ಕರ್ನಾಟಕ

karnataka

ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್​ ಭವಿಷ್ಯ

By

Published : Jun 25, 2023, 5:17 PM IST

Updated : Jun 25, 2023, 7:09 PM IST

ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

Etv Bharatbasanagowda-patila-yatnal-reaction-congress-government
ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್​

ಬಸನಗೌಡ ಪಾಟೀಲ ಯತ್ನಾಳ್​

ಬೆಳಗಾವಿ: ಸಿದ್ದರಾಮಯ್ಯ, ಡಿಕೆಶಿ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ.‌ ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲಾ. ಲೋಕಸಭಾ ಚುನಾವಣೆ ಮುನ್ನ ಇಲ್ಲವೇ, ಚುನಾವಣೆ ಬಳಿಕ ಆ್ಯಕ್ಸಿಡೆಂಟ್ ಆಗಿ ಈ ಸರ್ಕಾರ ಬೀಳುತ್ತದೆ ಎಂದು ವಿಜಯಪುರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸರ್ಕಾರದ ವಿರುದ್ಧ​ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಗಾಂಧಿ ಭವನದಲ್ಲಿ ಇಂದು ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ‌ ಭಾಗಿಯಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಏನಾಗಿದೆ ಎಲ್ಲರಿಗೂ ಗೊತ್ತು. ಯಾರು ಯಾರನ್ನ ಸೋಲಿಸಲು ಯತ್ನಿಸಿದ್ದಾರೆ ಅಂತಾ ಕಾರ್ಯಕರ್ತರಿಗೆ ಗೊತ್ತಿದೆ. ಕಾರ್ಯಕರ್ತರ ಭಾವನೆಯನ್ನ ಕೇಳದಿದ್ರೇ ಇದೇ ಗತಿ ಆಗೋದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ತಾಸು ಕುಳಿತು ಬೊಮ್ಮಾಯಿ ಅವರು ಸಭೆ ಮಾಡಬೇಕು ಎಂದ ಯತ್ನಾಳ್​, ವಿಜಯಪುರದಲ್ಲಿ ನನ್ನ ಚುನಾವಣೆ ಅಷ್ಟು ಸುಲಭ ಇರಲಿಲ್ಲ.‌ ನನ್ನನ್ನ ಸೋಲಿಸಲು ಬಂದವರು ತಾವೇ ಸೋತರೂ ಎನ್ನುವ ಮೂಲಕ ಪರೋಕ್ಷವಾಗಿ ವೇದಿಕೆ ಮೇಲಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ಕೊಟ್ಟರು.

ಹಿಂದುಗಳ ಧ್ವನಿಯನ್ನ ಕುಗ್ಗಿಸುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರನ್ನ ಸೋಲಿಸಿದರು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್ ಅವರ ಬಗ್ಗೆ ಅಪಪ್ರಚಾರ ಮಾಡಿದರು. ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೇ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಪ್ರಧಾನಿಗೆ ಗೌರವ ಕೊಡಬೇಕಿದೆ. ಪಾಟ್ನಾದಲ್ಲಿ ಮೊನ್ನೆ ಕೆಲವರು ಸಭೆ ಮಾಡಿದ್ದರು. ಪಾಕಿಸ್ತಾನ ದಿವಾಳಿ ಆದ ರೀತಿ ಭಾರತವನ್ನು ದಿವಾಳಿ ಮಾಡಲು ಇವರೆಲ್ಲ ಹೊರಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿದೆ ಎಂದರು.

ನಮ್ಮಲ್ಲಿಯ ಕೆಲವು ಅತೃಪ್ತ ಆತ್ಮಗಳು ಅವರನ್ನ ಕೆಡವುತ್ತೇವೆ ಅಂತಾ ಓಡಾಡಿದ್ರೂ. ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದು ನಾನು ಮತ್ತು ಬೊಮ್ಮಾಯಿಯವರು ಮಾತ್ರ. ಸೋತಿದ್ದೇವೆ ಅಂತಾ ಮನೆಯಲ್ಲಿ ಕುಳಿತುಕೊಂಡ್ರೇ ಆಗಲ್ಲಾ. ನಾವೆಲ್ಲರೂ ಕೂಡಿ ಇವತ್ತಿನಿಂದ ಕೆಲಸ ಮಾಡಿ ಬಿಜೆಪಿಯ‌ನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್​ ಕಿವಿಮಾತು ಹೇಳಿದರು.

