ಕರ್ನಾಟಕ

karnataka

Congress guarantee scheme: ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ರು ಮಹತ್ವದ ಮಾಹಿತಿ

By

Published : Jul 2, 2023, 3:54 PM IST

Updated : Jul 2, 2023, 4:54 PM IST

ಮುಂದಿನ ಆಗಸ್ಟ್‌ನಿಂದ ಗೃಹಲಕ್ಷ್ಮಿ ಯೋಜನೆಯ ಲಾಭ ಮನೆಯ ಯಜಮಾನಿಗೆ ಸಿಗುತ್ತೆ. ಕೊಟ್ಟಂತ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

minister-lakshmi-hebbalkar-reaction-on-gruha-lahakshmi-scheme
ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರಿಸುವ ಬಗ್ಗೆ ಚರ್ಚಿಸಲಾಗುತ್ತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರು ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೇವೆ. ಜು.3 ಅಥವಾ 4ನೇ ತಾರೀಖು ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‌ಟಿ ಸಂಗ್ರಹ ಎಂಬ ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಕುಮಾರಸ್ವಾಮಿ ಅವರು ಕೂಡ ಸರ್ಕಾರ ನಡೆಸಿದಂತ ಅನುಭವ ಇದ್ದವರು. ಕುಮಾರಸ್ವಾಮಿ ಅಣ್ಣ, ಹಿರಿಯರು, ರಾಜಕೀಯ ಮುತ್ಸದ್ಧಿಗಳು ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ ಎಂದರು.

ಸರ್ಕಾರ ರಚನೆ ಆಗಿ ಈಗ ಒಂದು ತಿಂಗಳು, ಐದು ದಿನ ಆಗಿದೆ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಈಗಾಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ಅದು ತಪ್ಪಾಗುತ್ತೆ. ಸ್ವಲ್ಪ ಟೈಮ್ ಕೊಡಿ, ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅವರನ್ನೇ ಕೇಳಿ ಎಂದು ಹೇಳಿದರು.

ವಿಪಕ್ಷದವರು ಹತಾಶರಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಹತಾಶರಾಗಿದ್ದಾರೆ ಅಂತಾ ಹೇಳಲು ಬಯಸಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡು ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಕೆಲಸ ಮಾಡಲು ನಮಗೆ ಸಮಯಾವಕಾಶ ನೀಡಿ ಅಂತಾ ಕೇಳುತ್ತಿದ್ದೇನೆ. ನಮಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಆದರೂ ನಾವು ದುಡ್ಡು ಕೊಟ್ಟು ನಮ್ಮ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಈ ತಿಂಗಳಿಂದ ಗೃಹಜ್ಯೋತಿ, ಅನ್ನಭಾಗ್ಯ ಲಾಭ ಎಲ್ಲರಿಗೂ ಸಿಗುತ್ತೆ ಎಂದರು.

ಮುಂದಿನ ಆಗಸ್ಟ್‌ನಿಂದ ಗೃಹಲಕ್ಷ್ಮಿ ಯೋಜನೆಯ ಲಾಭ ಮನೆಯ ಯಜಮಾನಿಗೆ ಸಿಗುತ್ತೆ. ಕೊಟ್ಟಂತ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರ ನಿರೀಕ್ಷೆ ತಕ್ಕ ಹಾಗೇ ಕೆಲಸ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು. ರಿಂಗ್ ರೋಡ್ ನಿರ್ಮಾಣಕ್ಕೆ ರೈತರ ವಿರೋಧದ ಬಗ್ಗೆ ಮಾತನಾಡಿ, ಬಹಳಷ್ಟು ರೈತರು ಈ ಯೋಜನೆ ಒಪ್ಪಿದ್ದಾರೆ. ನನ್ನ ಕ್ಷೇತ್ರದಲ್ಲಿ 1200 ರೈತರು ಬರುತ್ತಾರೆ. ಬರೀ ನನ್ನ ಕ್ಷೇತ್ರವಷ್ಟೇ ಅಲ್ಲದೇ ಬೆಳಗಾವಿ ದಕ್ಷಿಣ, ಯಮಕನಮರಡಿ ಕ್ಷೇತ್ರದ ರೈತರು ಇದರಲ್ಲಿ ಬರುತ್ತಾರೆ. ಬೆಳಗಾವಿ ಬೆಳೆಯಬೇಕು, ಅಭಿವೃದ್ಧಿಯಾಗಬೇಕು ಎಂದರೆ ಸರಿಯಾದ ಸಂಪರ್ಕ ವ್ಯವಸ್ಥೆ ಬೇಕಾಗುತ್ತದೆ ಎಂದು ಹೇಳಿದರು.

ಇದಕ್ಕೆ ಕೆಲ ರೈತರ ವಿರೋಧ ಕೂಡ ಇದೆ. ಅಂತಹ ರೈತರಿಗೆ ತಿಳುವಳಿಕೆ ಮೂಡಿಸುತ್ತೇವೆ. ಯಾಕೆಂದರೆ ನನ್ನ ಕ್ಷೇತ್ರದ ರೈತರದ್ದು 1, 2 ಎಕರೆ ಇದ್ದರೆ ಜಾಸ್ತಿಯಾಯಿತು. ಅದೇ ಅವರ ಕುಟುಂಬಕ್ಕೆ ಆಧಾರಸ್ತಂಭ. ಹೀಗಾಗಿ ಅದಕ್ಕೆ ಪರ್ಯಾಯವಾಗಿ ಅವರಿಗೆ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇವೆ.‌ ರೈತರಿಗೆ ಮಾರ್ಕೆಟ್ ದರಕ್ಕಿಂತ ಎರಡು, ಮೂರು, ನಾಲ್ಕು ಪಟ್ಟು ಪರಿಹಾರ ಕೊಟ್ಟು ಮನವಲಿಸುವ ಕೆಲಸ ಮಾಡುತ್ತೇವೆ. ಇನ್ನು ಮುಂಬರುವ ದಿನಗಳಲ್ಲಿ ಖಂಡಿತವಾಗಲೂ ನನ್ನ ಗ್ರಾಮೀಣ ಕ್ಷೇತ್ರಕ್ಕೆ ಕೈಗಾರಿಕೆಗಳು ಬರುತ್ತವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಈ ವರ್ಷದ ಬಜೆಟ್​​ನಲ್ಲೇ ಎಲ್ಲಾ ಗ್ಯಾರಂಟಿ ಘೋಷಣೆಗಳಿಗೂ ಹಣ ಕೊಡುತ್ತೇನೆ: ಸಿಎಂ ಸಿದ್ದರಾಮಯ್ಯ

Last Updated :Jul 2, 2023, 4:54 PM IST

ABOUT THE AUTHOR

...view details