ಕರ್ನಾಟಕ

karnataka

ಮಂತ್ರಿಯಾಗೋ ಜಾದುವೇ ಗೊತ್ತಿಲ್ಲ, ಇನ್ನು ಸಿಎಂ ಎಲ್ಲಿಂದ?: ಸ್ವಪಕ್ಷಕ್ಕೆ ಯತ್ನಾಳ್‌ ಟಾಂಗ್​

By ETV Bharat Karnataka Team

Published : Dec 14, 2023, 7:41 PM IST

Updated : Dec 14, 2023, 8:06 PM IST

Basanagowda Patil on his own Party: ಆಡಳಿತ ಪಕ್ಷದವರ ವಿರುದ್ಧ ಮಾತೆತ್ತುತ್ತಲೇ ತಮ್ಮ ಪಕ್ಷದ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬೇಸರ ಹೊರ ಹಾಕಿದ್ದಾರೆ.

MLA Basanagouda Patil Yatnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ವಿಧಾನಸಭೆ ಕಲಾಪ

ಬೆಳಗಾವಿ: ಯಾರೇ ಮಂತ್ರಿಯಾಗಬೇಕಂದರೂ, ಅದಕ್ಕೆ ಜಾದು ಮಾಡ್ಬೇಕು. ನಮಗೆ ಮಂತ್ರಿಯಾಗೋ ಜಾದುವೇ ಗೊತ್ತಿಲ್ಲ. ಇನ್ನು ಮುಖ್ಯಮಂತ್ರಿಯಾಗೋದು ಎಲ್ಲಿಂದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪರೋಕ್ಷವಾಗಿ ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಬಿ.ಆರ್‌. ಪಾಟೀಲ್‌ ಮಾತನಾಡುತ್ತಾ, ಕೇಂದ್ರ ಸಾರಿಗೆ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯ ಕೆಲಸ ಮಾಡುವ ಕನಸುಗಳಿವೆ. ಆದರೆ, ನಿಮ್ಮವರು ಅದನ್ನು ಮಾಡಲು ಬಿಡುತ್ತಿಲ್ಲ. ನನಗೆ ಅನುಕಂಪ ಇದೆ ಎಂದು ಬಿಜೆಪಿಯ ಕಾಲೆಳೆದರು. ಆಗ ನಮಗೆ ಕೂಡಾ ನಿಮ್ಮ ಬಗ್ಗೆ, ರಾಯರೆಡ್ಡಿ ಬಗ್ಗೆ ಅದೇ ಅನುಕಂಪ ಇದೆ ಎಂದು ಯತ್ನಾಳ್ ಮತ್ತು ಸುನೀಲ್ ಕುಮಾರ್ ಕೌಂಟರ್ ನೀಡಿದರು. ಏನೋ ಮಾಡಿ ಮಂತ್ರಿ ಆಗುತ್ತಾರೆ, ಸದನಕ್ಕೆ ಬರಲ್ಲ. ಕೇಳಿದರೆ ಸಾಹೇಬರು ಬಾತ್ ರೂಂನಲ್ಲಿದ್ದಾರೆ ಅಂತಾರೆ ಎಂದು ಯತ್ನಾಳ್ ಕಿಚಾಯಿಸಿದರು.

ಬಿ.ಆರ್ ಪಾಟೀಲರೇ ನೀವು ಎಷ್ಟು ಸೀನಿಯರ್ ಇದ್ದೀರಿ, ಕಲ್ಯಾಣ ಕರ್ನಾಟಕದ ದೊಡ್ಡ ನಾಯಕರು ನೀವು. ನಿಮ್ಮನ್ನೇ ಇನ್ನೂ ಮಂತ್ರಿ ಮಾಡಿಲ್ಲ. ಅದಕ್ಕೆ ನಿಮ್ಮನ್ನು ನೋಡಿದರೆ ನನಗೆ ಪಾಪ ಅನಿಸುತ್ತೆ. ಇನ್ನು ನಿಮ್ಮ ಪಕ್ಷದಲ್ಲಿರುವ ಆರ್ಥಿಕ ತಜ್ಞ ಬಸವರಾಜ ರಾಯರೆಡ್ಡಿ ಅವರಿಗೂ ಸಚಿವ ಸ್ಥಾನ ಕೊಟ್ಟಿಲ್ಲ ನೋಡ್ರಿ ಎಂದು ಟಾಂಗ್‌ ಕೊಟ್ಟರು.

