ಕರ್ನಾಟಕ

karnataka

ಹೆಬ್ಬಾಳ್ಕರ್​ಗೆ ಡಬಲ್ ಸಂಭ್ರಮ: ಸಚಿವ ಸ್ಥಾನ ಸಿಕ್ಕ ಬೆನ್ನಲ್ಲೇ ಲಕ್ಷ್ಮೀ ಮನೆಗೆ ಮಹಾಲಕ್ಷ್ಮೀ ಆಗಮನ

By

Published : May 27, 2023, 10:31 AM IST

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಡಬಲ್ ಖುಷಿ ಸಿಕ್ಕಿದೆ. ಒಂದೆಡೆ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿದ್ದು ಮತ್ತೊಂದೆಡೆ ಹೆಬ್ಬಾಳ್ಕರ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ.

lakshmi hebbalkar
ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ಒದಗಿ ಬಂದಿದೆ. ಇಂದು ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಇದೇ ಖುಷಿಯಲ್ಲಿರುವ ಲಕ್ಷ್ಮೀಗೆ ಇದೀಗ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಹೆಬ್ಬಾಳ್ಕರ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ.

ಇಂದು ಬೆಂಗಳೂರಿನ‌ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆ ರಾತ್ರಿ ಹೊಸ ಸಚಿವರ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿತ್ತು. ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರ ಪತ್ನಿ ಹಿತಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಲಕ್ಷ್ಮೀ ಅಜ್ಜಿಯಾಗಿದ್ದಾರೆ. ಒಂದೆಡೆ ಮನೆಗೆ ಮಹಾಲಕ್ಷ್ಮೀ ಬಂದ ಖುಷಿಯಾದ್ರೆ ಅದೇ ದಿನ ಮಂತ್ರಿ ಸ್ಥಾನ ಸಿಕ್ಕ ಖುಷಿಯೂ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಹೆಬ್ಬಾಳ್ಕರ್ ರಾಜಕೀಯ ಹಾದಿ:ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ರಾಜಕೀಯ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಎಲ್ಲಾ ಅಡೆ ತಡೆ ದಾಟಿ ಇಂದು ಹೆಬ್ಬಾಳ್ಕರ್ ಸಚಿವರಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ವೇಳೆ ಹತಾಶರಾಗದೇ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡು ಹೆಬ್ಬಾಳ್ಕರ್ ಶ್ರಮಿಸಿದ್ದಾರೆ. ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ, ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಘಟಕವನ್ನು ಬಲಿಷ್ಠಗೊಳಿಸಿದ್ದರು.

ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವಿನಲ್ಲೂ ಲಕ್ಷ್ಮೀ ಪಾತ್ರ ಪ್ರಮುಖವಾಗಿದೆ. ಲಕ್ಷ್ಮೀ ಹೆಬ್ಬಾಳಕರ್ ಕೇವಲ ರಾಜಕೀಯವಾಗಿ ಮಾತ್ರ ಬೆಳೆದು ನಿಂತಿಲ್ಲ. ಸಾಮಾಜಿಕ ಮುಂದಾಳುವಾಗಿದ್ದಾರೆ, ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್​ನಲ್ಲೂ ಛಾಪು ಮೂಡಿಸಿದ್ದಾರೆ. ಸಹಕಾರಿ ಸಂಘ ಕಟ್ಟಿ ಬೆಳೆಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕೆ ಬೆಂಬಲವಾಗಿ ನಿಲ್ಲಲು ಆಸ್ಪತ್ರೆಯೊಂದನ್ನು ಕಟ್ಟುವ ಬೃಹತ್ ಯೋಜನೆಯನ್ನು ಹೊಂದಿದ್ದಾರೆ. ಇದೀಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗುವ ಮೂಲಕ ರಾಜಕೀಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದ್ದಾರೆ.

ಇದನ್ನೂ ಓದಿ :ಇಂದು ನೂತನ‌ ಸಚಿವರ ಪ್ರಮಾಣವಚನ: ರಾಜಭವನದ ಸುತ್ತಮುತ್ತ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಲಕ್ಷ್ಮೀ ಹೆಬ್ಬಾಳ್ಕರ್ ಕಿರು ಪರಿಚಯ : 1975 ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕ ಹಟ್ಟಿಹೊಳಿಯಲ್ಲಿ ಜನಿಸಿದ ಹೆಬ್ಬಾಳಕರ್, ಮೈಸೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿರುವ ಅವರು 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2014 ರ ಲೋಕಸಭಾ ಚುನಾವಣೆಯಲ್ಲೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಇದನ್ನೂ ಓದಿ :ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಒಲಿದ ಸಚಿವ ಸ್ಥಾನ: ಸವದಿ, ಅಶೋಕ್ ಪಟ್ಟಣ ಸೇರಿ ಇತರರಿಗೆ ನಿರಾಶೆ

ಬಳಿಕ, 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಒಟ್ಟು 1,02,040 ಮತಗಳನ್ನು ಪಡೆದ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 51,680 ಮತಗಳ ಅಂತರದಿಂದ ಸೋಲಿಸುವ ಮೂಲಕ ಆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದ ಜಯ ಸಾಧಿಸಿದ ಕೀರ್ತಿಗೆ ಪಾತ್ರರಾದರು.‌ ಇದೇ ಅವಧಿಯಲ್ಲಿ ಮೈಸೂರು ಮಿನರಲ್ಸ್ ಚೇರಮನ್ ಆಗಿ ಕೂಡ ಹೆಬ್ಬಾಳಕರ್ ಅವರು ಕೆಲಸ ನಿರ್ವಹಿಸಿದ್ದಾರೆ.

2019 ರಲ್ಲಿ 17 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದರು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 1.8 ಲಕ್ಷ ಮತ ಪಡೆದು, ಬಿಜೆಪಿ ಅಭ್ಯರ್ಥಿಯನ್ನು 56 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಈಗ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ABOUT THE AUTHOR

...view details