ಕರ್ನಾಟಕ

karnataka

ಪಂಚರಾಜ್ಯ ಚುನಾವಣೆಗೆ ಕರ್ನಾಟಕದಿಂದ ಕಾಂಗ್ರೆಸ್ ಹಣ ಕಳಿಸುತ್ತಿದೆ: ಜಿ.ಟಿ.ದೇವೇಗೌಡ

By ETV Bharat Karnataka Team

Published : Oct 13, 2023, 10:23 PM IST

Updated : Oct 13, 2023, 10:31 PM IST

ಇಂದು ಬೆಳಗಾವಿಯಲ್ಲಿ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ವೆಂಕಟಗೌಡ ನಾಡಗೌಡರ, ಆಲ್ಕೋಡು ಹನುಮಂತಪ್ಪ, ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಭಾಗವಹಿಸಿದ್ದರು.

ಬೆಳಗಾವಿಯಲ್ಲಿ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ನಡೆಯಿತು
ಬೆಳಗಾವಿಯಲ್ಲಿ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮಾತನಾಡಿದರು.

ಬೆಳಗಾವಿ:ಕಾಂಗ್ರೆಸ್ 28 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ತಪ್ಪಲ್ಲ. ಆದರೆ ಪ್ರಧಾನಿ ಮೋದಿ ಅವರ ಜೊತೆಗೆ ಹೋದರೆ ಕೋಮುವಾದಿ ಪಕ್ಷವಂತೆ. ನಮ್ಮದು ಕೇವಲ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ. ರಾಜ್ಯ, ರಾಷ್ಟ್ರದ ಪ್ರಮುಖ ಪಕ್ಷ ಎನ್ನುವ ಮೂಲಕ ಕೈ ನಾಯಕರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ಕೊಟ್ಟರು.

ಬೆಳಗಾವಿಯ ಕೆಪಿಟಿಸಿಎಲ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯುವ ಸಂಕಲ್ಪವನ್ನು ನಾವು ಮಾಡಬೇಕಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ, ದೇಶಕ್ಕೆ ನರೇಂದ್ರ ಮೋದಿ ಪಿಎಂ ಆಗಬೇಕು. ಪ್ರಾದೇಶಿಕ ಪಕ್ಷವನ್ನು ಉಳಿಸಿ, ಬೆಳೆಸಬೇಕಿದೆ. ದೇವೇಗೌಡರು ರಾಷ್ಟ್ರದ ದೊಡ್ಡ ನಾಯಕರು. ರಾಜ್ಯದಲ್ಲಿ ಬಡವರು, ರೈತರು ಉಳಿಯಬೇಕಾದರೆ ಕುಮಾರಸ್ವಾಮಿ‌ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ತಿಳಿಸಿದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ರಾಜ್ಯದಿಂದ ಹಣ ಸಂಗ್ರಹಿಸಲಾಗುತ್ತಿದೆ. ಇಲ್ಲಿನ ಮಂತ್ರಿಗಳು ರಾಜಾರೋಷವಾಗಿ ಲಂಚ ತೆಗೆದುಕೊಂಡು ಕಳುಹಿಸುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಸಿಕ್ಕಿರುವ 42 ಕೋಟಿ ಹಣ ತೆಲಂಗಾಣಕ್ಕೆ ಕಳುಹಿಸಲು ಇಟ್ಟಿದ್ದರು ಎಂದು ಜಿ.ಟಿ.ದೇವೇಗೌಡ ಆರೋಪಿಸಿದರು.

ರಾಜ್ಯದಲ್ಲಿ ಭೀಕರ‌ ಬರಗಾಲ ಸ್ಥಿತಿಯಿದೆ. ಯಾವೊಬ್ಬ ಸಚಿವರು ಕೂಡಾ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ. ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವ ಶಕ್ತಿ ಯಾರಿಗಾದರೂ ಇದ್ದರೆ, ಅದು ಕುಮಾರಸ್ವಾಮಿ ಅವರಿಗೆ ಮಾತ್ರ. ನಾಡಿನ‌ ಅನೇಕ ಮಠಗಳ ಸ್ವಾಮೀಜಿಗಳು ಬಿಜೆಪಿಯೊಂದಿಗೆ ಸೇರಿ ರಾಜ್ಯ ಉಳಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ನಾವು ಬಿಜೆಪಿ ಬೆಂಬಲಿಸುತ್ತಿದ್ದೇವೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ, ಎಚ್.ಕೆ.ಕುಮಾರಸ್ವಾಮಿ, ವೆಂಕಟಗೌಡ ನಾಡಗೌಡರ, ಆಲ್ಕೋಡು ಹನುಮಂತಪ್ಪ, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ, ಕೃಷ್ಣಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.

