ಕರ್ನಾಟಕ

karnataka

ಬಿಜೆಪಿ ಟಿಕೆಟ್ ಕಗ್ಗಂಟಿಗೆ ಇಂದು ಪರಿಹಾರ?: ಕುಂದಾನಗರಿಯಲ್ಲಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ

By

Published : Apr 3, 2023, 1:22 PM IST

ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಇಲ್ಲಿನ ಬಿಜೆಪಿ ಟಿಕೆಟ್ ಕಗ್ಗಂಟಿಗೆ ಇಂದು ತೆರೆ ಬೀಳುವ ಸಾಧ್ಯತೆ ಕಾಣುತ್ತಿದೆ.

District Level BJP Core Committee Meeting
ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬೆಳಗಾವಿ:ಕುಂದಾನಗರಿಯಲ್ಲಿಂದು ದಿಢೀರ್ ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ನಗರದ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಬೆಳಗಾವಿ ನಗರ, ಗ್ರಾಮಾಂತರ ಹಾಗೂ ಚಿಕ್ಕೋಡಿ 3 ಸಂಘಟನಾತ್ಮಕ ಜಿಲ್ಲೆಗಳ ಪ್ರತ್ಯೇಕ ಕೋರ್ ಕಮೀಟಿ ಸಭೆ ನಡೆಯಲಿದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಭಾಗಿಯಾಗಿದ್ದಾರೆ. ಅಲ್ಲದೇ ಜಿಲ್ಲೆಯ 11 ಕ್ಷೇತ್ರದ ಹಾಲಿ ಬಿಜೆಪಿ ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭೆ ಸದಸ್ಯರು ಪಾಲ್ಗೊಂಡಿದ್ದು ಕೋರ್ ಕಮಿಟಿ ಸಭೆಯಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳ ಆಯ್ಕೆ ಆಗಲಿದೆ. ತಲಾ ಒಂದು ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ರಾಜ್ಯ ಚುನಾವಣಾ ಸಮಿತಿಗೆ ಪಟ್ಟಿ ರವಾನೆ ಮಾಡಲಿದ್ದಾರೆ. ಬೆಳಗಾವಿಯ 18 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಗೆಲುವಿನ ಗುರಿಯನ್ನು ಹೈಕಮಾಂಡ್ ಹೊಂದಿದೆ.

ಸಭೆಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, "ಈಗಾಗಲೇ ರಾಜ್ಯಾದ್ಯಂತ ನಮ್ಮ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಎಲ್ಲ ಕೋರ್ ಕಮಿಟಿ ಸದಸ್ಯರ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್‌ವೈ, ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಗೋವಿಂದ ಕಾರಜೋಳ ಹಾಗೂ ಪ್ರಮುಖರು ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದೇವೆ.‌ ಕಾರ್ಯಕರ್ತರ ಅಭಿಪ್ರಾಯ ಮತ್ತು ಕೋರ್ ಕಮಿಟಿ ಸದಸ್ಯರು, ಮಂತ್ರಿಗಳು, ಮಾಜಿ ಶಾಸಕರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅಳೆದು ತೂಗಿ ನೋಡಿ, ನಾಳೆ ಮತ್ತು ನಾಡಿದ್ದು ವಿಸ್ತೃತವಾಗಿ ಸಭೆ ಮಾಡಲಿದ್ದೇವೆ. ಬೆಳಗಾವಿ ಜೊತೆಗೆ ಎಲ್ಲ ಜಿಲ್ಲೆಗಳಿಗೂ ಆಧ್ಯತೆ ನೀಡಲಾಗಿದೆ. ಬೆಳಗಾವಿ ಮತ್ತು ಬೆಂಗಳೂರು ಅತೀ ಹೆಚ್ಚು ಸ್ಥಾನ ಹೊಂದಿರುವ ಹಿನ್ನೆಲೆ ಇನ್ನೂ ಕೆಲವು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಸಂಸದೀಯ ಮಂಡಳಿ ಚುನಾವಣಾ ಸಮೀತಿಗೆ ಈ ವರದಿಯನ್ನು ಶಿಫಾರಸು ಮಾಡಲಾಗುವುದು. ಅದಕ್ಕೂ ಮುನ್ನ ನಾನು ಮತ್ತು ನಿರ್ಮಲಕುಮಾರ ಸುರಾನಾ ಇಲ್ಲಿಗೆ ಬಂದಿದ್ದೇವೆ" ಎಂದರು.

"ನಮ್ಮ ಈ ಪ್ರಕ್ರಿಯೆ ಮುಗಿಸಿ ಸಾಯಂಕಾಲ ಬೆಂಗಳೂರಿಗೆ ಹೋಗುತ್ತೇವೆ. ಕಾರ್ಯಕರ್ತರಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದೇವೆ ಇದು ಎಲ್ಲರಿಗೂ ತೃಪ್ತಿ ತಂದಿದೆ" ಎಂದು ತಿಳಿಸಿದರು.

ಬೆಂಗಳೂರಿನ ಕೋರ್ ಕಮಿಟಿ ಸಭೆಯಲ್ಲಿ ಗದ್ದಲ ನಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾವುದೇ ಗದ್ದಲ, ಗಲಾಟೆ ಇಲ್ಲ. ಹೆಚ್ಚು ಆಕಾಂಕ್ಷಿಗಳು ಮತ್ತು ಸೀಟ್​ಗಳು ಇದ್ದ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆ ದೃಷ್ಟಿಯಿಂದ ಬಂದಿದ್ದೇವೆ. ರಮೇಶ ಜಾರಕಿಹೊಳಿ ಇಲ್ಲೇ ಇದ್ದಾರೆ ಕೇಳಿ, ಯಾವುದೂ ಗಲಾಟೆ ಇಲ್ಲ, ಏನೂ ಇಲ್ಲ. ನಮ್ಮಲ್ಲಿ ಬೇಗುದಿಯೇ ಇಲ್ಲ" ಎಂದು ಸ್ಟಷ್ಟನೆ ಕೊಟ್ಟರು.

ಇದನ್ನೂ ಓದಿ:ಸಿಎಂ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಹಿಂದೇಟು; ಸಾರಥಿ ಇಲ್ಲದೇ ಚುನಾವಣೆ ಪ್ರಚಾರ

ABOUT THE AUTHOR

...view details