ಕರ್ನಾಟಕ

karnataka

Satish Jarakiholi: ಜಿಲ್ಲೆ ವಿಭಜನೆಗೂ‌ ಮೊದಲು ಬೆಳಗಾವಿ ಹೊಸ ತಾಲೂಕು ರಚನೆ- ಸಚಿವ ಸತೀಶ್ ಜಾರಕಿಹೊಳಿ

By

Published : Aug 15, 2023, 3:43 PM IST

Updated : Aug 15, 2023, 11:00 PM IST

Belagavi Independence Day: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು.

ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ

ಸಚಿವ ಸತೀಶ್​ ಜಾರಕಿಹೊಳೆ ಹೇಳಿಕೆ

ಬೆಳಗಾವಿ: "ಬೆಳಗಾವಿ ಜಿಲ್ಲಾ ವಿಭಜನೆಗೆ ನಮ್ಮ ಒತ್ತಡ ಇದ್ದೇ ಇದೆ. ಅದಕ್ಕಿಂತಲೂ ಮೊದಲು 8 ಲಕ್ಷ ಮತದಾರರನ್ನು ಹೊಂದಿರುವ ಬೆಳಗಾವಿ ತಾಲೂಕು ರಚನೆಯಾಗಬೇಕಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಶೀಘ್ರವೇ ಹೊಸ ಬೆಳಗಾವಿ ತಾಲೂಕು ರಚನೆ ಆಗಬೇಕು ಎಂಬುದು ನಮ್ಮ ಬೇಡಿಕೆ. ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಯಾವುದಾದರೂ ಒಂದು ತಾಲೂಕು ಆಗಬಹುದು. ಯಾವ ರೀತಿ ತಾಲೂಕು ರಚಿಸಬೇಕೆಂದು ಅಧಿಕಾರಿಗಳು ನಿರ್ಧರಿಸುತ್ತಾರೆ" ಎಂದರು.

ಜಿಲ್ಲಾ ವಿಭಜನೆಯೂ ಆಗುತ್ತಾ ಎಂಬ ಪ್ರಶ್ನೆಗೆ, "ಗೋಕಾಕ್, ಚಿಕ್ಕೋಡಿ ಜಿಲ್ಲಾ ರಚನೆ ವಿಚಾರ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬೆಳಗಾವಿ ಜಿಲ್ಲಾ ಶಾಸಕರ ಸಭೆಯಲ್ಲಿ ಚರ್ಚೆಯಾಗಿದೆ. ಜಿಲ್ಲಾ ರಚನೆ ಆಗಲೇಬೇಕೆಂದು ಒತ್ತಾಯಿಸಿದ್ದೇವೆ. ಆ ಬಗ್ಗೆ ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಿರುವ ಬೆಳಗಾವಿ ತಾಲೂಕನ್ನು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದು ಹೊಸ ತಾಲೂಕು ರಚಿಸುತ್ತೇವೆ. ಎರಡೂ ತಾಲೂಕು ನಗರಕ್ಕೆ ಹೊಂದಿಕೊಂಡೇ ಇರಲಿವೆ" ಎಂದು ಹೇಳಿದರು.

ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ: ಬೆಳಗಾವಿ ನಗರಕ್ಕೆ ಬೇಕಾದ ಹೊಸ ಯೋಜನೆಗಳನ್ನು ಕಳೆದ ಮೂರು ತಿಂಗಳಲ್ಲಿ ಗುರುತಿಸಿಕೊಂಡಿದ್ದೆವು. ಅದೇ ರೀತಿ ನೀರಾವರಿ ಯೋಜನೆಗಳ ಅವಶ್ಯಕತೆಯೂ ಇದೆ. ಈ ಹಿಂದೆ ನಮ್ಮ ಸರ್ಕಾರದ, ಕೆರೆ ತುಂಬಿಸುವುದು ಮತ್ತು ಕೃಷಿ ಹೊಂಡಗಳ ನಿರ್ಮಾಣ ಯಶಸ್ವಿಯಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಅವು ಸ್ಥಗಿತಗೊಂಡಿದ್ದವು. ಇದನ್ನು ಪುನರ್‌ ಜಾರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕನಸಿನ ಯೋಜನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚುವರಿ ಯೋಜನೆ ಕೊಟ್ಟಿದ್ದೇವೆ. ಆರು ತಿಂಗಳಲ್ಲಿ ಜನರ ಸೇವೆಗೆ ಮುಕ್ತವಾಗಲಿದೆ. ಭವಿಷ್ಯದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಆಗಬೇಕೆಂಬ ಬೇಡಿಕೆಯನ್ನೂ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಮತ್ತು ಜನರ ಸಹಕಾರದಿಂದ ಒಳ್ಳೆಯ ಬೆಳಗಾವಿ ಮತ್ತು ಎರಡನೇ ರಾಜಧಾನಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ತಿಳಿಸಿದರು.

