ಕರ್ನಾಟಕ

karnataka

ಐದು ಭಾಗ್ಯಗಳ ವಿವರ ನೀಡುವ ಬದಲು ಮೋದಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದು ವಿಪರ್ಯಾಸ: ಕೋಟಾ ಶ್ರೀನಿವಾಸ್​ ಪೂಜಾರಿ

By

Published : Jul 14, 2023, 8:12 PM IST

ಸಭಾತ್ಯಾಗ ಮಾಡಿದ ನಂತರ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ನಾಯಕರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

Kota Srinivas Pujari
ಕೋಟಾ ಶ್ರೀನಿವಾಸ್​ ಪೂಜಾರಿ

ಕೋಟಾ ಶ್ರೀನಿವಾಸ್​ ಪೂಜಾರಿ

ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಐದು ಭಾಗ್ಯಗಳ ಕುರಿತು ವಿವರಣೆ ನೀಡುವ ಬದಲು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಸಮಯವನ್ನು ಬಳಸಿಕೊಂಡಿದ್ದು ವಿಪರ್ಯಾಸ ಎಂದು ವಿಧಾನ ಪರಿಷತ್ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಂದರ್ಭ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಇಂದು ಮುಖ್ಯಮಂತ್ರಿಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಬಂದಿದ್ದರು. ರಾಜ್ಯಪಾಲರು ಭಾಷಣದಲ್ಲಿ ರಾಜ್ಯ ಸರ್ಕಾರ ಉಲ್ಲೇಖಿಸಿರುವ 5 ಭಾಗ್ಯಗಳ ಕುರಿತು ಮಾಹಿತಿ ಕೊಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಇವುಗಳ ಬಗ್ಗೆ ಅಸ್ಪಷ್ಟವಾದ ಉತ್ತರ ನೀಡಿ, ಬಸವರಾಜ ಬೊಮ್ಮಾಯಿ ಸರ್ಕಾರ ನೀಡಿದ್ದ ವಿದ್ಯಾನಿಧಿ ಯೋಜನೆಯನ್ನು ಮುಂದುವರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಹ ಉತ್ತರ ನೀಡದೆ, ಯಾವುದೇ ವಿಚಾರಕ್ಕೂ ಸಮರ್ಪಕವಾದ ಉತ್ತರ ಕೊಟ್ಟಿಲ್ಲ.

ಕೇಂದ್ರ ಸರ್ಕಾರ ಪ್ರತಿ ಬಿಪಿಎಲ್ ಪಡಿತರ ಚೀಟಿದಾರ ವ್ಯಕ್ತಿಗೆ ತಲಾ ಐದು ಕೆಜಿಯಂತೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಕರ್ನಾಟಕಕ್ಕೆ 22.5 ಲಕ್ಷ ಕೋಟಿ, ತಮಿಳುನಾಡಿಗೆ 34 ಲಕ್ಷ ಕೋಟಿ, ಕೇರಳಕ್ಕೆ 14 ಲಕ್ಷ ಕೋಟಿ ಸೇರಿದಂತೆ ದೇಶಾದ್ಯಂತ 81 ಕೋಟಿ ಜನರಿಗೆ 549 ಲಕ್ಷ ಕ್ವಿಂಟಲ್ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದೆಲ್ಲವನ್ನೂ ಆಹಾರ ಭದ್ರತಾ ಯೋಜನೆ ಅಡಿ ಈ ಅಕ್ಕಿಗಳನ್ನು ನೀಡುತ್ತಿರುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆದರೂ ನಾನು 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೆ, ಆದರೆ ಕೇಂದ್ರ ಸರ್ಕಾರ ಈಗ ಅಕ್ಕಿ ನೀಡಲು ನಿರಾಕರಿಸುತ್ತಿದೆ ಎಂದು ಅನಗತ್ಯವಾಗಿ ಆರೋಪಿಸುತ್ತಿದ್ದಾರೆ ಎಂದರು.

