ಕರ್ನಾಟಕ

karnataka

’’ಜನಪ್ರತಿನಿಧಿಗಳು ಕಾಣೆಯಾಗಿದ್ದು ಹುಡುಕಿ ಕೊಡಿ‘‘: ಅಥಣಿ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ದೂರು

By ETV Bharat Karnataka Team

Published : Sep 14, 2023, 6:04 PM IST

Updated : Sep 14, 2023, 10:15 PM IST

ಜನಪ್ರತಿನಿಧಿಗಳು ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡದೇ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ರೈತರು ದೂರು ದಾಖಲಿಸಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ದೂರು
ಜನಪ್ರತಿನಿಧಿಗಳ ವಿರುದ್ಧ ದೂರು

ಈ ಬಗ್ಗೆ ರೈತರ ಹೇಳಿಕೆ

ಚಿಕ್ಕೋಡಿ: ಹಲವು ವರ್ಷಗಳಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ ಅವರು ಕಾಣೆಯಾಗಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ರೈತರು ದೂರನ್ನು ಸಲ್ಲಿಸಿರುವ ಪ್ರಸಂಗ ನಡೆದಿದೆ.

ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ್​​​ ಜೊಲ್ಲೆ ಹಾಗೂ ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ಹುಡುಕಿ ಕೊಡುವಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ರೈತ ಮುಖಂಡರು ದೂರನ್ನು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಅಥಣಿ ವಿಧಾನಸಭಾ ಕ್ಷೇತ್ರ ದೂರವಾಗಿದ್ದರಿಂದ, ಆಯ್ಕೆಯಾಗಿರುವ ಜನಪ್ರತಿನಿಧಿಗಳು ರೈತರ ಕಷ್ಟ ಕಾರ್ಪಣ್ಯಗಳಿಗೆ ಸಿಗುತ್ತಿಲ್ಲ ಮತ್ತು ನಮ್ಮ ಜನಪ್ರತಿನಿಧಿಗಳು ತುಂಬಾ ದಿನದಿಂದ ಕಾಣೆಯಾಗಿದ್ದಾರೆ ಅವರನ್ನು ಹುಡುಕಿ ಕೊಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರುದಾರರು ಹಾಗೂ ರೈತ ಮುಖಂಡ ಪ್ರಕಾಶ್ ಪೂಜಾರಿ ಮಾತನಾಡಿ, ನಮ್ಮ ಮೂರು ಜನ ಪ್ರತಿನಿಧಿಗಳು ಹಲವು ವರ್ಷಗಳಿಂದ ಕಾಣುತ್ತಿಲ್ಲ, ಅಥಣಿ ವಿಧಾನಸಭಾ ಕ್ಷೇತ್ರ ಬೆಳಗಾವಿ ನಗರದಿಂದ ತುಂಬಾ ದೂರವಾಗಿದೆ, ಇದರಿಂದ ಕೆಲವು ಅಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡುತ್ತಿಲ್ಲ, ಮತ್ತು ನಮ್ಮಿಂದ ಆಯ್ಕೆಯಾಗಿ ಹೊಗಿರುವ ನಾಯಕರು ಕೆಲವು ವರ್ಷಗಳಿಂದ ಅಥಣಿ ಭಾಗಕ್ಕೆ ಭೇಟಿ ನೀಡಿಲ್ಲ, ಇದರಿಂದ ಈ ಭಾಗದಲ್ಲಿ ಬರಗಾಲ ಛಾಯೆ ನಿರ್ಮಾಣವಾಗಿದೆ, ರೈತರು ಸಂಕಷ್ಟದಲ್ಲಿದ್ದಾರೆ.

ಅನ್ನದಾತನ ಸ್ಥಿತಿ ಚಿಂತಾಜನಕವಾಗಿದೆ ನಮ್ಮ ಕಷ್ಟಕ್ಕೆ ಆಗಬೇಕಾದ ಸಂಸದರು, ವಿಧಾನಪರಿಷತ್ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಥಣಿ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ, ಇಲ್ಲಿರುವ ರೈತರನ್ನು ಭೇಟಿ ನೀಡಿಲ್ಲ, ಚುನಾವಣೆ ಬಂದಾಗ ಒಂದು ತಿಂಗಳವರಿಗೆ ಇಲ್ಲೆ ಇರುತ್ತಾರೆ ಹಲವು ಭರವಸೆ ನೀಡುತ್ತಾರೆ. ಆದರೆ, ಆಯ್ಕೆಯಾದ ನಂತರ ಈ ಜನ ಪ್ರತಿನಿಧಿಗಳು ನಮ್ಮ ಭಾಗಕ್ಕೆ ಬಂದಿಲ್ಲ ಮತ್ತು ಇವರುಗಳು ಕಾಣೆಯಾಗಿದ್ದಾರೆ ಇದರಿಂದ ನಾವು ಇವರನ್ನು ಹುಡುಕಿ ಕೊಡುವಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದೇವೆ. ಪೊಲೀಸರು ಅವರನ್ನು ಹುಡುಕಿ ನಮ್ಮ ಭಾಗಕ್ಕೆ ಕರೆದುಕೊಂಡು ಬಂದು ನಮ್ಮ ಕಷ್ಟಕ್ಕೆ ಸಹಕಾರಿ ಆಗಲಿ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಇನ್ನೋರ್ವ ರೈತ ಮುಖಂಡ ರಾಜಕುಮಾರ್ ಜಂಬಗಿ ಮಾತನಾಡಿ, ನಮ್ಮ ಮೂರು ಜನ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಹಲವು ಯೋಜನೆ ಭರವಸೆ ನೀಡಿದ್ದರು, ಆಯ್ಕೆಯಾದ ನಂತರ ಎಲ್ಲಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ, ಹಲವು ವರ್ಷಗಳಿಂದ ಅಥಣಿ, ಕಾಗವಾಡ, ರಾಯಭಾಗ, ಭಾಗಕ್ಕೆ ಭೇಟಿ ನೀಡಿಲ್ಲ, ಮತ್ತು ದೂರವಾಣಿ ಸಂಪರ್ಕ ಸಿಗುತ್ತಿಲ್ಲ ಸದ್ಯ ಅನಾವೃಷ್ಟಿಯಿಂದ ರೈತರು ಸಂಕಷ್ಟ ಎದುರಾಗಿದೆ ಇದರಿಂದ ಈ ನಾಯಕರು ರೈತರ ಕಷ್ಟಕ್ಕೆ ಆಗಬೇಕು.

ಸ್ಥಳೀಯ ಅಧಿಕಾರಿಗಳ ಜೊತೆ ಸಭೆ ಮಾಡಿ ಸರ್ಕಾರ ಮೇಲೆ ಒತ್ತಡವನ್ನು ಹಾಕಿ ನಮಗೆ ಬೆನ್ನೆಲುಬು ಆಗಬೇಕು. ಆದರೆ, ನಮ್ಮ ನಾಯಕರು ನಮ್ಮ ಕೈಗೆ ಸಿಗುತ್ತಿಲ್ಲ ಇದರಿಂದ ಅಥಣಿ ಪೊಲೀಸ್ ಠಾಣೆಯಲ್ಲಿ ನಮ್ಮ ನಾಯಕರನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

Last Updated : Sep 14, 2023, 10:15 PM IST

ABOUT THE AUTHOR

...view details