ಬೆಳಗಾವಿ: ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದೆ. ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕೆ ಧುಮಿಕಿದ್ದಾರೆ. ಮೂರು ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಿದರು.
ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಗರಕ್ಕೆ ಹೆಚ್ಚಾಗಿ ಬರುತ್ತಿಲ್ಲ. ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದರೂ ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬಂದಿರಲಿಲ್ಲ. ಚುನಾವಣೆ ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಆದರೆ ಇಂದು ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ಬಂದು ಅಭ್ಯರ್ಥಿಗಳ ಪರ ಮತಯಾಚಿಸಿದರು.
ಮೂರು ವಾರ್ಡ್ಗಳ ಕೆಲವೇ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಕಾಟಾಚಾರಕ್ಕೆ ಎಂಬಂತೆ ಪ್ರಚಾರ ನಡೆಸಿ ಗೋಕಾಕ್ಗೆ ತೆರಳಿದರು. ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರುವ ಮಾಹಿತಿಯನ್ನು ಬಿಜೆಪಿ ನಗರ ಘಟಕ ಮಾಧ್ಯಮಗಳಿಗೆ ನೀಡಿರಲಿಲ್ಲ.
ಸಚಿವ ಉಮೇಶ್ ಕತ್ತಿ ಕೂಡ ಕೊನೆ ದಿನವಾದ ಇಂದು ನಗರದ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಜಾರಕಿಹೊಳಿ ಹಾಗೂ ಕತ್ತಿ ಸಹೋದರರು ಚುನಾವಣೆ ಪ್ರಚಾರದಿಂದ ದೂರ ಉಳಿದಿದಕ್ಕೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸಚಿವ ಉಮೇಶ್ ಕತ್ತಿ ಇಡೀ ದಿನ ಪ್ರಚಾರ ನಡೆಸಿದ್ರೆ, ರಮೇಶ್ ಕೊನೆ ಕ್ಷಣದಲ್ಲಿ ಕೆಲಹೊತ್ತು ಕಾಟಾಚಾರಕ್ಕೆ ಎಂಬಂತೆ ಪ್ರಚಾರ ಮಾಡಿ ನಿರ್ಗಮಿಸಿದರು.
ಇದನ್ನೂ ಓದಿ : ಬೆಳಗಾವಿ ಪಾಲಿಕೆ ಚುನಾವಣೆ: ಬಂಡಾಯ ಅಭ್ಯರ್ಥಿಗಳನ್ನ ಉಚ್ಛಾಟಿಸಿದ ಬಿಜೆಪಿ - ಕಾಂಗ್ರೆಸ್