ಕರ್ನಾಟಕ

karnataka

ಮುಂದೆ ಬಂದ್ರೆ ಹಾಯಲ್ಲ, ಹಿಂದೆ ಬಂದ್ರೆ ಒದೆಯಲ್ಲ.. ನಮ್ಮನ್ನು ಹಗುರವಾಗಿ ತಿಳಿಯಬೇಡಿ ಎಂದ ಲಕ್ಷ್ಮೀ ಹೆಬ್ಬಾಳ್ಕರ್

By

Published : Oct 8, 2022, 7:06 AM IST

ಬೇರೆ ಸಮಾಜಕ್ಕೆ ಅನ್ಯಾಯ ಮಾಡದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿ. ನಮ್ಮ ಸಮಾಜ ಇಂದು ಬಹಳಷ್ಟು ಜಾಗೃತವಾಗಿದೆ. ಪ್ರತಿ ಬಾರಿ ನಮ್ಮ ಸಮಾಜದವರ ರಾಜಕೀಯ ಸಹಕಾರ ಪಡೆದು ನಮಗೆ ಚಿಪ್ಪನ್ನು ಕೊಡ್ತಾರೆ. ಮುಂದೆ ಬಂದ್ರೆ ಹಾಯಲ್ಲ, ಹಿಂದೆ ಬಂದ್ರೆ ಒದೆಯಲ್ಲ ಅಂತೇಳಿ ನಮ್ಮನ್ನು ಹಗುರವಾಗಿ ತಿಳಿಯಬೇಡಿ ಎಂದು ವಿರೋಧಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು.

lakshmi hebbalkar
ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಪ್ರತಿಬಾರಿ ನಮ್ಮ ಸಮಾಜದವರ ರಾಜಕೀಯ ಸಹಕಾರ ಪಡೆದು ನಮಗೆ ಚಿಪ್ಪನ್ನು ಕೊಡುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಜೈ ಪಂಚಮಸಾಲಿ, ರಾಜ್ಯದಲ್ಲಿ ನಾವೇ ಶಕ್ತಿಶಾಲಿ ಎಂದು ಜನರಲ್ಲಿ ಘೋಷಣೆ ಕೂಗಿಸಿ ಭಾಷಣ ಆರಂಭಿಸಿದರು. ನನ್ನ ತಮ್ಮ ಪರಿಷತ್ ಚುನಾವಣೆಗೆ ನಿಂತಾಗ ಎರಡು ಕ್ಷೇತ್ರಕ್ಕೆ (ಗೋಕಾಕ್, ಅರಭಾವಿ) ನನಗೆ ಬರಲು ಆಗಲಿಲ್ಲ ಕ್ಷಮೆ ಇರಲಿ. ಇಡೀ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮತ ಪಡೆದು ನಿಮ್ಮ ಸಮಾಜದ ಕಿರಿಯ ಪುತ್ರ ಗೆದ್ದಿದ್ದಾನೆ.ಇಲ್ಲಿಯ ಜನರನ್ನು ನೋಡಿದ್ರೆ 440 ವೋಲ್ಟೇಜ್ ವಾತಾವರಣ ಇದೆ. ಬೇರೆ ಸಮಾಜಕ್ಕೆ ಅನ್ಯಾಯ ಮಾಡದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುತ್ತೇವೆ. ನಮ್ಮ ಸಮಾಜ ಇಂದು ಬಹಳಷ್ಟು ಜಾಗೃತವಾಗಿದೆ. ನಮ್ಮ ಸಮಾಜ ನಿಸ್ವಾರ್ಥತೆಯಿಂದ ಶ್ರಮಿಸಿದೆ. ಪ್ರತಿ ಬಾರಿ ನಮ್ಮ ಸಮಾಜದವರ ರಾಜಕೀಯ ಸಹಕಾರ ಪಡೆದು ನಮ್ಮನ್ನು ಕಡೆಗಣಿಸುತ್ತಾರೆ ಎಂದರು.

ಮೊನ್ನೆ ಅಧಿವೇಶನದಲ್ಲಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ರು‌. ಬೊಮ್ಮಾಯಿ ಸಾಹೇಬ್ರು 2ಎ ಮೀಸಲಾತಿ ಕೊಡ್ತೀವಿ ಅಂತಾ ಮಾತನ್ನು ಕೊಟ್ಟಿದ್ದಾರೆ. ಅತಿ ಶೀಘ್ರದಲ್ಲಿ ಸರ್ವಪಕ್ಷ ನಿಯೋಗದ ಸಭೆ ಕರೆದು ನಿರ್ಣಯ ತಗೊಳ್ಳಿ ಅಂತ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ. ಪ್ರತಿ ಕ್ಷೇತ್ರದಲ್ಲಿ ನಾವು 40 ಸಾವಿರ, 50 ಸಾವಿರ ಮತದಾರರು ಇದ್ದೇವೆ. ನಾವು ಬೆಣ್ಣೆ ಮಾಡಿ ಅದನ್ನು ಮಾರಿ ಮಜ್ಜಿಗೆ ಕುಡೀತಿವಿ. ಅಂತಹ ಮುಗ್ಧರು ನಮ್ಮ ಸಮಾಜದವರು‌. ಕಿತ್ತೂರು ರಾಣಿ ಚೆನ್ನಮ್ಮ ಜೊತೆ ಸಂಗೊಳ್ಳಿ ರಾಯಣ್ಣ ಬೇಕೆ ಬೇಕು. ಅನ್ಯ ಸಮಾಜದ ಜೊತೆ ಪಂಚಮಸಾಲಿ ಸಮಾಜ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಉಪ್ಪಾರ, ವಾಲ್ಮೀಕಿ, ಮುಸ್ಲಿಂ, ಅಂಬೇಡ್ಕರ್ ಸಮಾಜದ ಜೊತೆ ಉತ್ತಮ ಸಂಬಂಧವಿದೆ. ನಾವು ಬಸವಣ್ಣನ ಕುಲದವರು ಎಂದು ಹೇಳಿದರು.

