ಒಂದು ಮಹತ್ವದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ.‌ ಆದರೆ ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿಸಿ ಬಹುತೇಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.‌

10 ವರ್ಷದಿಂದ 18 ವರ್ಷಗಳ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್ಕಿನ್​ಗಳನ್ನು ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್​ಗಳನ್ನು ವಿತರಿಸಲಾಗುತ್ತಿತ್ತು. ಈ ಬಾರಿ ನೇರವಾಗಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್​ಗಳನ್ನು ವಿತರಿಸುವಂತೆ ಏಜನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.‌

40.50 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಸಂಪೂರ್ಣ ಹಣಕಾಸನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೆರವು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಗುಂಡೂರಾವ್, ಪ್ರಾಯೋಗಿಕವಾಗಿ ಮೆನ್ ಸ್ಟ್ರಲ್ ಮುಟ್ಟಿನ ಕಪ್ ಗಳನ್ನ ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್​ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

2030 ರೊಳಗೆ ಅಪೌಷ್ಠಿಕತೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ :ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್ ಅವರು ವಿಷಯ ಪ್ರಸ್ತಾಪಿಸಿ, ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಮಹಿಳೆಯರು ಮತ್ತು ಮಕ್ಕಳು ಬಳಲುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಅನೀಮಿಯಾದಿಂದ ಬಳಲುತ್ತಿರುವ ಮಹಿಳೆಯರು ಮತ್ತು ಹದಿಹರೆಯದವರ ಸಂಖ್ಯೆ ಸುಮಾರು 2 ಕೋಟಿ ಎಂದು ಗುರುತಿಸಲಾಗಿದೆ. ಇದರ ನಿವಾರಣೆಗೆ 185 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, 2030 ರ ವೇಳೆಗೆ ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣ ಹತ್ಯೆ ಕುರಿತಂತೆ ಸದಸ್ಯ ಯು.ಬಿ. ವೆಂಕಟೇಶ್ ಪ್ರಸ್ತಾಪಿಸಿದರು. ಈ ಪ್ರಕರಣವನ್ನು ಈಗಾಗಲೇ ಸಿಒಡಿ ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :ಅರಣ್ಯದಲ್ಲಿ ಶೇ.40ರಷ್ಟು ಕಳೆ, ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿರುವುದು ನಿಜ : ಅರಣ್ಯ ಸಚಿವ ಈಶ್ವರ ಖಂಡ್ರೆ

ABOUT THE AUTHOR

...view details