ಕರ್ನಾಟಕ

karnataka

ಹಸಿರು ಕಾರಿಡಾರ್‌ನಡಿ 10 ಯೋಜನೆಗಳ ಅಭಿವೃದ್ದಿಗೆ ಕ್ರಮ: ಸಚಿವ ಸಿ.ಸಿ.ಪಾಟೀಲ್

By

Published : Dec 28, 2022, 7:57 PM IST

ರಾಜ್ಯದಲ್ಲಿ ಹೆದ್ದಾರಿ ಪ್ರಾಧಿಕಾರದ ಮೂಲಕ ಹಸಿರು ಕಾರಿಡಾರ್‌ನಡಿ ಮಹತ್ವದ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್​ ಹೇಳಿದ್ದಾರೆ.

highways-authority-to-develop-10-projects-under-green-corridor-says-minister-cc-patil
ಹೆದ್ದಾರಿ ಪ್ರಾಧಿಕಾರದಿಂದ ಹಸಿರು ಕಾರಿಡಾರ್ ನಡಿ 10 ಯೋಜನೆಗಳನ್ನು ಅಭಿವೃದ್ದಿಪಡಿಸಲು ಕ್ರಮ: ಸಚಿವ ಸಿ.ಸಿ.ಪಾಟೀಲ್

ಬೆಳಗಾವಿ :ರಾಜ್ಯದಲ್ಲಿ ಎನ್​ಹೆಚ್​ಎಐನಿಂದ ಹಸಿರು ಕಾರಿಡಾರ್ ನಿರ್ಮಾಣದಡಿ ಹತ್ತು ಯೋಜನೆಗಳನ್ನು ಅಭಿವೃದ್ದಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಹಸಿರು ಕಾರಿಡಾರ್ ನಿರ್ಮಾಣದ ಕುರಿತು ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವರು ವಿವರವಾದ ಉತ್ತರ ನೀಡಿದರು.

ಕೇಂದ್ರ ಸರ್ಕಾರ ವಿಶ್ವಬ್ಯಾಂಕ್‌ ನೆರವಿನೊಂದಿಗೆ ದೇಶದಲ್ಲಿ ಹಸಿರು ಯೋಜನೆಯಡಿ ಸುಮಾರು 781.38 ಕಿ.ಮೀ. ಉದ್ದದ ಹೆದ್ದಾರಿಯನ್ನು 23 ಪ್ಯಾಕೇಜ್‌ಗಳಲ್ಲಿ ಅಭಿವೃದ್ಧಿಪಡಿಸಲು ನಿರ್ಣಯಿಸಿದೆ. ಇದಕ್ಕೆ ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಿ ರಾಷ್ಟ್ರೀಯ ಹಸಿರು ಕಾರಿಡಾರ್ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆದರೆ, ವಿಶ್ವಬ್ಯಾಂಕ್ ನೆರವಿನಿಂದ ಹಸಿರು ಕಾರಿಡಾರ್ ನಿರ್ಮಾಣ ಯೋಜನೆಯಡಿ ರಾಜ್ಯ ಸರ್ಕಾರದ ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾರ್ಗಸೂಚಿಯನ್ವಯ ನಿರ್ವಹಣೆ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯನ್ನು ಐಆರ್‌ಸಿ ಮಾನದಂಡಗಳಂತೆ ಹಾಗೂ ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಹೊರಡಿಸುವ ಮಾರ್ಗಸೂಚಿಯನ್ವಯ ನಿರ್ವಹಿಸಲಾಗುತ್ತದೆ. ಈ ಯೋಜನೆಯ ಗುಣಮಟ್ಟದ ಕುರಿತು ಖಾತರಿಪಡಿಸಿಕೊಳ್ಳಲು ರಾಷ್ಟ್ರೀಯ ಮಟ್ಟದ ಥರ್ಡ್ ಪಾರ್ಟಿಯಿಂದ ಗುಣಮಟ್ಟದ ಪರಿವೀಕ್ಷಣೆ ಕೈಗೊಳ್ಳಲಾಗಿದ್ದು, ಎಲ್ಲಾ ತರಹದ ಗುಣಮಟ್ಟದ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಕಳಪೆ ಮಟ್ಟದ ಕಾಮಗಾರಿ ಕೈಗೊಂಡಿರುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವರದಿ ನೀಡಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಮಾರ್ಚ್ ಅಂತ್ಯದವರೆಗೆ ಅನುದಾನ ಬಳಕೆಗೆ ಕ್ರಮ: 2022-23ನೇ ಸಾಲಿಗೆ ಲೋಕೋಪಯೋಗಿ ಇಲಾಖೆಗೆ ಒದಗಿಸಿದ 9397.67 ಕೋಟಿ ರೂ ಅನುದಾನದಲ್ಲಿ 17-12-2022ರವರೆಗೆ ಆರ್ಥಿಕ ಇಲಾಖೆಯು ಪ್ರದತ್ತ ಮಾಡಿರುವ ಅಧಿಕಾರದಂತೆ ಒಟ್ಟಾರೆ 7084.31 ಕೋಟಿ ರೂ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಡಿಯ ಅನುದಾನವನ್ನು ಮಾರ್ಚ್ ಅಂತ್ಯದವರೆಗೆ ಬಳಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್, ಸದಸ್ಯರಾದ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದರು.

ಕುಕ್ಕೆ ಸುಬ್ರಮಣ್ಯ ದೇವಾಲಯದ ದಿನಸಿ ಖರೀದಿಗೆ ಇ-ಟೆಂಡರ್: ಕುಕ್ಕೆ ಗ್ರಾಮದ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದಿನಸಿ ಪದಾರ್ಥಗಳ ಖರೀದಿಯನ್ನು ಇನ್ನು ಮುಂದೆ ಇ-ಟೆಂಡರ್ ಮೂಲಕವೇ ನಡೆಸಲಾಗುತ್ತದೆ ಎಂದು ಮುಜಿರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ವರ್ಷಕ್ಕೆ ಹಳೆಯ ಪದ್ದತಿ ಮುಗಿಸಿ ಹೊಸ ವರ್ಷದಿಂದ ಇ-ಟೆಂಡರ್‌ಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗ ಹಳೆಯ ಪದ್ದತಿಯಲ್ಲಿ ಒಡಂಬಡಿಕೆ ಇದೆ. ತಕ್ಷಣಕ್ಕೆ ಅದನ್ನು ಉಲ್ಲಂಘಿಸಿದಲ್ಲಿ ಅವರು ಕೋರ್ಟ್‌ಗೆ ಹೋಗಲಿದ್ದಾರೆ. ಹಾಗಾಗಿ ಈ ವರ್ಷ ಒಪ್ಪಂದ ಮುಗಿಸಲಿದ್ದೇವೆ. ಒಪ್ಪಂದ ಮುಗಿದ ನಂತರ ಇ-ಟೆಂಡರ್‌ಗೆ ಸೂಚನೆ ನೀಡಲಾಗುತ್ತದೆ ಎಂದರು.

ABOUT THE AUTHOR

...view details