ಕರ್ನಾಟಕ

karnataka

14 ವರ್ಷದಿಂದ ಪರಿಹಾರಕ್ಕಾಗಿ ರೈತರ ಸಂಕಟ: ಕೆರೆಯಲ್ಲಿ ಮುಳುಗಿ ಪ್ರಾಣ ಬಿಡುವ ಎಚ್ಚರಿಕೆ!

By ETV Bharat Karnataka Team

Published : Oct 16, 2023, 4:23 PM IST

Updated : Oct 16, 2023, 7:17 PM IST

ಕೆರೆ ನಿರ್ಮಾಣಕ್ಕೆ 14 ವರ್ಷಗಳ ಹಿಂದೆ ಸುಮಾರು 40 ರೈತರು 60 ಎಕರೆ ಜಮೀನು ಬಿಟ್ಟುಕೊಟ್ಟಿದ್ದರು. ಆದರೆ, ಪರಿಹಾರ ಇದುವರೆಗೂ ಸಿಕ್ಕಿಲ್ಲ ಎನ್ನುತ್ತಿದ್ದಾರೆ.

Farmers Protest standing in Lake compensation
ಕೆರೆಯಲ್ಲೇ ನಿಂತು ಪರಿಹಾರಕ್ಕಾಗಿ ಪ್ರತಿಭಟಿಸಿದ ರೈತರು

ಕೆರೆಯಲ್ಲೇ ನಿಂತು ಪರಿಹಾರಕ್ಕಾಗಿ ಪ್ರತಿಭಟಿಸಿದ ರೈತರು

ಬೆಳಗಾವಿ: ಊರಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು.‌ ನೀರಿನ ಬವಣೆ ನೀಗಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗ್ರಾಮದ ರೈತರ ಜಮೀನಿನಲ್ಲಿ ಕೆರೆ ನಿರ್ಮಿಸಿ 14 ವರ್ಷಗಳೇ ಕಳೆದಿವೆ. ಆದರೆ, ಈವರೆಗೂ ಭೂಮಿ ಕೊಟ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡ ಸಂತ್ರಸ್ಥರು ಪರಿಹಾರ ಕೊಡದಿದ್ದರೆ, ಇದೇ ಕೆರೆಯಲ್ಲಿ ಮುಳುಗಿ ಜೀವ ಬಿಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಹಾಗಾದರೆ ಯಾವ ಊರು? ಏನಿವರ ವ್ಯಥೆ?

ಸಚಿವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ವ್ಯಾಪ್ತಿಯ ಅತವಾಡ ಗ್ರಾಮದ ರೈತರು ಸಣ್ಣ ನೀರಾವರಿ ‌ಇಲಾಖೆಯ ಅಧಿಕಾರಿಗಳನ್ನು ನಂಬಿ ಕೆಟ್ಟಿದ್ದಾರೆ. ಊರಿಗೆ ನೀರು ಬೇಕಿತ್ತು, ಕೆರೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಭೂಮಿ ಬೇಕಿತ್ತು. ಅಧಿಕಾರಿಗಳನ್ನು ನಂಬಿ ಫಲವತ್ತಾದ ಜಮೀನು ಬಿಟ್ಟುಕೊಟ್ಟ ರೈತರೀಗ ಸಂಕಷ್ಟದಲ್ಲಿದ್ದಾರೆ. ಪರಿಹಾರ ನೀಡದೆ ಬೆಳಗಾವಿಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರೈತರನ್ನು ಸತಾಯಿಸುತ್ತಿದ್ದಾರೆ. ಹಾಗಾಗಿ, ಕೆರೆಯಲ್ಲೇ ನಿಂತುಕೊಂಡು ರೈತರು ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.

ಕೆರೆ ನಿರ್ಮಾಣಕ್ಕೆ 40 ರೈತರು 60 ಎಕರೆ ಜಮೀನು ಬಿಟ್ಟು‌ಕೊಟ್ಟಿದ್ದಾರೆ. ಪರಿಹಾರ ನೀಡುವ ಭರವಸೆಯಿಂದ 14 ವರ್ಷಗಳ ಹಿಂದೆ ರೈತರು ಭೂಮಿ ‌ಬಿಟ್ಟುಕೊಟ್ಟಿದ್ದರು‌. ಆದರೆ, ಈವರೆಗೂ ಪರಿಹಾರ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಅತವಾಡ ಗ್ರಾಮದಲ್ಲಿ ಚಿಕ್ಕ ಚಿಕ್ಕ ಹಿಡುವಳಿದಾರರೇ ಹೆಚ್ಚಿದ್ದು, ಭೂಮಿ ಕಳೆದುಕೊಂಡು ಕೂಲಿ ನಾಲಿ ಮಾಡಿ ಬದುಕಿನ ಬಂಡಿ ಸಾಗಿಸುವ ದುಸ್ಥಿತಿ ಎದುರಾಗಿದೆ‌.

