ಕರ್ನಾಟಕ

karnataka

ಅಕ್ಕನ ಮಗನಿಗೆ ಪಟ್ಟ ಕಟ್ಟಿ, ಸ್ವಂತ ಮಗನಿಗೆ ಭೈರವಿ ಕಂಕಣ ತೊಡಿಸಿದ ಮಹಾತ್ಯಾಗಿ ಕಿತ್ತೂರು ರಾಣಿ ಚೆನ್ನಮ್ಮ!

By ETV Bharat Karnataka Team

Published : Oct 19, 2023, 11:02 PM IST

Updated : Oct 20, 2023, 4:31 PM IST

ಅಕ್ಟೋಬರ್ 23, 24, 25 ರಂದು ಮೂರು‌ ದಿನಗಳ ಕಾಲ ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮಾಜಿ ಸಂಸ್ಥಾನದ ಕುರಿತ ವಿಶೇಷ ವರದಿ ಇಲ್ಲಿದೆ.

ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ

ಇತಿಹಾಸಕಾರ ಮಹೇಶ ಚನ್ನಂಗಿ ಮಾಹಿತಿ

ಬೆಳಗಾವಿ:ಇತಿಹಾಸದಲ್ಲಿ ಅದೆಷ್ಟೋ ರಾಜ ಮತ್ತು ರಾಣಿಯರು ತಮ್ಮ ಮಗನಿಗೆ ಪಟ್ಟ ಕಟ್ಟಲು ಹೋರಾಟ, ಯುದ್ಧ ಮಾಡಿದ ಉದಾಹರಣೆ ಇದೆ. ಆದರೆ ತನ್ನ ಮಗನನ್ನು ರಾಜನ ಅಂಗರಕ್ಷಕನಾಗಿ ನೇಮಿಸಿ, ಅಕ್ಕನ ಮಗನನ್ನು ಪಟ್ಟಕ್ಕೇರಿಸಿದ ಶ್ರೇಷ್ಠ ಇತಿಹಾಸ ಇರುವುದು ಕಿತ್ತೂರು ಸಂಸ್ಥಾನಕ್ಕೆ ಮಾತ್ರ. ಅದರ ಶ್ರೇಯ ರಾಣಿ ಚೆನ್ನಮ್ಮಾಜಿಗೆ ಸಲ್ಲುತ್ತದೆ. ಹೌದು, ಕಿತ್ತೂರು ಸಂಸ್ಥಾನವು ಭಾರತದ ಇತಿಹಾಸದ ಪುಟದಲ್ಲಿ ಹಲವು ಪ್ರೇರಣಾದಾಯಿ ಮತ್ತು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.

ಕಿತ್ತೂರಿನ ರಾಜ ಮಲ್ಲಸರ್ಜ ದೇಸಾಯಿ 1816ರಲ್ಲಿ ಅನಾರೋಗ್ಯದಿಂದ ನಿಧನರಾಗುತ್ತಾರೆ. ಆಗ, ಮುಂದೆ ಯಾರು ಉತ್ತರಾಧಿಕಾರಿ ಆಗಬೇಕೆಂಬ ಚರ್ಚೆಯಾಗುತ್ತದೆ. ಆಗ ಸಂಸ್ಥಾನದಲ್ಲಿ ಶಿವಲಿಂಗರುದ್ರಸರ್ಜ, ಶಿವಬಸವರಾಜ, ವೀರಭದ್ರಪ್ಪಸರ್ಜ ಎಂಬ ಮೂವರು ಯುವರಾಜರು ಇದ್ದರು. ಈ ವೇಳೆ ಯಾರಿಗೆ ಪಟ್ಟ ಕಟ್ಟಬೇಕು ಎಂದು ನಿರ್ಣಯಿಸುವ ಅಧಿಕಾರ ಮತ್ತು ಸ್ವಾತಂತ್ರ್ಯ ರಾಣಿ ಚನ್ನಮ್ಮಾಜಿಗೆ ಇತ್ತು. ಆದರೆ, ಆ ಸಂದರ್ಭದಲ್ಲಿ ತಮ್ಮ ಪುತ್ರ ಶಿವಬಸವ ರಾಜನಿಗೆ ಭೈರವಿ ಕಂಕಣ ತೊಡಿಸಿ, ತಮ್ಮ ಅಕ್ಕನ ಪುತ್ರ ಶಿವಲಿಂಗ ರುದ್ರಸರ್ಜನಿಗೆ ಪಟ್ಟ ಕಟ್ಟಿ ಚನ್ನಮ್ಮ ಮಹಾತ್ಯಾಗಿ ಎನಿಸಿಕೊಳ್ಳುತ್ತಾಳೆ.

