ಕರ್ನಾಟಕ

karnataka

ಹಿಂದೂ ಎನ್ನುವುದು ಜೀವನ ಪದ್ಧತಿ : ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

By

Published : Nov 17, 2022, 4:12 PM IST

Updated : Nov 17, 2022, 4:22 PM IST

ಹಿಂದೂ ಎನ್ನುವುದು ಜೀವನ ಪದ್ಧತಿ. ಸಿಂಧೂ ನದಿ ಪ್ರದೇಶದ ಈಚೆಗೆ ಇರುವ ಎಲ್ಲ ಭಾರತೀಯರು ಹಿಂದೂಗಳು ಎಂದು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

hindu-is-not-a-religion-its-way-of-life-says-dr-thontada-siddarama-swamiji
ಹಿಂದೂ ಎನ್ನುವುದು ಜೀವನ ಪದ್ಧತಿ ; ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಅದು ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಯಾವಾಗ ಹೊರಗೆ ಬರಲಿದೆ ಎಂಬುದು ಕಾದು ನೋಡಬೇಕು ಎಂದು‌ ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಒಳಪಂಗಡದ ಜಾತಿಯವರು ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಹೋರಾಟ ಸೂಕ್ತ ಅಲ್ಲ. ಎಲ್ಲಾ ಒಂದು ಹಂತಕ್ಕೆ ಬಂದ ಬಳಿಕ ಮತ್ತೆ ಸೈದ್ಧಾಂತಿಕವಾಗಿ, ಕಾನೂನಾತ್ಮಕವಾಗಿ ಪ್ರತಿಪಾದನೆ ಮಾಡಿ ಹೋರಾಟ ಮಾಡಲಾಗುತ್ತದೆ. ಜಾಗತಿಕ ಲಿಂಗಾಯತ ಮಹಾಸಭಾ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು.

ಲಿಂಗಾಯತ ಧರ್ಮದಲ್ಲಿ 108 ಒಳಜಾತಿಗಳಿವೆ. ಮೀಸಲಾತಿ ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗಾಗಿ ಮೀಸಲಾತಿ ನೀಡಲಾಗುತ್ತದೆ. ಯಾವುದೇ ರಾಜಕೀಯ ಲಾಭಕ್ಕಾಗಿ ಧರ್ಮ ಬಳಿಸಿಕೊಳ್ಳಬಾರದು. ಅಧಿಕಾರ, ವೈಯಕ್ತಿಕ ಸ್ವಾರ್ಥಕ್ಕಾಗಿ ಎಂದಿಗೂ ಧರ್ಮವನ್ನು ಬಳಸಬಾರದು ಎಂದು ಸ್ವಾಮೀಜಿ ಹೇಳಿದರು.

ಹಿಂದೂ ಎನ್ನುವುದು ಜೀವನ ಪದ್ಧತಿ ; ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

ಹಿಂದೂ ಅದು ಜೀವನ ಶೈಲಿ: ಹಿಂದೂ ಎನ್ನುವುದು ಜೀವನ ಪದ್ಧತಿ ಮತ್ತು ಜೀವನ ಶೈಲಿಯಾಗಿದೆ. ವೈದಿಕ ಧರ್ಮಕ್ಕೆ ಈಗ ಹಿಂದು ಧರ್ಮ ಎಂದು ಕರೆಲಾಗುತ್ತಿದೆ. ವೈದಿಕ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದಾಗ ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ ಧರ್ಮ ಅವೈದಿಕ ಧರ್ಮವಾಗಿದೆ‌.

ವೇಗ, ಆಗಮನ, ಪುರಾಣವನ್ನು ವಿರೋಧಿಸಿದ, ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತ ಧರ್ಮದ ರೀತಿಯಲ್ಲಿ ಲಿಂಗಾಯತವೂ ಒಂದು ಧರ್ಮವಾಗಿದೆ. ಹಿಂದೂಗಳ ಆಚರಣೆ ಹಾಗೂ ಲಿಂಗಾಯತರ ಆಚರಣೆಗೆ ವ್ಯತ್ಯಾಸವಿದೆ. ಹಿಂದೂಗಳು ದೇವಸ್ಥಾನದಲ್ಲಿ ಇರೋ ದೇವರನ್ನು ಪೂಜಿಸುತ್ತಾರೆ. ಲಿಂಗಾಯತರು ಎದೆ ಮೇಲೆ ಇರೋ ಲಿಂಗವನ್ನು ಪೂಜೆವನ್ನು ಮಾಡುತ್ತಾರೆ.