ಎಲ್ಲ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆಯೇ ಎಂಬ ವಿಚಾರಕ್ಕೆ, "ಅದು ತಪ್ಪು ಕಲ್ಪನೆ. ಯಾವ ಇಲಾಖೆಗೆ ಎಷ್ಟು ಅನುದಾನ ಕೊಡಬೇಕು ಎಂಬ ಬಗ್ಗೆ ಬೊಮ್ಮಾಯಿ ಅವರ ಬಜೆಟ್​ನಲ್ಲೇ ನಿಗದಿಯಾಗಿದೆ. ನಮ್ಮ ಸರ್ಕಾರದ ಹೊಸ ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳು ಮಾತ್ರ ಸೇರಿವೆ. ಹಿಂದಿನ ಬಜೆಟ್​ನಲ್ಲಿ ಯಾವುದೇ ವ್ಯತ್ಯಾಸ ಮತ್ತು ವ್ಯತ್ಯಯವಿಲ್ಲ. ಈಗ ದುಡ್ಡು ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಮಂಡಿಸಿದ ಬಜೆಟ್ ಜಾರಿಗೆ ತರಲೇಬೇಕು. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೆಚ್ಚುವರಿ 40 ಸಾವಿರ ಕೋಟಿ ರೂ‌. ಅನುದಾನವನ್ನು ಸಿಎಂ ಸಿದ್ದರಾಮಯ್ಯ ಬೇರೆ ಮೂಲಗಳಿಂದ ಕೂಡಿಸಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ" ಎಂದು ಮಾಹಿತಿ ನೀಡಿದರು.

ಬೆಳಗಾವಿ ತಾಲೂಕಿನ ಕುರುಬರಹಟ್ಟಿ ಗ್ರಾಮದಲ್ಲಿ ಚನ್ನಮ್ಮ ಮೂರ್ತಿ ತೆರವು ವೇಳೆ ಪೊಲೀಸರಿಂದ ಸ್ಥಳೀಯರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಪ್ರಶ್ನೆಗೆ, "ಯಾವುದೇ ಮೂರ್ತಿ ಕೂರಿಸಲು ಅನುಮತಿ ತೆಗೆದುಕೊಳ್ಳಬೇಕು" ಎಂದರು.

ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, "ಬೂಟಿಗಾಲಿನಿಂದ ಒದೆಯಲಾಗಿದೆ ಎಂಬುದು ಸುಳ್ಳು. ಮೂರ್ತಿ ತೆರುವು ಮಾಡುವಾಗ ಕೇವಲ ನೂಕಾಟ, ತಳ್ಳಾಟ ಮಾತ್ರ ನಡೆದಿದೆ" ಎಂದು ಸಮರ್ಥಿಸಿಕೊಂಡರು. ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸುತ್ತೆವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ನಿಪ್ಪಾಣಿ ನಗರಸಭೆ ಮೇಲೆ ಭಗವಾಧ್ವಜ ಹಾರಿಸಲು ಅಲ್ಲಿನ ಸದಸ್ಯರು ಯತ್ನಿಸಿದ್ದಾರೆ ಎಂಬುದಕ್ಕೆ, "ಆ ರೀತಿ ಆಗಿದ್ದರೆ ಕಾನೂನುಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ರಾಷ್ಟ್ರಧ್ವಜ ಬಿಟ್ಟು ಬೇರೆ ಯಾವುದೇ ಧ್ವಜ ಹಾರಿಸಲು ಅವಕಾಶವಿಲ್ಲ. ಬೇರೆ ಸಂದರ್ಭದಲ್ಲಿ ಹಾರಿಸಿಕೊಳ್ಳಲಿ, ಆದರೆ ಸ್ವಾತಂತ್ರ್ಯೋತ್ಸವ ದಿನ ರಾಷ್ಟ್ರ ಧ್ವಜಕ್ಕೆ ಮಾತ್ರ ಮಾನ್ಯತೆ ಇದೆ" ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:77th Independence Day: ಕೋಮು ಶಕ್ತಿಗಳ ವಿರುದ್ಧ ಇಂದಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು: ಡಿಸಿಎಂ ಡಿಕೆಶಿ

Last Updated : Aug 15, 2023, 11:00 PM IST

ABOUT THE AUTHOR

...view details