ಭೈರವಿ ಕಂಕಣ ತೊಟ್ಟವರು ರಾಜನಾಗಲು ಬರುವುದಿಲ್ಲ. ರಾಜನ ಅಂಗರಕ್ಷಕನಾಗಿ ಕೆಲಸ ಮಾಡಬೇಕಾಗುತ್ತದೆ. ಚನ್ನಮ್ಮ ಸಾವಿರಾರು ಶೂರ, ಧೀರ ಸೈನಿಕರನ್ನು ಸಲುಹಿದ ದಿಟ್ಟ ರಾಣಿ ಆಗಿದ್ದಷ್ಟೇ ಅಲ್ಲದೇ, ತ್ಯಾಗದ ಕಣಿಯೂ ಆಗಿದ್ದರು ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಈಟಿವಿ ಭಾರತ್​ಗೆ ಇತಿಹಾಸಕಾರ ಮಹೇಶ ಚನ್ನಂಗಿ ತಿಳಿಸಿದರು.

ಐಸಿಎಸ್ ಅಧಿಕಾರಿ ಕೊಂದ ಮೊದಲ ಸಂಸ್ಥಾನ:ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರಿಗಿಂತ 33 ವರ್ಷ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದು ರಾಣಿ ಚೆನ್ನಮ್ಮ. ಜಗತ್ತಿನ ಅನೇಕ ದೇಶಗಳನ್ನು ಆಳಿರುವ ಬ್ರಿಟಿಷರು ಐಸಿಎಸ್ ಅಧಿಕಾರಿಯನ್ನು ಕಳೆದುಕೊಂಡಿರುವುದು ಅತ್ಯಂತ ವಿರಳ. ಚೆನ್ನಮ್ಮನ ನೇತೃತ್ವದ ಸೈನ್ಯವು 1823 ಅಕ್ಟೋಬರ್ 23ರಂದು ಥ್ಯಾಕರೆ ಎನ್ನುವ ಐಸಿಎಸ್ ಅಧಿಕಾರಿಯನ್ನು ಹೊಡೆದು ಹಾಕಿರುವುದು ಭಾರತದ ಇತಿಹಾಸದ ಶೌರ್ಯದ ಘಟನಾವಳಿಯಲ್ಲಿ ಪ್ರಮುಖವಾದದ್ದು.

ಅಂದಿನ ಐಸಿಎಸ್/ಧಾರವಾಡ ಜಿಲ್ಲಾಧಿಕಾರಿ ವ್ಯಾಪ್ತಿಯು ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಿತ್ತು. ಇಷ್ಟೊಂದು ವಿಶಾಲ ಪ್ರಾಂತದ ಹೆಚ್ಚು ಅಧಿಕಾರವನ್ನು ಥ್ಯಾಕರೆ ಹೊಂದಿದ್ದರು. ಥ್ಯಾಕರೆ ಸಾವು ಬ್ರಿಟಿಷರನ್ನು ನಿದ್ದೆಗೆಡಿಸಿದ್ದಷ್ಟೇ ಅಲ್ಲದೇ, ಸಾಕಷ್ಟು ಮುಜುಗುರ ಉಂಟು ಮಾಡಿತ್ತು.

