ಕರ್ನಾಟಕ

karnataka

ಬೆಳಗಾವಿ ಯುವಕನ ಕೊಲೆ ಕೇಸ್: ಎಸ್​ಪಿ ಭೀಮಾಶಂಕರ ಗುಳೇದ ಹೇಳಿದ್ದೇನು?

By ETV Bharat Karnataka Team

Published : Sep 19, 2023, 8:52 PM IST

ತಿಗಡೊಳ್ಳಿಯ ಯುವಕನಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಎಸ್​ಪಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.

belgavi-sp-dr-bhima-shankar-guleda-reaction-on-thigadoli-murder-case
ಬೆಳಗಾವಿ ಯುವಕನ ಕೊಲೆ ಕೇಸ್: ಎಸ್​ಪಿ ಭೀಮಾಶಂಕರ ಗುಳೇದ ಹೇಳಿದ್ದೇನು?

ಎಸ್​ಪಿ ಭೀಮಾಶಂಕರ ಗುಳೇದ

ಬೆಳಗಾವಿ: ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಅದರಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಿಗಡೊಳ್ಳಿಯ ವಿಜಯ ಆರೇರ್(32) ಕೊಲೆಯಾದ ಯುವಕ. ಅದೇ ಗ್ರಾಮದ ಕಲ್ಲಪ್ಪ ಕ್ಯಾತನವರ(48) ಕೊಲೆಗೈದ ಆರೋಪಿ ಎಂದರು.

2011ರಲ್ಲಿ ಖಾನಾಪುರ ತಾಲೂಕಿನ ನಂದಗಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿಜಯ್ ಅವರ ತಂದೆ–ತಾಯಿ ಹತ್ಯೆಯಾಗಿತ್ತು. ಆ ಪ್ರಕರಣದಲ್ಲಿ ಕಲ್ಲಪ್ಪನ ಸಂಬಂಧಿಕರು ಭಾಗಿಯಾಗಿದ್ದರು. ಇದರಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಜಾಮೀನು ಕೊಡಿಸಲು ಕಲ್ಲಪ‍್ಪ ಮತ್ತು ಭರತ್‌ ಪ್ರಯತ್ನಿಸಿದ್ದರು. ಇದು ವಿಜಯ್ ಸಿಟ್ಟಿಗೆ ಕಾರಣವಾಗಿತ್ತು. ಹಾಗಾಗಿ ಕೆಲ ದಿನಗಳ ಹಿಂದೆಯಷ್ಟೇ ಕಲ್ಲಪ್ಪನ ಮನೆಗೆ ಹೋಗಿ ವಿಜಯ್ ಗಲಾಟೆ ಕೂಡ ಮಾಡಿದ್ದ. ಇನ್ನು ಭಾನುವಾರ ಭರತ್ ಮತ್ತು ವಿಜಯ್ ಮಧ್ಯೆ ವಾಗ್ವಾದ ಆಗಿತ್ತು. ಇದಾದ ಅರ್ಧ ಗಂಟೆ ಬಳಿಕ ಕಲ್ಲಪ್ಪನ ಮನೆಗೆ ಹೋಗಿದ್ದ ವಿಜಯ್, ಮಾತುಕತೆಗೆ ಬರುವಂತೆ ಹೇಳಿದ್ದಾನೆ. ಇದೇ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಿದರು.

ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕಲ್ಲಪ್ಪ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್​ಪಿ ಡಾ ಭೀಮಾಶಂಕರ ಗುಳೇದ ತಿಳಿಸಿದರು.

ಕೊಲೆಯಾದ ವಿಜಯ್ ಆರೇರ್​ ಈ ಹಿಂದೆ ಕಲ್ಲಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ರೌಡಿಶೀಟರ್ ಹಣೆಪಟ್ಟಿ ಕಟ್ಟಿಕೊಂಡಿದ್ದ. ಇದೀಗ ತಾನೇ ಕೊಲೆಯಾಗಿದ್ದಾನೆ. ಇನ್ನು ಈ ಸಂಬಂಧ ವಿಜಯ್ ಪತ್ನಿ 9 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಇದಕ್ಕೆ ಪ್ರತಿಯಾಗಿ ಕಲ್ಲಪ್ಪನ ಪತ್ನಿ ವಿಜಯ ಸೇರಿದಂತೆ ಅವರ ನಾಲ್ವರು ಸಂಬಂಧಿಕರ ವಿರುದ್ಧ ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆಯೂ ತನಿಖೆ ಕೈಗೊಂಡಿದ್ದು, ಧಾರವಾಡದ ಆಸ್ಪತ್ರೆಯಲ್ಲಿರುವ ಕಲ್ಲಪ್ಪನ ಮೇಲೆ ನಿಗಾ ವಹಿಸಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳುತ್ತೇವೆ. ಇನ್ನು ಕೊಲೆ ನಡೆದಾಗ ಭರತ್ ಅಲ್ಲಿ ಇದ್ದನಾ ಎಂಬ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ವೈಯಕ್ತಿಕ ದ್ವೇಷ.. ಬೆಳಗಾವಿಯಲ್ಲಿ ಯುವಕನ ಬರ್ಬರ ಕೊಲೆ

ABOUT THE AUTHOR

...view details