ಕರ್ನಾಟಕ

karnataka

Karnataka Budget: ಸಿದ್ದರಾಮಯ್ಯ ಬಜೆಟ್‌ನಿಂದ ಗೃಹ ಇಲಾಖೆಗೆ ಸಿಕ್ಕಿದ್ದೇನು? ಸಂಪೂರ್ಣ ಮಾಹಿತಿ..

By

Published : Jul 7, 2023, 2:15 PM IST

Updated : Jul 7, 2023, 2:21 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಈ ಬಾರಿಯ ಬಜೆಟ್​ನಲ್ಲಿ ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಗೃಹ ಇಲಾಖೆಗೆ ಕೊಟ್ಟಿರುವ ಅನುದಾನದ ಮಾಹಿತಿ ಇಲ್ಲಿದೆ ನೋಡಿ.

home department
ಗೃಹ ಇಲಾಖೆ

ಬೆಂಗಳೂರು : ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆ ಉತ್ತಮಗೊಳಿಸಲು ಹಾಗೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ ಈ ಸಂಬಂಧ ನಗರದಲ್ಲಿ ಐದು ಟ್ರಾಫಿಕ್ ಹಾಗೂ ಆರು ಮಹಿಳಾ ಠಾಣೆಗಳನ್ನು ತೆರೆಯಲು‌ ನಿರ್ಧರಿಸಿದೆ‌.

ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಇಲಾಖೆಯಲ್ಲಿ ಹಲವು ರೀತಿಯ ಸುಧಾರಣಾ ಕ್ರಮ ಕೈಗೊಂಡರೂ ನಿರೀಕ್ಷೆಯಂತೆ ಟ್ರಾಫಿಕ್ ಕಡಿಮೆಯಾಗಿಲ್ಲ.‌ ಅಲ್ಲದೆ‌, ಸಿಬ್ಬಂದಿ ಕೊರತೆಯಿಂದ ಟ್ರಾಫಿಕ್ ಸುಧಾರಣೆಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ರಾಜಧಾನಿಯಲ್ಲಿರುವ 111 ಸಂಚಾರ ಪೊಲೀಸ್ ಠಾಣೆಗಳ ಜೊತೆ ಮತ್ತೆ ಐದು ಠಾಣೆಗಳು‌ ನಿರ್ಮಾಣವಾಗಲಿದೆ.

ನಗರದಲ್ಲಿ ಈಗಾಗಲೇ ಎರಡು ಮಹಿಳಾ ಠಾಣೆಗಳಿವೆ. ಆದರೆ, ಪ್ರಕರಣಗಳ‌ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ 6 ಮಹಿಳಾ ಠಾಣೆಗಳ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, 2454 ಹೊಸ ಹುದ್ದೆ ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಪೊಲೀಸ್ ಗೃಹ 2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಈ ವರ್ಷ 450 ಕೋಟಿ ಮೀಸಲಿರಿಸಲಾಗಿದೆ‌. ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು ಬಜೆಟ್​ನಲ್ಲಿ‌ 100 ಕೋಟಿ ಅನುದಾನ ನೀಡಿದೆ.

ಹಾಗೆಯೇ, ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಸೌಕರ್ಯಗಳ ಉನ್ನತಿಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಠಾಣೆ ಮತ್ತು ಕಚೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯಕ್ಕಾಗಿ 10 ಕೋಟಿ ಒದಗಿಸಿದೆ‌. ರಾಜ್ಯ ಅಪರಾಧ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಪರಾಧ ತನಿಖಾ ವಿಭಾಗ (CID), ಸೈಬರ್ ಅಪರಾಧ ಘಟಕ (CCD) ಮತ್ತು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳ ಘಟಕಗಳನ್ನು 10 ಕೋಟಿ ಉನ್ನತೀಕರಣಕ್ಕೆ ಕ್ರಮಕೈಗೊಂಡಿದೆ.

ಪೊಲೀಸ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ತರಬೇತಿ ಶಾಲೆಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಬಲವರ್ಧನೆಗೆ ಕ್ರಮ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ‌ ಸುಧಾರಿಸಲು ಪೊಲೀಸ್ ಇಲಾಖೆಗೆ ಡ್ರೋನ್ ಕ್ಯಾಮರಾ‌, ‌ ಕಣ್ಗಾವಲು ಕ್ಯಾಮರಾ ಹಾಗೂ ಬಾಡಿವೋರ್ನ್ ಕ್ಯಾಮರಾ ನೀಡಲು ಮುಂದಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ. ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ (STP) ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಿದೆ.

ಕಾರಾಗೃಹಗಳಲ್ಲಿನ ಬಂಧಿಗಳನ್ನು ವಿಡಿಯೋ ಕಾನ್ವರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 3 ಕೋಟಿ ರೂ.ಗಳ ಅನುದಾನ ಮೀಸಲು ಇಡಲಾಗಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರಿಸನ್ಸ್ ಅಕಾಡೆಮಿಯನ್ನು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭಗೊಳಿಸಲು ಅಗತ್ಯವಿರುವ ಸಿದ್ಧತೆಗಾಗಿ ಐದು ಕೋಟಿ ರೂ.ಗಳ ಅನುದಾನವನ್ನು ನೀಡಲಾಗುತ್ತಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಡಿ 2023-24ನೇ ಸಾಲಿನಲ್ಲಿ ಕೆ-ಸೇಫ್ ಯೋಜನೆಯಡಿ ಸೂಪ ಯಲಹಂಕ, ಭಟ್ಕಳ, ಅರಕೇರಾ, ನಾಗರಬಾವಿ, ಎನ್.ಆರ್.ಪುರ, ಶಿರಹಟ್ಟಿ, ಹೊನ್ನಾವರ, ನರಸಾಪುರ (ಕೋಲಾರ ಜಿಲ್ಲೆ) ಕೈಗಾರಿಕಾ ಪ್ರದೇಶ ಮತ್ತು ದೇವನಹಳ್ಳಿ ಏರೋಸ್ಪೇಸ್‌ ಕೈಗಾರಿಕಾ ಪ್ರದೇಶಗಳಲ್ಲಿ 3 ಬೇ ಅಗ್ನಿಶಾಮಕ ಠಾಣಾ (3 Bay fire stations) ಕಟ್ಟಡಗಳ ನಿರ್ಮಾಣವನ್ನು ಹಾಗೂ ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು 100 ಕೋಟಿ ರೂ. ಗಳ ವೆಚ್ಚದಲ್ಲಿ ಒದಗಿಸಲಾಗುವುದು.

ಇದನ್ನೂ ಓದಿ :Karnataka Budget: ಅಬಕಾರಿ ಸುಂಕ 20% ಹೆಚ್ಚಳ; ಮುಖ್ಯಾಂಶಗಳು..

ಅಗ್ನಿಶಮನ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಹೈ ಪ್ರೆಶರ್‌ ವಾಟರ್ ಮಿಸ್ಟ್ (High pressure water mist), ಫೋಮ್ ಕಾಂಪೌಂಡ್ (Foam compound) ಮತ್ತು (Air blower) ಮುಂತಾದ ಯಂತ್ರೋಪಕರಣಗಳನ್ನು ಸಂಗ್ರಹಿಸಲು ಪ್ರಸಕ್ತ ವರ್ಷ ಮೂರು ಕೋಟಿ ರೂ.ಗಳನ್ನು ಒದಗಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.

Last Updated : Jul 7, 2023, 2:21 PM IST

ABOUT THE AUTHOR

...view details