ಟೀಕೆಯಲ್ಲೇ ಕಾಲಹರಣ ಆರೋಪ:ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಟೀಕೆ ಟಿಪ್ಪಣಿ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರಿಸಿಲ್ಲ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯನ್ನು ದೂಷಿಸುವುದು ಮತ್ತು ಬಿಜೆಪಿಯನ್ನು ದೂರೋದನ್ನ ಬಿಟ್ಟರೆ, ರಾಜ್ಯಪಾಲರ ಭಾಷಣದ ಮೂಲಕ ಯಾವ ಯೋಜನೆಗಳನ್ನು ನೀಡಿದ್ದಾರೆ ಮತ್ತು ಅವರು ಯಾವ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ಕೊಟ್ಟಿಲ್ಲ. ಐದು ಗ್ಯಾರಂಟಿಯನ್ನು ಕಾಂಗ್ರೆಸ್ ಪಕ್ಷ ನೀಡಿದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ. ಆರ್ಥಿಕ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಯೋಚನೆ ಮಾಡದೆ, ಮೋದಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವ ಬದಲು ಒಂದು ರೀತಿ ಚುನಾವಣಾ ಪ್ರಚಾರ ಭಾಷಣದ ರೀತಿ ಮುಖ್ಯಮಂತ್ರಿ ಮಾತನಾಡಿದರು. ನ್ಯೂ ಭಾಷಣ ಮಾಡಬೇಡಿ ರಾಜ್ಯಪಾಲರ ಭಾಷಣಕ್ಕೆ ಉತ್ತರ ಕೊಡಿ ಎಂದು ಕೇಳಿದ್ದಕ್ಕೆ ಒಂದು ರೀತಿಯ ಬೇಜವಾಬ್ದಾರಿ ವರ್ತನೆ ಮಾಡಿದ ಹಿನ್ನೆಲೆಯಲ್ಲಿ ನಾವು ಅವರ ಬೆದರಿಕೆ ಪ್ರೀತಿಯ ಮಾತನ್ನು ಖಂಡಿಸಿ ವಿಧಾನ ಪರಿಷತ್ ಕಲಾಪದಿಂದ ಸಭಾತ್ಯಾಗ ಮಾಡಿ ಹೊರ ಬಂದಿದ್ದೇವೆ. ಮುಖ್ಯಮಂತ್ರಿ ಅವರ ಹೊಣೆಗಾರಿಕೆ ಇಲ್ಲದ ಮಾತನ್ನು ಬಿಜೆಪಿ ಖಂಡಿಸುತ್ತದೆ. ಸಭಾತ್ಯಾಗ ಮಾಡುವ ಜೊತೆಗೆ ಕೊಟ್ಟ ಮಾತನ್ನ ಈಡೇರಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ದೂಷಣೆ ಮಾಡುತ್ತಿದ್ದ ಸಂದರ್ಭ, ನಾವು ಅವರಿಗೆ ಸ್ಪಷ್ಟವಾಗಿ ವಿವರಿಸಿದ್ದು 549 ಲಕ್ಷ ಕ್ವಿಂಟಲ್ ಅಕ್ಕಿಯನ್ನು ದೇಶದ 81 ಕೋಟಿ ಜನರಿಗೆ ಉಚಿತವಾಗಿ ನೀಡುತ್ತಿರುವ ಸರ್ಕಾರ ತಿಂಗಳಿಗೆ 18 ಸಾವಿರ ಕೋಟಿ ರೂ ಮೊತ್ತವನ್ನು ಇದಕ್ಕಾಗಿ ವ್ಯಯಿಸುತ್ತಿದೆ ಎಂದು ತಿಳಿಸಿದ್ದೇವೆ. ಇದಕ್ಕೆ ನೀವೇನು ಹೇಳುತ್ತೀರಿ ಎಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೇವೆ. ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎನ್ನುತ್ತಿದ್ದಾರೆ.