ಗುತ್ತಿಗೆದಾರರಿಂದ ಬಂದ ಕಮಿಷನ್ ಹಣ 42 ಕೋಟಿ-ಎನ್ ರವಿಕುಮಾರ್ ಆರೋಪ:ಗುತ್ತಿಗೆದಾರರಿಗೆ ಸರಕಾರ ಬಿಡುಗಡೆ ಮಾಡಿದ 650 ಕೋಟಿ ಹಣದಲ್ಲಿ ಬಂದಿರುವ ಕಮಿಷನ್ ಹಣ 42 ಕೋಟಿ. ಅದನ್ನು ಇವತ್ತು ಆದಾಯ ತೆರಿಗೆ ಇಲಾಖೆ ಮಾಡಿದ ದಾಳಿಯ ವೇಳೆ ಸಿಕ್ಕಿದೆ. ಹೀಗಾಗಿ 42 ಕೋಟಿ ಕಮಿಷನ್ ಹಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊರಬೇಕು ಮತ್ತು ರಾಜೀನಾಮೆ ಕೊಡಬೇಕು. ಈ ಹಣ, ಅದರ ಹಿಂದಿನ ಉದ್ದೇಶದ ಕುರಿತು ಸಂಪೂರ್ಣ ತನಿಖೆ ಆಗಬೇಕು. ಇದು ಕಾಂಗ್ರೆಸ್ಸಿನ ಹಣವೆನ್ನಲು ಬಿಜೆಪಿಯವರ ಬಳಿ ಏನು ಸಾಕ್ಷ್ಯವಿದೆ ಎಂದು ಎಂ ಬಿ ಪಾಟೀಲರು ಪ್ರಶ್ನೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಒಪ್ಪಂದ ಆದ ಬಳಿಕ 650 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಇದೊಂದು ಎಟಿಎಂ ಸರಕಾರ, ಲೂಟಿಕೋರ ಸರಕಾರ, ಕಲೆಕ್ಷನ್ ಸರಕಾರ ಎನ್ನಲು ಇದಕ್ಕಿಂತ ಬೇರೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು. ಈ ಸರಕಾರದಡಿ ಹಣ ಇಲ್ಲದೆ ವರ್ಗಾವಣೆ ಆಗುತ್ತಿಲ್ಲ. ಈ ಸರಕಾರ ಕಲೆಕ್ಷನ್ ದಂಧೆಯಲ್ಲಿ ಮುಳುಗಿದೆ. ಇದೊಂದು ಎಟಿಎಂ ಸರಕಾರ ಎಂದು ಟೀಕಿಸಿದರು. ಮಾಜಿ ಕಾರ್ಪೊರೇಟರ್ ಮನೆಯಲ್ಲೂ ಎಷ್ಟೋ ಹಣ ಸಿಕ್ಕಿದೆ ಎನ್ನುತ್ತಾರೆ. ಇದಕ್ಕಿಂತ ಪ್ರೂಫ್ ಬೇಕೇ ಎಂದು ಅವರು ಕೇಳಿದರು. ಇವರೆಲ್ಲರೂ ಕಾಂಗ್ರೆಸ್ ನಾಯಕರ ಜೊತೆಗೇ ಒಡನಾಟ ಇಟ್ಟುಕೊಂಡಿದ್ದರು ಎಂದು ದೂರಿದರು. ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಲ್ಲಿ 23 ಪೆಟ್ಟಿಗೆಗಳಲ್ಲಿ 42 ಕೋಟಿ ಹಣ ಸಿಕ್ಕಿದೆ. ಮಾಜಿ ಕಾರ್ಪೊರೇಟರ್ ಅಶ್ವತ್ಥ್ ಅವರ ಮನೆಯ ಮೇಲೂ ದಾಳಿ ಆಗಿದೆ. ಇನ್ನೂ ಅನೇಕರ ಮನೆಗಳ ಮೇಲೆ ದಾಳಿ ಆಗಿದ್ದು, ವಿವರ ಲಭಿಸಿಲ್ಲ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರವು ಕತ್ತಲೆ ಭಾಗ್ಯವನ್ನು ರಾಜ್ಯದ ಜನತೆಗೆ ಕೊಡುತ್ತಿದೆ ಎಂದರು. ಹಲವು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಪೂರ್ವಾಪರ ಯೋಚಿಸದೆ ಭಾಗ್ಯಗಳನ್ನು ಘೋಷಿಸಿದ್ದಾರೆ. ವಿದ್ಯುತ್ ಬೇಡಿಕೆ, ಉತ್ಪಾದನೆ ಬಗ್ಗೆ ಅದು ಯೋಚಿಸಿಲ್ಲ. ರಾಜ್ಯವನ್ನು ಕತ್ತಲೆ ರಾಜ್ಯವನ್ನಾಗಿ ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಆಕ್ಷೇಪಿಸಿದರು.

ಇದನ್ನೂಓದಿ:ಹೆಚ್ಚುವರಿಯಾಗಿ 22 ತಾಲೂಕುಗಳು 'ಬರ ಪೀಡಿತ': ರಾಜ್ಯ ಸರ್ಕಾರ ಘೋಷಣೆ

Last Updated :Oct 13, 2023, 10:31 PM IST

ABOUT THE AUTHOR

...view details