ಕರ್ನಾಟಕ

karnataka

ರಾಜ್ಯ ಪ್ರತಿ ಮನೆಗೂ ತಲುಪಲಿದೆ ಅಯೋಧ್ಯೆಯ ಮಂತ್ರಾಕ್ಷತೆ: ಆರ್​ಎಸ್​ಎಸ್

By ETV Bharat Karnataka Team

Published : Dec 27, 2023, 9:56 PM IST

ಅಯೋಧ್ಯೆಯ ಮಂತ್ರಾಕ್ಷತೆಯನ್ನು ಪ್ರತಿ ಮನೆಗೂ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಆರ್​ಎಸ್​ಎಸ್​ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದ್ದಾರೆ.

ಆರ್​ಎಸ್​ಎಸ್
ಆರ್​ಎಸ್​ಎಸ್

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ 500 ವರ್ಷಗಳ ಸುದೀರ್ಘ ಸಂಘರ್ಷದ ಫಲಶ್ರುತಿ. ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿರುವುದು ಸಂಭ್ರಮದ ವಿಚಾರ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರತಿ ಮನೆಗೂ ಅಯೋಧ್ಯೆಯಿಂದ ತಂದಿರುವ ಮಂತ್ರಾಕ್ಷತೆಯನ್ನು ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿದ್ದಾರೆ.

ಶ್ರೀರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್​ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭವ್ಯ ಶ್ರೀರಾಮ ಮಂದಿರದಲ್ಲಿ ಶೋಭಕೃತ್ ನಾಮ ಸಂವತ್ಸರ, ಪುಷ್ಯ ಮಾಸ, ಶುಕ್ಲಪಕ್ಷ, ದ್ವಾದಶಿಯಂದು ಶ್ರೀ ರಾಮಲಲ್ಲಾ (ಬಾಲರಾಮ) ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಕಳೆದ ಮೂರು ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಕೋಟ್ಯಂತರ ಶ್ರೀರಾಮ ಭಕ್ತರು ಸಮರ್ಪಣೆ ಮಾಡಿದ ಹಣದಿಂದಲೇ ಈ ಮಂದಿರ ನಿರ್ಮಾಣವಾಗಿದೆ. ಇದೀಗ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ರಾಷ್ಟ್ರದ ಪ್ರತಿ ಮನೆಗೂ ಅಯೋಧ್ಯೆಯಿಂದ ಮಂತ್ರಾಕ್ಷತೆಯನ್ನು ತಲುಪಿಸುವ ಯೋಜನೆಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರೂಪಿಸಿದ್ದು, ಈ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ತಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು

ವಿಶ್ವ ಹಿಂದೂ ಪರಿಷತ್ತು ಪರಿವಾರದ ಎಲ್ಲಾ ಸಂಘಟನೆಗಳು ಮತ್ತು ಶ್ರೀರಾಮ ಭಕ್ತರನ್ನು ಜೋಡಿಸಿಕೊಂಡು ಸಂಪರ್ಕ ಅಭಿಯಾನದ ಮೂಲಕ ಆಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು ತಲುಪಿಸುವ ಯೋಜನೆಯನ್ನು ಜನವರಿ 1ರಿಂದ 15ರವರೆಗೆ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವಂತಹ ಎಲ್ಲಾ ಮನೆಗಳಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.

ಪ್ರಾಣ ಪ್ರತಿಷ್ಠೆ ಆಗುವ ಸಮಯದಲ್ಲಿ ನಮ್ಮ ನಮ್ಮ ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿರುವ ಮಂದಿರಗಳಲ್ಲಿ ವಿಶೇಷ ಸತ್ಸಂಗ ಮತ್ತು ಭಜನೆಗಳನ್ನು ಆಯೋಜಿಸಲು ಕೋರಿಕೊಳ್ಳಲಾಗುತ್ತಿದೆ. ಆಸುಪಾಸಿನಲ್ಲಿರುವ ಎಲ್ಲಾ ಹಿಂದೂಗಳು ಈ ಸತ್ಸಂಗಗಳಲ್ಲಿ ಪಾಲ್ಗೊಳ್ಳುವಂತೆ, ಅಲ್ಲಿಯೇ ವ್ಯವಸ್ಥೆ ಮಾಡಿರುವ ಪರದೆಯಲ್ಲಿ ಆಯೋಧ್ಯೆಯ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಬೇಕು ಎಂದು ಕೋರಿದರು.

ಅಂದು ಸಂಜೆ ಸೂರ್ಯಾಸ್ತದ ನಂತರ ಪ್ರತಿಯೊಂದು ಮನೆಯ ಮುಂದೆ ಕನಿಷ್ಠ ಐದು ದೀಪಗಳನ್ನು ಬೆಳಗಿ, ಅಯೋಧ್ಯೆಯ ಕಡೆ ಮುಖಮಾಡಿ ಆರತಿ ಬೆಳಗಿ ದೀಪೋತ್ಸವದಲ್ಲಿ ಪಾಲ್ಗೊಳ್ಳುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪರವಾಗಿ ಸಮಸ್ತ ಹಿಂದೂ ಸಮಾಜಕ್ಕೆ ತಿಪ್ಪೇಸ್ವಾಮಿ ಕರೆ ಕೊಟ್ಟರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು

ರಾಮ ಮಂದಿರ ಪುನರ್‌ಸ್ಥಾಪನೆಯ ದಿನ ಕನಿಷ್ಠ ಐದು ದೀಪಗಳನ್ನು ಪ್ರತಿ ಮನೆಯಲ್ಲೂ ಬೆಳಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಈಗಾಗಲೇ ಕರೆ ನೀಡಿದೆ. ಭಾರತದಲ್ಲಿ ಸುಮಾರು 11 ಕೋಟಿ ಹಿಂದೂ ಕುಟುಂಬಗಳು ದೀಪವನ್ನು ಹಚ್ಚಿದರೆ 100 ಕೋಟಿಗೂ ಹೆಚ್ಚು ದೀಪಗಳು ಅಂದು ಏಕಕಾಲಕ್ಕೆ ಬೆಳಗಲಿವೆ. ಉಪಗ್ರಹದಿಂದ ಛಾಯಾಚಿತ್ರ ತೆಗೆದರೆ ಜ್ಯೋತಿರ್ಮಯವಾಗಿ ಕಾಣುತ್ತದೆ. 500 ವರ್ಷದಿಂದ ಇದಕ್ಕಾಗಿ ಹೋರಾಟ ಮಡಿದ ಎಲ್ಲರಿಗೂ ನಿಜವಾದ ಅರ್ಥದಲ್ಲಿ ನಮನ ಸಲ್ಲಿಸಿದಂತೆ ಆಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್‌ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ರಾಮ ಮಂದಿರಕ್ಕೆ ಹೈದರಾಬಾದ್‌ನಿಂದ ಬಾಗಿಲು: ಮುಖ್ಯದ್ವಾರ ಸೇರಿ 18 ಬಾಗಿಲುಗಳಿಗೆ ಚಿನ್ನದ ಲೇಪನ

ABOUT THE AUTHOR

...view details