ಇದಕ್ಕೆ ನಗುತ್ತಲೇ ಉತ್ತರಿಸಿದ ಶಾಸಕ ಬಿ.ಆರ್ ಪಾಟೀಲ್, ನಾನು ಇಲ್ಲೇ ಸಂತೋಷವಾಗಿದ್ದೀನಿ. ನನ್ನ ಬಗ್ಗೆ ನೀವು ಚಿಂತೆ ಮಾಡ್ಬೇಡಿ, ನಿಮ್ಮ ಪಕ್ಷದವರು ನಿಮ್ಮನ್ನು ಮಂತ್ರಿ ಮಾಡಿಲ್ಲ. ಅದನ್ನು ನೋಡಿ ನನಗೆ ಕನಿಕರ ಬರುತ್ತೆ. ಬಿ.ಡಿ ಜತ್ತಿ ಅವರಂಗೆ ನೀವು ಮಂತ್ರಿ ಆಗುವ ಬದಲು ಒಮ್ಮೆಯೇ ಮುಖ್ಯಮಂತ್ರಿ ಆಗ್ತೀರಿ ಎಂದು ಕಾಲೆಳೆದರು. ನೀವು ಮುಖ್ಯಮಂತ್ರಿ ಆಗಬೇಕು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು‌.

ಅದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಇವರು ನಂಗೆ ಮಂತ್ರಿನೇ ಮಾಡಲಿಲ್ಲ‌. ಇನ್ನು ಮುಖ್ಯಮಂತ್ರಿ ಮಾಡ್ತಾರಾ? ಯಾಕಂದ್ರೆ ನಂಗೆ ಜಾದು ಮಾಡೋದಕ್ಕೆ ಬರೋದಿಲ್ಲ ಎಂದು ಹಾಸ್ಯಭರಿತವಾಗಿ ಸ್ವಪಕ್ಷಕ್ಕೆ ತಿವಿದರು. ನಾವೆಲ್ಲರೂ ಮಂತ್ರಿಗಿರಿಯಿಂದ ವಂಚಿತರಾದ ಸಂತ್ರಸ್ತರು ಇದ್ದ ಹಾಗೆ. ನಮಗೆ ಮಂತ್ರಿ ಆಗಲು ಯಾರ ಕಾಲು ಹಿಡಿಯಬೇಕು, ಯಾರ ಜೊತೆ ಮಾತಾನಾಡಬೇಕು ಎನ್ನುವ ಜಾದು ಮಾಡಲು ಗೊತ್ತಿಲ್ಲ ಎಂದು ವಿಧಾನಸಭೆ ಕಲಾಪದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಸ್ವಪಕ್ಷೀಯರಿಗೆ ಹಾಸ್ಯದ ಮೂಲಕವೇ ಟಾಂಗ್ ನೀಡಿದರು.

ಉಸ್ತುವಾರಿ ಸಚಿವರು ಕೇವಲ ಬೆಂಗಳೂರಿಗೆ ಸೀಮಿತ:ಬಿ.ಆರ್. ಪಾಟೀಲ್ ಮಾತನಾಡಿ, ಇತ್ತೀಚಿನ ಕೆಲ ಉಸ್ತುವಾರಿ ಸಚಿವರು ಕೇವಲ ಕ್ಷೇತ್ರ ಹಾಗೂ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುತ್ತಾರೆ.‌ ತಮ್ಮ ಕ್ಷೇತ್ರದ ಬಳಿಕ ಬೆಂಗಳೂರಿಗೆ ಓಡಾಡುತ್ತಾರೆ. ಕ್ಷೇತ್ರ ಬಿಟ್ಟು ಜಿಲ್ಲೆ ಇತರೆಡೆ ಓಡಾಡುವುದೇ ಇಲ್ಲ‌ ಎಂದು ಕಲಬುರ್ಗಿ ಉಸ್ತುವಾರಿ ಸಚಿವರಿಗೆ ಟಾಂಗ್ ನೀಡಿದರು. ಮಂತ್ರಿ ಸ್ಥಾನ ಪಡೆಯುತ್ತಾರೆ.‌ ಆ ಬಳಿಕ ಬರೇ ಬೆಂಗಳೂರಲ್ಲಿ ಮಾತ್ರ ಇರುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ಜಗದೀಶ್ ಶೆಟ್ಟರ್

Last Updated : Dec 14, 2023, 8:06 PM IST

ABOUT THE AUTHOR

...view details