ಗಾಂಧೀಜಿಗಿಂತ ಮೊದಲು ವರ್ಣಬೇಧ ನೀತಿಗೆ ತಡೆ:ಮಹಾತ್ಮಾ ಗಾಂಧೀಜಿಗಿಂತ ಮೊದಲು ವರ್ಣಬೇಧ ನೀತಿಗೆ ಒಳಗಾಗಿ ನೊಂದವರಿಗೆ ಕಿತ್ತೂರು ಸಂಸ್ಥಾನದಲ್ಲಿ ದೇಶಿಯ ಸೈನಿಕರ ಸಮಾನವಾಗಿ ಬದುಕು ಕಟ್ಟಿ ಕೊಡಲು ಅವಕಾಶ ನೀಡಲಾಗಿತ್ತು. ಕಿತ್ತೂರು ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಬಸಿರಾಮ ಅಥವಾ ಗಜವೀರ ಎನ್ನುವ ಸೈನಿಕ ನಿಗ್ರೋ/ಸಿದ್ಧಿ ಜನಾಂಗಕ್ಕೆ ಸೇರಿದವರು. ಥ್ಯಾಕರೆಯನ್ನು ಅಮಟೂರ ಬಾಳಪ್ಪ ಗುಂಡಿಕ್ಕಿ‌ ಕೊಂದ ಬಳಿಕ‌ ಆತನ ರುಂಡವನ್ನು ಕತ್ತರಿಸಿ ಊರು ತುಂಬಾ ಮೆರವಣಿಗೆ ಮಾಡಿದ್ದು, ಇದೇ ಗಜವೀರ. ಇನ್ನು ಗಾಂಧೀಜಿಗಿಂತ ಮೊದಲೇ ವರ್ಣಬೇಧ ನೀತಿಯನ್ನು ತೊಡೆದು ಹಾಕಿ ಸಮ ಸಮಾಜವನ್ನು ಕಿತ್ತೂರು ಸಂಸ್ಥಾನದಲ್ಲಿ ಅನುಷ್ಠಾನಕ್ಕೆ ತಂದಿದ್ದು ವಿಶೇಷವಾಗಿತ್ತು.

ದಕ್ಷಿಣ ಭಾರತ ಹೋರಾಟಗಾರರಿಗೂ ಸಿಗಲಿ ಗೌರವ:ಭಗತ್ ಸಿಂಗ್, ಚಂದ್ರಶೇಖರ ಆಜಾದ್, ರಾಜಗುರು, ಸುಖದೇವ ಅವರು ದೇಶ ಕಂಡ ಅಪ್ರತಿಮ ದೇಶ ಭಕ್ತರು. ಇವರೆಲ್ಲಾ 1930ರ ನಂತರದಲ್ಲಿ ಬರುತ್ತಾರೆ. ಆದರೆ, ಅವರನ್ನು ಗೌರವಿಸುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಕಿತ್ತೂರು ನಾಡಿನಲ್ಲಿ ಅವರದೇ ಶೈಲಿಯಲ್ಲಿ ನೂರು ವರ್ಷಕ್ಕೂ ಮೊದಲು ಹೋರಾಟ ಮಾಡಿದ್ದ ಸರ್ದಾರ ಗುರುಶಿದ್ದಪ್ಪ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚನ್ನಬಸಪ್ಪ, ಸಂಗೊಳ್ಳಿ ರಾಯಣ್ಣ, ಹಬಸಿರಾಮ ಸೇರಿದಂತೆ ಸಾವಿರಾರು ಶೂರರು ನೆತ್ತರು ಹರಿಸಿದ್ದಾರೆ. ಹೋರಾಟಗಾರರಲ್ಲಿ ತಾರತಮ್ಯ ಸರಿಯಲ್ಲ. ಅವರಿಗೆ ಸಿಕ್ಕ ಪ್ರಚಾರ, ಗೌರವ ಇವರಿಗೂ ಸಿಗುವಂತಾಗಲಿ ಎಂಬುದು ಮಹೇಶ ಚನ್ನಂಗಿ ಅವರ ಅಭಿಮತ.