ಈಟಿವಿ ಭಾರತ್ ಜೊತೆಗೆ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯ್ಕ, "ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಹಿಂದಿನ ಶಾಸಕ ಸಂಜಯ ಪಾಟೀಲ, ಈಗಿನ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ನ್ಯಾಯ ಸಿಗೋವರೆಗೂ ರೈತರ ಬೆನ್ನಿಗೆ ರೈತ ಸಂಘ ನಿಲ್ಲುತ್ತದೆ" ಎಂದರು‌.

ರೈತ ವಿಠಲ ಮಾಯನ್ನ ಕಾಲಕುಂದ್ರಿಕರ್ ಪ್ರತಿಕ್ರಿಯಿಸಿ, "ಕೆರೆ ನಿರ್ಮಾಣಕ್ಕೆ ನನ್ನ 3 ಎಕರೆ ಜಮೀನು ಹೋಗಿದೆ. ಈಗ ನರೇಗಾ ಕೂಲಿ ಕೆಲಸವೇ ಆಧಾರ. ಸಂಜಯ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಪರಿಹಾರ ಕೊಡಿಸುತ್ತೇವೆಂದು ಹೇಳಿ, ಏನೂ ಮಾಡಿಲ್ಲ. ಮುಂದೆ ಇನ್ನೂ ಉಗ್ರ ಹೋರಾಟ ಮಾಡುತ್ತೇವೆ. ಅದಕ್ಕೂ ಮಣಿಯದಿದ್ದರೆ ಇದೇ ಕೆರೆಯಲ್ಲಿ ಮುಳುಗಿ ಜೀವ ಬಿಡುತ್ತೇವೆ" ಎಂದು ಎಚ್ಚರಿಸಿದರು.

ಮತ್ತೋರ್ವ ರೈತ ಹೂವಪ್ಪ ಗೋವಿಂದ ಸುತಾರ ಮಾತನಾಡಿ, "ನನ್ನ 2 ಎಕರೆ ಕೆರೆಗೆ ಹೋಗಿದೆ. ಜಿಲ್ಲಾಧಿಕಾರಿಗಳಿಗೆ ಕಾಗದ ಪತ್ರ ಕೊಡು ಎನ್ನುತ್ತಾರೆ‌. ಆಮೇಲೆ ಏನೂ ಮಾಡೋದಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಚುನಾವಣೆ ವೇಳೆ ಬರುವ ರಾಜಕಾರಣಿಗಳು, ದುಡ್ಡು ಕೊಟ್ಟು ವೋಟ್ ಹಾಕಿಸಿಕೊಂಡು ಹೋಗುತ್ತಾರೆ. ಆಮೇಲೆ ನಮ್ಮತ್ತ ತಿರುಗಿಯೂ ನೋಡಲ್ಲ‌. ಇವರ ಆಶ್ವಾಸನೆ ಕೇಳಿ ನಮಗೆ ಸಾಕಾಗಿದೆ" ಎಂದು ಆಕ್ರೋಶಗೊಂಡರು.

ಹಿರಿಯ ಅಭಿಯಂತರರ ಹೇಳಿಕೆ: ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಭಿಯಂತರ ವಿಶ್ವನಾಥ ಹಲ್ಯಾಳ ಪ್ರತಿಕ್ರಿಯಿಸಿ, "ಭೂಮಾಪನ ಇಲಾಖೆ ಅಧಿಕಾರಿಗಳು ಸಮೀಕ್ಷೆ ವರದಿ ಕೊಟ್ಟ ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಪ್ರಸ್ತಾವನೆ ಕಳುಹಿಸುತ್ತೇವೆ. ಅದಾದ ಬಳಿಕ ಎಸಿ ಅವರು, ಉಪನೋಂದಣಿ ಅಧಿಕಾರಿಗಳಿಂದ ಈಗಿನ ದರ ಪಟ್ಟಿ ಪಡೆಯುತ್ತಾರೆ. ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ರೈತರ ಸಭೆ ಕರೆದು ದರ ನಿಗದಿ ಪಡಿಸಲಾಗುತ್ತದೆ. ಶೀಘ್ರವೇ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಕಾವೇರಿ ನೀರು ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೆ ದಸರಾ ಹಬ್ಬದಂದು ರಸ್ತೆಗಳು ಬಂದ್: ಕುರುಬೂರು ಶಾಂತಕುಮಾರ್

Last Updated : Oct 16, 2023, 7:17 PM IST

ABOUT THE AUTHOR

...view details