ಕರ್ನಾಟಕ

karnataka

ಜಾಲತಾಣಗಳಲ್ಲಿ ಕನ್ನಡ ಪರ ಪೋಸ್ಟ್ ಮಾಡುವ ಅಡ್ಮಿನ್​ಗಳಿಗೆ ಎಂಇಎಸ್ ‌ಪುಂಡರ ಬೆದರಿಕೆ

By

Published : Oct 28, 2021, 10:12 AM IST

ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್​ ಪುಂಡರ ಹಾವಳಿ ಹೆಚ್ಚಾಗಿದೆ. ಕನ್ನಡ ಪರ ಪೋಸ್ಟ್ ಹಾಕುವವರಿಗೆ ಪುಂಡರು ಬೆದರಿಕೆ ಹಾಕ್ತಿದ್ದಾರೆ ಎನ್ನಲಾಗಿದೆ.

MES activists
ಎಂಇಎಸ್ ‌ಪುಂಡರ ಬೆದರಿಕೆ

ಬೆಳಗಾವಿ: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ನಾಡದ್ರೋಹಿ ಎಂಇಎಸ್ ಪುಂಡರು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಕನ್ನಡ ಪರ ಪೋಸ್ಟ್ ಹಾಕಿದ್ದ ಫೇಸ್‌ಬುಕ್ ಪುಟಗಳ ಅಡ್ಮಿನ್‌ಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯೋತ್ಸವ ಹಾಗೂ ಕರಾಳದಿನ ವಿಚಾರವಾಗಿ ಎಂಇಎಸ್ ಮತ್ತು ಕನ್ನಡಿಗರ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ನಡೆಯುತ್ತಿದೆ. ಕನ್ನಡ ಪರ ಧ್ವನಿ ಎತ್ತುವ ಬೆಳಗಾವಿ ಫೇಸ್‌ಬುಕ್ ಪುಟದ ಅಡ್ಮಿನ್ ಮನೆಗೆ ನುಗ್ಗಿ ಹೊಡೀತಿವಿ ಎಂದು ಎಂಇಎಸ್ ಪುಂಡರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಇನ್​ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ನಾಡದ್ರೋಹಿಗಳ ವಿರುದ್ಧ ಕನ್ನಡಿಗರು ತಿರುಗಿ ಬಿದ್ದಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಇಎನ್ ಪೊಲೀಸರಿಗೆ ದೂರು ನೀಡಲಾಗಿದೆ.

ನಿಲ್ಲದ ಎಂಇಎಸ್​​ ಪುಂಡಾಟ

ಎಂಇಎಸ್​ ವಿರುದ್ಧ ದೂರು ದಾಖಲಿಸಿದ್ರೂ, ಅವರ ಉಪಟಳ ಮಾತ್ರ ನಿಂತಿಲ್ಲ. ನವೆಂಬರ್ 1 ರಂದು 'ಕರಾಳ ದಿನ' ಆಚರಣೆಗೆ ಎಂಇಎಸ್​ ಪುಂಡರು ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ ಫೇಸ್‌ಬುಕ್ ಫ್ರೇಮ್ ಅಭಿಯಾನ ಆರಂಭಿಸಿದ್ದಾರೆ. ಫೇಸ್‌ಬುಕ್ ಪೇಜ್‌ನಲ್ಲಿ ಫ್ರೇಮ್ ಲಿಂಕ್ ಪೋಸ್ಟ್ ಮಾಡಿ ಉದ್ಧಟತನ ಮೆರೆದಿದ್ದಾರೆ.

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಪ್ರದೇಶಗಳು ಸಂಯುಕ್ತ ಮಹಾರಾಷ್ಟ್ರ ಸೇರಲೇಬೇಕು ಎಂದು ಫೇಸ್​ಬುಕ್​ನಲ್ಲಿ ಬರೆದಿದ್ದು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಅಭಿಯಾನ ಶುರು ಮಾಡಿದ್ದಾರೆ.

ಕನ್ನಡದ ಅನ್ನ ತಿಂದು ಮಹಾರಾಷ್ಟ್ರಕ್ಕೆ ಜೈ ಎನ್ನುತ್ತಿರುವ ನಾಡದ್ರೋಹಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕ್ರಮ ಕೈಗೊಳ್ಳುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ. ಸಿಇಎನ್ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳುವಂತೆ ಆಗ್ರಹವೂ ಕೇಳಿ ಬರುತ್ತಿದೆ. ಅ.25ರಂದು ಕಾನೂನು ಉಲ್ಲಂಘಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಎಂಇಎಸ್ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಕನ್ನಡಪರ ಸಂಘಟನೆಗಳ ನಿರ್ಧಾರ

ABOUT THE AUTHOR

...view details