ಕರ್ನಾಟಕ

karnataka

200 ಸಿಬ್ಬಂದಿ ಚಿರತೆ ಪತ್ತೆ ಕಾರ್ಯಾದಲ್ಲಿ ಭಾಗಿ, ಚಳ್ಳೆ ಹಣ್ಣು ತಿನ್ನಿಸುತ್ತಿದೆಯಾ ಮೃಗ?

By

Published : Aug 19, 2022, 9:32 PM IST

ಆಗಸ್ಟ್ 5 ರಂದು ಬೆಳಗಾವಿಯ ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಕಣ್ಮರೆಯಾಗಿತ್ತು. ಇದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಇಂದು 200 ಸಿಬ್ಬಂದಿ ಭಾಗಿಯಾಗಿದ್ದರು. ಆದರೂ ಚಿರತೆ ಮಾತ್ರ ಕಂಡುಬಂದಿಲ್ಲ.

200 ಸಿಬ್ಬಂದಿ ಚಿರತೆ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿ
200 ಸಿಬ್ಬಂದಿ ಚಿರತೆ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿ

ಬೆಳಗಾವಿ: ಕಳೆದ 15 ದಿನಗಳಿಂದ ಬೆಳಗಾವಿ ನಗರದಲ್ಲಿ ಭೀತಿ ಹುಟ್ಟಿಸಿರುವ ಚಿರತೆ ಪತ್ತೆಗೆ ಶಸ್ತ್ರಸಜ್ಜಿತವಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ 200ಕ್ಕೂ ಸಿಬ್ಬಂದಿಯ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ನಡೆಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಚಿರತೆ ಪತ್ತೆಯಾಗದೇ ಇರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

200 ಸಿಬ್ಬಂದಿ ಚಿರತೆ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿ; ಚಳ್ಳೆ ಹಣ್ಣು ತಿನ್ನಿಸುತ್ತಿದೆಯಾ ಮೃಗ!?

ಕಳೆದ ಆಗಸ್ಟ್ 5 ರಂದು ಬೆಳಗಾವಿಯ ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಕಣ್ಮರೆಯಾಗಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಗಾಲ್ಫ್ ಮೈದಾನದಲ್ಲಿ 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಅಳವಡಿಸಿ ಚಿರತೆ ಸೆರೆಗೆ ಮುಂದಾಗಿದ್ದರು. ಈ ವೇಳೆ ಆಗಸ್ಟ್ 7 ಮತ್ತು 8ರಂದು ಎರಡು ಬಾರಿ ಗಾಲ್ಫ್ ಮೈದಾನದಲ್ಲಿ ಚಿರತೆ ಚಲನವಲನ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ದಿನದಿಂದ ದಿನಕ್ಕೆ ಜನರಲ್ಲಿ ಚಿರತೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಇವತ್ತು 200 ಸಿಬ್ಬಂದಿ ಮುಂದಿಟ್ಟುಕೊಂಡು ಚಿರತೆ ಸೆರೆಗೆ ಮುಂದಾಗಿದ್ದರು.

ಪೊಲೀಸ್ ಇಲಾಖೆ ಧ್ವನಿವರ್ಧಕಗಳ ಮೂಲಕ ಗಾಲ್ಫ್ ಪ್ರದೇಶ, ಹನುಮಾನಗರ, ಕುವೆಂಪು ನಗರ, ದೂರದರ್ಶನ ನಗರ, ಜಾಧವ ನಗರ ಹಾಗೂ ಕ್ಯಾಂಪ್ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಿದರು. ಅರಣ್ಯ ಇಲಾಖೆಯಿಂದ ಮದ್ದೇರುವ ಗುಂಡು ಹಾರಿಸಿ ಚಿರತೆಯನ್ನು ಅಸ್ವಸ್ಥಗೊಳಿಸಿ, ನಂತರ ಚಿರತೆ ಮೂರ್ಛೆ ಹೋದಾಗ ಅದನ್ನು ಬಲೆಗೆ ಹಾಕಲು ವಿಶೇಷ ಶೂಟರ್​ಗಳು ಸಹ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ರಕ್ಷಣಾ ಸಾಮಗ್ರಿ ಸಮೇತ 100ಜನ ಅರಣ್ಯ, 100ಜನ ಪೊಲೀಸ್ ಸಿಬ್ಬಂದಿ ಇದ್ದರು.‌

ಎಸಿಎಫ್ ಮಂಜುನಾಥ ಕುಸನಾಳ, ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ಇಬ್ಬರು ಅರವಳಿಕೆ ತಜ್ಞರು, ಅರವಳಿಕೆ ಮದ್ದುಸಮೇತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೈಯಲ್ಲಿ ಬಡಿಗೆ, ಹೆಲ್ಮೆಟ್, ರಕ್ಷಣಾ ವಸ್ತುಗಳ ಸಮೇತ ಕಾರ್ಯಾಚರಣೆ ನಡೆಸಲಾಯಿತು. ಆದ್ರೆ, ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಚಿರತೆ ಸಿಗುವವರೆಗೂ ಚಿರತೆ ಪತ್ತೆ ಕಾರ್ಯ ಮುಂದುವರೆಯಲಿದೆ. ಸಾರ್ವಜನಿಕರು ಭೀತಿಗೆ ಒಳಗಾಗಬಾರದು. ಗಾಲ್ಫ್ ಮೈದಾನದ ಕಡೆಗೆ ವಾಯುವಿಹಾರ ಮಾಡದಂತೆ ಬೆಳಗಾವಿ ಎಸಿಎಫ್ ಮಂಜುನಾಥ ಕುಸನಾಳ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :ಕೌಟುಂಬಿಕ ಕಲಹ ಬಗೆಹರಿಸಲು ₹40 ಸಾವಿರ ಲಂಚ ಕೇಳಿದ ಪೊಲೀಸ್: ಹಣ ನೀಡಲಾಗದೆ ಯುವಕ ಆತ್ಮಹತ್ಯೆ

ABOUT THE AUTHOR

...view details