ಬೆಳಗಾವಿ : ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇವತ್ತಿಗೂ ನಮ್ಮ ನಾಯಕ. ನಮ್ಮ ಗುರು. ಆದ್ರೆ, ಕಳೆದ ಕೆಲವು ದಿನಗಳಿಂದ ಅವರು ಬಹಳಷ್ಟು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರರ್ಥ ಸಭೆಯಲ್ಲಿ ಮಾತನಾಡಿದ ಅವರು, ಇವತ್ತೂ ಸಿದ್ದರಾಮಯ್ಯ ನಮ್ಮ ನಾಯಕ. ನಮ್ಮ ಗುರು. ಸಿದ್ದರಾಮಯ್ಯ ಸಾಹೇಬರ ವ್ಯಕ್ತಿತ್ವ ಬಹಳ ದೊಡ್ಡದಿದೆ. ಸಿದ್ದರಾಮಯ್ಯ ವ್ಯಕ್ತಿತ್ವವನ್ನು ನಾನು ಪ್ರಶ್ನಿಸೋಲ್ಲ, ಅವರಿಗೆ ಅಸಹ್ಯ ಮಾಡೋದಿಲ್ಲ. ಯಾರು ಅನ್ಯಥಾ ಭಾವಿಸಬೇಡಿ. ನಾನು ಅವರ ಅಭಿಮಾನಿ. ಆದರೆ, ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಬಹಳ ಸುಳ್ಳು ಹೇಳಿದ್ದಾರೆ. ಅದಕ್ಕೆ ಉತ್ತರ ನೀಡಲು ಬಂದಿದ್ದೇನೆ ಎಂದರು.
ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ಇತ್ತೀಚಿಗೆ ಸಿದ್ದರಾಮಯ್ಯ ಬಹಳಷ್ಟು ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಯಾವ ಒತ್ತಡದಲ್ಲಿ ಹಾಗೇ ಹೇಳುತ್ತಿದ್ದಾರೋ ಗೊತ್ತಿಲ್ಲ. ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯನವರು ವಿವೇಕ್ ರಾವ್ ಪಾಟೀಲ್ಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ನಾನು ಕೋಲ್ಹಾಪೂರ ಮಹಾಲಕ್ಷ್ಮೀ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ವಿವೇಕ್ ರಾವ್ ಪಾಟೀಲ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಕಳೆದ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿವೇಕ್ರಾವ್ ಪಾಟೀಲ್ ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೂಡುವಂತೆ ಕೇಳಿಕೊಂಡಿದ್ದೆ. ಆದರೆ, ವೀರಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ನೀಡಿದರು ಎಂದರು.
ವಿವೇಕ್ರಾವ್ ಪಾಟೀಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದರು. ನಂತರ ಸಿದ್ದರಾಮಯ್ಯನವರು ವಿವೇಕರಾವ್ ಪಾಟೀಲ್ಗೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವಂತೆ ನನ್ನ ಬಳಿ ಹೇಳಿದ್ದರು. ಆದರೆ, ವಿವೇಕರಾವ್ ಪಾಟೀಲ್ಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಅಂತಾ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ರಮೇಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.