ಕರ್ನಾಟಕ

karnataka

ಟ್ರಾಫಿಕ್ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಬೈಕ್ ಸವಾರ : ಸಂಚಾರಿ ಪೊಲೀಸರಿಂದ ಮೆಚ್ಚುಗೆ

By

Published : May 31, 2023, 10:56 PM IST

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೈಕ್​ ಸವಾರ ಟ್ರಾಫಿಕ್ ಕಂಟ್ರೋಲ್ ಮಾಡಿದ್ದಾರೆ.

ಟ್ರಾಫಿಕ್ ಕಂಟ್ರೋಲ್
ಟ್ರಾಫಿಕ್ ಕಂಟ್ರೋಲ್

ಬೆಳಗಾವಿ :ರಸ್ತೆ ಸಂಚಾರ ದಟ್ಟಣೆ ಕಂಡು ಬಂದರೆ ವಾಹನ ಸವಾರರು ಪೊಲೀಸರ ವಿರುದ್ಧ ಗೊಣಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಬೈಕ್ ಸವಾರ ಸಂಚಾರ ದಟ್ಟಣೆ ವೇಳೆ ತಾವೇ ಸ್ವತಃ ಸಂಚಾರ ನಿರ್ವಹಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ನಗರದ ಕಪಿಲೇಶ್ವರ ಮೇಲ್ಸೇತುವೆ ಬಳಿಯ ಶನಿಮಂದಿರ ಕ್ರಾಸ್​ನಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸಂಚಾರಿ ಪೊಲೀಸರಿಂದ ಮೆಚ್ಚುಗೆ

ಇದೇ ರಸ್ತೆಯ ಮೂಲಕ ಬೈಕ್​ನಲ್ಲಿ ಸದಾಶಿವ ನಗರದ ನಿವಾಸಿ ಪ್ರಸಾದ ಚೌಗುಲೆ ಎಂಬುವವರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಭಾರಿ ಸಂಚಾರ ದಟ್ಟಣೆಯಾಗಿದ್ದನ್ನು ಗಮನಿಸಿದ್ದಾರೆ. ಬಳಿಕ ತಮ್ಮ ಬೈಕ್​ ಅನ್ನು ರಸ್ತೆ ಪಕ್ಕ ನಿಲ್ಲಿಸಿ, ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯ ನಿಂತುಕೊಂಡು ಸಂಚಾರ ನಿರ್ವಹಣೆ ಮಾಡಿದ್ದಾರೆ.

ಪ್ರಸಾದ ಚೌಗುಲೆ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಪೊಲೀಸರಂತೆ ಕೆಲಸ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದು, ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಂತರ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪ್ರಸಾದ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ‌.

ಇನ್ನು ಇದೇ ವೇಳೆ, ಪ್ರಸಾದ ಚೌಗುಲೆ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಇಡೀ ದಿನ ಎಷ್ಟು ಕಷ್ಟ ಪಡುತ್ತಾರೆ ಎನ್ನುವುದು ಇವತ್ತು ನನಗೆ ಅನುಭವವಾಯಿತು. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಈ ರೀತಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಹೀಗಾಗಿ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂಪಡೆದಿದ್ದ ಸಿಎಂ :ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ತಮಗೆ ನೀಡಿರುವ ಜೀರೋ ಟ್ರಾಫಿಕ್ ಸೌಲಭ್ಯ ಹಿಂಪಡೆಯುವಂತೆ ನಗರ ಪೊಲೀಸ್ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಈ ವಿಚಾರವಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದರು. ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲ ಆಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದರು.

ಮೇ.21 ರಂದು ನಗರದಲ್ಲಿ ಸುರಿದ ಭಾರಿ ಮಳೆ ಪರಿಣಾಮ ಕೆ.ಆರ್ ವೃತ್ತ ಸಮೀಪ ಸಂಭವಿಸಿದ ಅವಘಡದಲ್ಲಿ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದರು. ಘಟನೆ ಸ್ಥಳ ಪರಿಶೀಲನೆ ಹಾಗೂ ಯುವತಿಯನ್ನು ದಾಖಲಿಸಿದ್ದ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಂಟಾದ ದಟ್ಟಣೆ ಹಾಗೂ ಆ ಸಂದರ್ಭದಲ್ಲಿ ಜನ ಅನುಭವಿಸುವ ಸಮಸ್ಯೆಯನ್ನು ಮನಗಂಡು ಸಿದ್ದರಾಮಯ್ಯ ಅವರು ತಮಗೆ ಜೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂಬ ನಿರ್ಧಾರ ಕೈಗೊಂಡಿದ್ದರು.

ಇದನ್ನೂ ಓದಿ :ಸಂಚಾರ ದಟ್ಟಣೆ: ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

ABOUT THE AUTHOR

...view details