ಗೆರಿಲ್ಲಾ ಮಾದರಿ ತಂತ್ರ:ಗೆರಿಲ್ಲಾ ಮಾದರಿ ಛತ್ರಪತಿ ಶಿವಾಜಿ ಮಹಾರಾಜರ ಒಂದು ವಿಭಿನ್ನ ಯುದ್ಧದ ವಿಧಾನವಾಗಿತ್ತು. ಈ ಮಾದರಿಯನ್ನು ಬ್ರಿಟಿಷರ ವಿರುದ್ಧ ಸಂಗೊಳ್ಳಿ ರಾಯಣ್ಣ ಮತ್ತು ಆತನ ತಂಡ ಪ್ರಯೋಗಿಸಿತ್ತು. ಗುಡ್ಡಗಾಡು ಪ್ರದೇಶದಲ್ಲಿ ಅವಿತು, ಭೂಗತವಾಗಿ ಹೋರಾಟ ಮಾಡಿದ್ದರು.

ಸಮಾನತೆ ಮಂತ್ರ:ತಾಯಿ ಹೃದಯದ ರಾಣಿ ಚೆನ್ನಮ್ಮ ತನ್ನ ಸಂಸ್ಥಾನದಲ್ಲಿ ಎಲ್ಲ ಸಮಾಜಗಳಿಗೂ ಪ್ರಾತಿನಿಧ್ಯ ನೀಡಿದ್ದರು. ಎಲ್ಲರನ್ನೂ ತನ್ನ ಮಕ್ಕಳಂತೆ ಕಾಣುತ್ತಿದ್ದರು. ಇನ್ನು ಅನೇಕ ಸಂಸ್ಥಾನಗಳಲ್ಲಿ ಅಯಾ ಸಮಾಜಗಳು ಪ್ರತ್ಯೇಕವಾಗಿ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಕಾಣಬಹುದಾಗಿತ್ತು. ಆದರೆ, ಕಿತ್ತೂರು ಸಂಸ್ಥಾನವು ಎಲ್ಲ ಸಮುದಾಯಗಳ ಸೈನಿಕರು ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಜಾತ್ಯಾತೀತ ಮನೋಭಾವ ಹೊಂದಿತ್ತು.

ಪ್ರಮುಖ ಆರ್ಥಿಕ ಶಕ್ತಿ:ಅರೆ ಮಲೆನಾಡು ಪ್ರದೇಶ ಹೊಂದಿದ್ದ ಕಿತ್ತೂರು ನಾಡಿನಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದ ಅಕ್ಕಿ, ಹತ್ತಿ, ಬೆಲ್ಲ ದಕ್ಷಿಣ ಭಾರತದ ಎಲ್ಲಾ ಮಾರುಕಟ್ಟೆಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಗೋವಾದ ಪೋರ್ಚುಗೀಸರಿಗೂ ಇಲ್ಲಿಂದಲೇ ಅಕ್ಕಿ ಹೋಗುತ್ತಿತ್ತು. ಅವರು ಅಕ್ಕಿಯ ಬದಲು ಬಂಗಾರವನ್ನು ಕಿತ್ತೂರಿಗೆ ಕಳಿಸುತ್ತಿದ್ದರು. ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವಾಗಿ ಸಾಕಷ್ಟು ಸಮೃದ್ಧಿ ಹೊಂದಿತ್ತು.

ಇದನ್ನೂ ಓದಿ:ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್​ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : Oct 20, 2023, 4:31 PM IST

ABOUT THE AUTHOR

...view details