ಹಿಂದೂಗಳು ಮೃತಪಟ್ಟ ಸಂದರ್ಭದಲ್ಲಿ ದಹನ ಮಾಡುತ್ತಾರೆ. ಲಿಂಗಾಯತರು ಮಣ್ಣಲ್ಲಿ ಹೂಳುವ ಪದ್ಧತಿ ಅನುಸರಿಸುತ್ತಾರೆ. ಆಚಾರ ವಿಚಾರಗಳು ಭಿನ್ನ ಆಗಿರುವುದರಿಂದ ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ‌. ಬ್ರಿಟೀಷರು ಕೂಡ ಲಿಂಗಾಯತ ಎನ್ನುವುದು ಧರ್ಮ ಎಂದೇ ಪ್ರಯೋಗ ಮಾಡಿದ್ದಾರೆ. ದೇಶದಲ್ಲಿ ಇರೋ ಎಲ್ಲಾ ಧರ್ಮಿಯರು ಭಾರತೀಯರೇ ಎಂದರು.

ಧರ್ಮವನ್ನು ಸೀಮಿತ ಅರ್ಥದಲ್ಲಿ ಬಳಸಿದರೆ ಲಿಂಗಾಯತರು ಹಿಂದೂಗಳು ಅಲ್ಲ. ಪ್ರಾದೇಶಿಕವಾಗಿ ಜೈನರು, ಬೌದ್ಧರು, ಸಿಖ್, ಲಿಂಗಾಯತರು ಎಲ್ಲರೂ ಹಿಂದುಗಳೇ. ಆದರೆ,ಆಚಾರ ವಿಚಾರ ಪ್ರತ್ಯೇಕವಾಗಿದ್ದರಿಂದ ಧಾರ್ಮಿಕವಾಗಿ ಎಲ್ಲರೂ ಪ್ರತ್ಯೇಕವಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ನಾವೆಲ್ಲರೂ ಭಾರತೀಯರು ಮತ್ತು ಹಿಂದೂಗಳು: ಹಿಂದುತ್ವದ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದುತ್ವದ ಬಗ್ಗೆ ಬೇರೆ ಬೇರೆ ಜನ ಬೇರೆ ಬೇರೆ ರೀತಿ ಅರ್ಥೈಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಪರ್ಷಿಯನ್ ಭಾಷೆಯಿಂದ ಹಿಂದೂ ಶಬ್ದ ಬಂದಿದೆ.

ಪರ್ಷಿಯನ್ ಭಾಷೆಯಲ್ಲಿ ಸಕಾರವನ್ನು ಹಕಾರವನ್ನಾಗಿ ಉಚ್ಚಾರಣೆ ಮಾಡಲಾಗುತ್ತದೆ. ಸಿಂಧೂ ನದಿಯಿಂದ ಈಕಡೆ ಇರುವ ಜನರನ್ನು ಹಿಂದೂಗಳು ಎಂದು ಕರೆದರು. ಯಾವುದೇ ಜಾತಿ, ಮತ, ಪಂಥ, ಧರ್ಮಕ್ಕೆ ಸಂಬಂಧಪಟ್ಟವರು ಇರಲಿ. ಈ ದೇಶದಲ್ಲಿ ಸಿಂಧೂ ನದಿ ಈಚೆಗೆ ಇರುವವರು ನಾವೆಲ್ಲರೂ ಹಿಂದೂಗಳು ಎಂಬರ್ಥದಲ್ಲಿ ನಾವು ಗಮನಿಸಬೇಕು. ಅದನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದಾಗ ಇಂತಹ ಅನಾಹುತಗಳು ನಡೆಯುತ್ತವೆ. ಸಿಂಧೂ ನದಿ ಪ್ರದೇಶದ ಈಚೆಗೆ ಇರುವ ಎಲ್ಲ ಭಾರತೀಯರು ಹಿಂದೂಗಳು ಎಂದರು.

ಜಾತಿ ಧರ್ಮಗಳನ್ನು ರಾಜಕೀಯವಾಗಿ ಬಳಸಿಕೊಂಡಾಗ ವಿವಾದ: ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ಬಳಿಕ ವಿವಾದ ವಿಚಾರಕ್ಕೆ, ಅದು ವಿವಾದದ ವಿಷಯವೇ ಅಲ್ಲ, ಹಿಂದೂ ಎನ್ನುವುದು ಸಿಂಧು ನದಿಯಿಂದ ಬಂದಿರುವ ಶಬ್ದವಾಗಿದೆ. ಪಾಕಿಸ್ತಾನದಲ್ಲಿಯೂ ಅನೇಕ ಜನ ಸಿಂಧುಸ್ಥಾನ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಜಾತಿ ಧರ್ಮವನ್ನು ರಾಜಕೀಯವಾಗಿ ಬಳಸಿಕೊಂಡಾಗ ವಿವಾದ ಸೃಷ್ಟಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ :ರಾಜಕಾರಣಿಗಳು ಧರ್ಮ, ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ : ರಂಭಾಪುರಿ ಶ್ರೀ

Last Updated : Nov 17, 2022, 4:22 PM IST

ABOUT THE AUTHOR

...view details