ಗ್ಯಾರಂಟಿ ಎಲ್ಲವೂ ಮುಗಿತು ಇವರಿಗೆ ಗ್ಯಾರಂಟಿ ಕೊಡೋಕೆ ಸಾಧ್ಯವಿಲ್ಲ. ಈಗ ಎಲ್ಲರೂ ಹೇಗೆ ಒದ್ದಾಡುತ್ತಿದ್ದಾರೆ. ಯಾವ ಸರ್ಕಾರ ಬಂದರೂ ಇದನ್ನು ಜಾರಿಗೆ ತರಲು ಆಗುವುದಿಲ್ಲ. ಒಂದು ರೀತಿ ಕರ್ನಾಟಕದಲ್ಲಿ ಅರಾಜಕತೆ ಶುರುವಾಗಿದೆ. ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಆಗ್ತಿವೆ‌. ನಾವು ಎಲ್ಲದಕ್ಕೂ ತಯಾರಾಗಬೇಕು, ಇಲ್ಲವಾದರೆ ಮನೆಗೆ ಬಂದು ಹೊಡೆಯುತ್ತಾರೆ ಎಂದು ಕಾರ್ಯಕರ್ತರನ್ನು ಯತ್ನಾಳ್​ ಎಚ್ಚರಿಸಿದರು.

ಯಡಿಯೂರಪ್ಪ, ಬೊಮ್ಮಾಯಿ ಮನೆಗೆ ಕಾಂಗ್ರೆಸ್ಸಿಗರು ಸೌಜನ್ಯದ ಭೇಟಿ ಅಂತಾ ಬರ್ತಾರೆ.‌ ಇವರು ಸೌಜನ್ಯದ ಭೇಟಿ ಕೊಡ್ತಿಲ್ಲ. ಸೋನಿಯಾ ಗಾಂಧಿಗೆ ಅಂಜಿಸುವ ಕೆಲಸ ಮಾಡ್ತಾರೆ. ಬೊಮ್ಮಾಯಿಯವರೇ ಅವರನ್ನ ನೀವು ಮನೆವರೆಗೂ ಬಿಟ್ಟುಕೊಳ್ಳಬೇಡಿ.‌ ನಾವು ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ ಅಂತಾರೆ‌. ಅದೇ ರೀತಿ ನಾವು ಅವರ ಮನೆಗೆ ಹೋಗುವುದಿಲ್ಲಾ ಅಂತಾ ಹೇಳಿ. ಅವರನ್ನ ಸ್ವಾಗತಿಸಿಕೊಂಡರೆ ನಮ್ಮ ಕಾರ್ಯಕರ್ತರು ಮಲಗಿ ಬಿಡ್ತಾರೆ ಎಂದು ಯತ್ನಾಳ್​ ಹೇಳಿದ್ರು.

ನಾವು ಯಾರು ಜಗಳ ಮಾಡುತ್ತಿಲ್ಲ, ಪಾರ್ಟಿ ನಿರ್ಣಯ ಮಾಡಿದವರ ಪರ ಕೆಲಸ ಮಾಡಿ. ಮೂರು ತಿಂಗಳಲ್ಲಿ ಗ್ಯಾರಂಟಿ ಬಣ್ಣ ಬಯಲು ಆಗಲಿದೆ. ಸಿದ್ದರಾಮಯ್ಯನವರು ಏನು ಹೇಳಿದ್ರು ಅದನ್ನ ಹೊರತೆಗೆಯುತ್ತೇವೆ. ನಾವು ಗಟ್ಟಿ ಇದ್ದೇವೆ ದನ ಕಾಯುತ್ತಿಲ್ಲ, ಆರ್ಥಿಕತೆ ಬಗ್ಗೆಯೂ ಗೊತ್ತಿದೆ ಎಂದ ಯತ್ನಾಳ್, ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಯಾಗಲಿದೆ. ಪಕ್ಷ ನಿರ್ಣಯ ಮಾಡಿದವರು ವಿರೋಧ ಪಕ್ಷದ ನಾಯಕರು ಆಗಲಿದ್ದಾರೆ. ನಮ್ಮಲ್ಲಿ ಯಾವುದೇ ಒಳ ಪೈಪೋಟಿ ಇಲ್ಲಾ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ಮಂಗಲ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ವಿಜಯಪುರದ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬೈರತಿ‌ ಬಸವರಾಜ, ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ದಲಿತರು ಬಿಜೆಪಿ ಅಧ್ಯಕ್ಷರಾಗಬಾರದೇ..? ನಾನೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ: ಎಂಪಿ ರಮೇಶ ಜಿಗಜಿಣಗಿ

Last Updated : Jun 25, 2023, 7:09 PM IST

ABOUT THE AUTHOR

...view details