10 ಕೆಜಿ ಅಕ್ಕಿ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ರೀತಿ ಬೇಜವಾಬ್ದಾರಿ ನಿಲುವನ್ನ ಖಂಡಿಸಿ ನಾವು ಜನರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸುವ ಕಾರ್ಯ ಮಾಡುತ್ತಿದ್ದೇವೆ. ತಾವು ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದೇ ಬಿಜೆಪಿಯನ್ನು ದೂಷಿಸಿ ಇವರು ಬಡವರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇಂದು ಇವರಿಗೆ 5 ಕೆಜಿ ಅಕ್ಕಿ ಸಹ ನೀಡಲು ಸಾಧ್ಯವಾಗುತ್ತಿಲ್ಲ. 3 ಕೆ.ಜಿ ಅಕ್ಕಿ ಹಾಗೂ ಎರಡು ಕೆಜಿ ಗೋಧಿ ನೀಡಲು ಈಗ ತೀರ್ಮಾನಿಸಿದ್ದಾರೆ. ಬಡವರ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ಬಿಜೆಪಿಯಲ್ಲ ಸಿದ್ದರಾಮಯ್ಯ ಸರ್ಕಾರ ಎಂದು ಆರೋಪಿಸಿದರು.

ಬಿಜೆಪಿ ಸದಸ್ಯ ವೈ ಎ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಪ್ರಣಾಳಿಕೆ ಅಥವಾ ರಾಜ್ಯಪಾಲರ ಭಾಷಣ ಇಲ್ಲವೇ ಬಜೆಟ್ ಬಗ್ಗೆ ಯಾವುದೇ ಸ್ಪಷ್ಟ ನಿಲುವನ್ನು ಮುಖ್ಯಮಂತ್ರಿಗಳು ಭಾಷಣದಲ್ಲಿ ವ್ಯಕ್ತಪಡಿಸಿಲ್ಲ. ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಯಾವುದೇ ಕಾರ್ಯಕ್ರಮವನ್ನು ನೀಡಲಾಗದೇ ಅಸಹಾಯಕರಾಗಿ ಕೇಂದ್ರ ಸರ್ಕಾರದ ವಿರುದ್ಧ ಕೈ ಬೆರಳು ಮಾಡುತ್ತಿದ್ದಾರೆ. ಅವರನ್ನು ದೂಷಿಸುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಸಿದ್ದರಾಮಯ್ಯ ಭಾಷಣ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಕಾರ್ಯಕರ್ತರ ಮುಂದೆ ಮಾಡಿದ ಭಾಷಣದಂತಿತ್ತು. ಸಂತೆ ಭಾಷಣದಂತೆ ಮಾತನಾಡಿದರು. ಯಾವುದೇ ನಿರ್ದಿಷ್ಟ ರೂಪದ ಕಾರ್ಯಕ್ರಮವನ್ನು ವಿವರಿಸಿಲ್ಲ. ಯಾವುದೇ ಅಂಕಿ - ಅಂಶ ನೀಡದೇ ಕೇವಲ ರಾಜಕೀಯ ಪ್ರೇರಿತ ಭಾಷಣ ಮಾಡಿದ್ದಾರೆ. ಇದು ವಿಧಾನ ಪರಿಷತ್​​​ಗೆ ಅಪಮಾನ ಮಾಡುವ ರೀತಿಯ ಭಾಷಣ.

ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಇದುವರೆಗೂ ಒಂದು ಕಾಲು ಅಕ್ಕಿಯನ್ನು ಸಹ ಕೊಡಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ಅವರನ್ನು ಖಂಡಿಸಲು ಮಾತ್ರ ಸಿದ್ದರಾಮಯ್ಯ ಭಾಷಣ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಮೋದಿ ಅವರನ್ನು ನೆನಪಿಸಿಕೊಳ್ಳದಿದ್ದರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ. ಹಲೋ, ಘೋಷಣೆಗಳನ್ನು ನೀಡಿ ಜನರನ್ನ ವಂಚಿಸಿರುವ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಮತದಾರರೇ ಬುದ್ಧಿ ಕಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಜನಸೇವಾ ಟ್ರಸ್ಟ್​​ಗೆ ಕೊಟ್ಟಿದ್ದ ಭೂಮಿಗೆ ತಡೆ ನೀಡಿದ್ದು ಸೇಡಿನ ರಾಜಕಾರಣ: ಮಾಜಿ ಸಿಎಂ ಬೊಮ್ಮಾಯಿ ಕಿಡಿ

ABOUT THE AUTHOR

...view details