ಕರ್ನಾಟಕ

karnataka

ಕುಕ್ಕರ್ ಹಂಚಿದ ಆರೋಪ ಪ್ರಕರಣ; ಕ್ರಮ ಕೈಗೊಳ್ಳದ ರಾಜ್ಯ ಚುನಾವಣಾ ಆಯೋಗದ ವಿರುದ್ಧ ECIಗೆ ದೂರು

By ETV Bharat Karnataka Team

Published : Dec 12, 2023, 12:50 PM IST

Updated : Dec 12, 2023, 2:23 PM IST

ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ದೂರು ನೀಡಿದ್ದಾರೆ.

Bheemappa Gadada Pressmeet
ಭೀಮಪ್ಪ ಗಡಾದ ಸುದ್ದಿಗೋಷ್ಠಿ

ಭೀಮಪ್ಪ ಗಡಾದ ಸುದ್ದಿಗೋಷ್ಠಿ

ಬೆಳಗಾವಿ: ಚುನಾವಣೆ ಸಂದರ್ಭದಲ್ಲಿ ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದ ಅಧ್ಯಕ್ಷ ನಂಜಪ್ಪ ಎಂಬುವರು ತಮ್ಮ ತಂದೆಯ ಕೈಯಿಂದ ಕುಕ್ಕರ್​ ಹಾಗೂ ಇಸ್ತ್ರಿ ಪೆಟ್ಟಿಗೆ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದರು ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿರುದ್ಧದ ದೂರಿನ ಕುರಿತು ಕ್ರಮ ಕೈಗೊಳ್ಳದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ದಾಖಲೆಗಳ ಸಮೇತ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸೆ.15ರಂದು ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಅವರು ಕುಕ್ಕರ್ ಮತ್ತು ಇಸ್ತ್ರಿ ಪೆಟ್ಟಿಗೆ ಹಂಚಿದ್ದರಿಂದ ತಂದೆಯವರ ಗೆಲುವಿಗೆ ಸಹಕಾರಿಯಾಯಿತು ಎಂದು ಭಾಷಣ ಮಾಡಿದ್ದರು. ಸೆ. 21ರಂದು ಸಿದ್ದರಾಮಯ್ಯ ಆಯ್ಕೆ ಅಸಿಂಧುಗೊಳಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೆವು. ಆದರೆ, 75 ದಿನಗಳಾದ್ರೂ ಕ್ರಮಕ್ಕೆ ಮುಂದಾಗದ ರಾಜ್ಯ ಚುನಾವಣಾಧಿಕಾರಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದರು.

ಸೆ.21ರಂದು ಸಲ್ಲಿಸಿದ್ದ ದೂರಿನ ಕುರಿತು ತಾವು ತೆಗೆದುಕೊಂಡ ಕ್ರಮದ ಬಗ್ಗೆ ದಾಖಲೆಗಳನ್ನು ನೀಡುವಂತೆ ಮುಖ್ಯ ಚುನಾವಣಾಧಿಕಾರಿಗೆ ಲಿಖಿತ ಉತ್ತರ ನೀಡುವಂತೆ ಅಕ್ಟೋಬರ್ 4ರಂದು ಅರ್ಜಿ ಸಲ್ಲಿಸಿದ್ದಕ್ಕೆ ಅ.25ರಂದು ಲಿಖಿತ ಉತ್ತರ ನೀಡಿರುವ ಅಧಿಕಾರಿಗಳು "ದೂರು ಅರ್ಜಿಯ ಕುರಿತು ಭಾರತ ಚುನಾವಣಾ ಆಯೋಗದ ಮಾರ್ಗದರ್ಶನವನ್ನು ಕೋರಲಾಗಿದೆ" ಎಂದು ತಿಳಿಸಿದ್ದಾರೆ ಎಂದರು.

ಇನ್ನು ಭಾರತ ಚುನಾವಣಾ ಆಯೋಗದ ಮಾರ್ಗದರ್ಶನಕ್ಕಾಗಿ ಬರೆದಿರುವ ಪತ್ರದ ನಕಲು ಹಾಗೂ ಕಡತದಲ್ಲಿರುವ ಪ್ರತಿಯೊಂದು ದಾಖಲೆಗಳನ್ನು ನೀಡುವಂತೆ ನವೆಂಬರ್ 7ರಂದು ಸಲ್ಲಿಸಿದ ಅರ್ಜಿಗೆ 1 ತಿಂಗಳು ಕಳೆದರೂ ದಾಖಲೆಗಳನ್ನು ನೀಡದೇ ಇದ್ದಾಗ ಪುನಃ ಡಿ.1ರಂದು ಪತ್ರ ಬರೆಯಲಾಗಿತ್ತು. ಆಗ "ಭಾರತ ಚುನಾವಣಾ ಆಯೋಗಕ್ಕೆ ಕೋರಲಾದ ಮಾರ್ಗದರ್ಶನ ಇನ್ನೂ ಸ್ವೀಕೃತವಾಗಿಲ್ಲ. ಸ್ವೀಕೃತವಾದ ಕೂಡಲೇ ತಾವು ಕೋರಲಾದ ಮಾಹಿತಿ ಒದಗಿಸಲಾಗುವುದು" ಎಂದು ಡಿ.5ರಂದು ಚುನಾವಣಾಧಿಕಾರಿಗಳು ಲಿಖಿತವಾಗಿ ತಿಳಿಸಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಭೀಮಪ್ಪ ಗಡಾದ ಹೇಳಿದರು.

ಸ್ವತಃ ಸಿದ್ದರಾಮಯ್ಯ ಅವರ ಪುತ್ರ, ಜವಾಬ್ದಾರಿ ಸ್ಥಾನದಲ್ಲಿರುವ ಯತೀಂದ್ರ ಅವರೇ ಹೇಳಿದ್ದಾರೆ. ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.‌ ಮುಂದೆ ಏನೂ ಕ್ರಮಕ್ಕೆ ಮುಂದಾಗದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಭೀಮಪ್ಪ ಗಡಾದ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ; ಯತೀಂದ್ರ ಹೇಳಿಕೆ ನಿಜವಾಗಿದ್ದರೆ, ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದ ಬೊಮ್ಮಾಯಿ

Last Updated :Dec 12, 2023, 2:23 PM IST

ABOUT THE AUTHOR

...view details