ಕಲ್ಲೋಳಿ ಗ್ರಾಮದಲ್ಲಿ ಹಮ್ಮಿಕೊಂಡ ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಇದನ್ನೂ ಓದಿ:2ಎ ಮೀಸಲಾತಿ ನೀಡಿದ್ರೆ ಮಠದಲ್ಲಿ ಸಿಎಂ ಫೋಟೋ ಹಾಕುತ್ತೇವೆ: ಬಸವ ಜಯಮೃತ್ಯುಂಜಯ ಶ್ರೀ

ಇದೇ ವೇಳೆ ಅರಭಾವಿ ಕ್ಷೇತ್ರದಲ್ಲಿ ಟಿಕೆಟ್‌ ಪಡೆಯಲು ಪ್ರಯತ್ನಿಸಿ ಎಂದು ಪರೋಕ್ಷವಾಗಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್​ ಕೊಟ್ಟರು. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಮೀಸಲಾತಿ ಕೇಳುತ್ತಿದ್ದೇವೆ. ನಾನೂ ಸಹ ರೈತನ ಮಗಳು, ರೈತರಿಗೆ ಅನುಕೂಲ ಆಗಲಿ ಅಂತಾ ಶುಗರ್ ಫ್ಯಾಕ್ಟರಿ ಮಾಡಿದ್ದೇನೆ. ಪಂಚಮಸಾಲಿ ಸಮುದಾಯದವರು ಕಬ್ಬು ಬೆಳೆಯುತ್ತಾರೆ. ಒಂದು ರೊಟ್ಟಿ ಇದ್ರೆ ನಾಲ್ಕು ಜನ ಹಂಚಿಕೊಂಡು ತಿಂತೀವಿ. ತುಳಿದು ಬೆಳೆಯುವುದರಲ್ಲಿ ನಮಗೆ ವಿಶ್ವಾಸ ಇಲ್ಲ, ಬೆಳೆದು ಬೆಳೆಸೋದರಲ್ಲಿ ವಿಶ್ವಾಸವಿದೆ. ಒಮ್ಮೆ ಬೆಳೆದು ನಿಂತ್ರೆ ನೋಡಿದಿರಲ್ಲಾ ಪರಿಷತ್​ನಲ್ಲಿ ಏನಾಯ್ತು ಫಲಿತಾಂಶ?. ಮುಂದೆ ಬಂದ್ರೆ ಹಾಯಲ್ಲ, ಹಿಂದೆ ಬಂದ್ರೆ ಒದೆಯಲ್ಲ ಅಂತೇಳಿ ನಮ್ಮನ್ನು ಹಗುರವಾಗಿ ತಿಳಿಯಬೇಡಿ ಎಂದು ವಿರೋಧಿಗಳಿಗೆ ಹೆಬ್ಬಾಳ್ಕರ್​ ಟಾಂಗ್ ನೀಡಿದರು.

ಇದನ್ನೂ ಓದಿ:2ಎ ಮೀಸಲಾತಿಗೆ ಅಂತಿಮ ಗಡುವು ನೀಡಿದ ಪಂಚಮಸಾಲಿ ಕೂಡಲಸಂಗಮ ಶ್ರೀ

ಸಮಾಜಕ್ಕೆ ಒಳ್ಳೆಯದಾಗಲಿ, ಇದೇ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಲಿ. ನಾಳೆ ನಮ್ಮ ಸರ್ಕಾರ ಬಂದರೂ ನಾನು ಇದನ್ನೇ ಹೇಳುತ್ತೇನೆ. ಬೇರೆ ಸಮಾಜದವರನ್ನು ಜೊತೆಗೂಡಿ ಕರೆದುಕೊಂಡು ಹೋದ್ರೆ ರಾಜಕೀಯವಾಗಿ ನಮಗೆ ಅನುಕೂಲ ಆಗುತ್ತದೆ‌. ಕಳೆದ 6 ದಿನಗಳಿಂದ ಪ್ರತಿದಿನ 20 ರಿಂದ 25 ಕಿಲೋಮೀಟರ್ ನಡೆದಿದ್ದೇನೆ. ನಿಮ್ಮ ಪ್ರೀತಿಯ ಕರೆಗೆ ನಾನು ಇಲ್ಲಿ ಬಂದಿದ್ದೇನೆ. ಸಮಾಜಕ್ಕೆ ಯಾವುದೇ ನಷ್ಟ ಮಾಡಲ್ಲ ಎಂದು ಅಭಯ ನೀಡಿದರು.

ABOUT THE AUTHOR

...view details